ಮಡಿಕೇರಿ, ಮೇ ೨೦: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ ಎಂದು ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಎಂ.ಕೆ. ಆದರ್ಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿರಿಯ ಪತ್ರಕರ್ತ ಕೆ.ಬಿ. ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ರಿಪಬ್ಲಿಕ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ‘ನೀರಾವರಿ ಕಚೇರಿ ತುಂಬಾ ನೀರೇ ನೀರು’ ಎಂಬ ವರದಿಗೆ ಬಾಚರಣಿಯಂಡ ಅನು ಕಾರ್ಯಪ್ಪ ಪಡೆದುಕೊಂಡಿದ್ದಾರೆ.
ಕೋವರ್ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬವರ್ಗ ತಮ್ಮ ತಂದೆ ಬಿ.ವಿ.ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಚಿತ್ತಾರ ವಾಹಿನಿಯಲ್ಲಿ ಪ್ರಸಾರವಾದ ‘ಕೆಸರಿನಲ್ಲಿ ನಿಂತಿದ್ದ ಗುಡಿಸಲಿಗೆ ಮುಕ್ತಿ’ ಎಂಬ ವರದಿಗೆ ಸಂತೋಷ್ ರೈ ಪಡೆದುಕೊಂಡಿದ್ದಾರೆ.
ಎA.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ಎಂ. ನಾರಾಯಣ ಹಾಗೂ ತಾಯಿ ಎನ್. ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ‘ಮೀಸಲು ಅರಣ್ಯಕ್ಕೆ ಬೆಂಕಿ-ಉಸಿರು ಚೆಲ್ಲಿದ ಜೀವರಾಶಿ’ ಎಂಬ ವರದಿಗೆ ಹಿರಿಕರ ರವಿ ಪಡೆದುಕೊಂಡಿದ್ದಾರೆ.
ವರದಿಗಳ ತೀರ್ಪುಗಾರಿಕೆಯನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಆಂಗ್ಲ ವಿಭಾಗದ ಪ್ರಾಧ್ಯಾಪಕರಾದ ಡಾ. ನಯನ ಕಾಶ್ಯಪ್, ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕೆ. ಸೌಮ್ಯ, ರಾಜ್ಯ ಶಾಸ್ತç ವಿಭಾಗದ ಉಪನ್ಯಾಸಕ ಡಾ.ಶೃಂಗಾರ್ ನಿರ್ವಹಿಸಿದರು.
ಮೂರು ಪ್ರಶಸ್ತಿಯು ತಲಾ ೫ ಸಾವಿರ ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ. ಜೂ.೭ ರಂದು ಮಧ್ಯಾಹ್ನ ೧೧.೩೦ ಗಂಟೆಗೆ ಪತ್ರಿಕಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಎಂ.ಕೆ. ಆದರ್ಶ್ ತಿಳಿಸಿದ್ದಾರೆ.