ಮಡಿಕೇರಿ, ಮೇ ೨೦: ವಿಶ್ವ ಜೇನುನೊಣ ದಿನಾಚರಣೆ ಅಂಗವಾಗಿ ಮಂಡ್ಯ ಕೃಷಿ ವಿಶ್ವವಿದ್ಯಾಲಯ, ಮಡಿಕೇರಿ ವಿಸ್ತರಣಾ ಶಿಕ್ಷಣ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ರೇನ್ ಫಾರೆಸ್ಟ್ ಅಲೈನ್ಸ್ ಮತ್ತು ಬೈಫ್ ಸಬಲ ಯೋಜನೆಗಳ ಸಂಯುಕ್ತಾಶ್ರಯದಲ್ಲಿ ತಾ. ೨೩ ರಂದು ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್.ಎನ್. ಕೆಂಚರೆಡ್ಡಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೇನುನೊಣಗಳು ಪರಿಸರಕ್ಕೆ ಅಪಾರ ಕೊಡುಗೆ ನೀಡುತ್ತಿದೆ. ಕೃಷಿಗೂ ಪೂರಕವಾಗಿ ಇಳುವರಿ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಜೇನು ಸಂತತಿ ಕ್ಷೀಣಿಸುತ್ತಿದೆ. ಜೇನು ಕೃಷಿ ಪುನಶ್ಚೇತನ ಹಾಗೂ ಜಾಗೃತಿ ಮೂಡಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಕಾರ್ಯಕ್ರಮಕ್ಕೆ ಕೃಷಿ ವಿವಿ ಕುಲಪತಿ ಡಾ. ಕೆ.ಸಿ. ನಾರಾಯಣ ಸ್ವಾಮಿ,ಕೃಷಿ ಸಚಿವರ ಕರ್ತವ್ಯ ಅಧಿಕಾರಿ ಡಾ. ಎ.ಬಿ. ಪಾಟೀಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ. ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಡೀನ್ ಡಾ. ಜಿ.ಎಂ. ದೇವಗಿರಿ ಗೌರವ ಉಪಸ್ಥಿತಿ ಇರಲಿದೆ ಎಂದರು.
ಜೇನುನೊಣಗಳ ಪಾರಿಸಾರಿಕ ಮಹತ್ವ, ಪರಾಗಸ್ಪರ್ಶ ಮತ್ತು ಬೆಳೆ ಇಳುವರಿಯಲ್ಲಿ ಜೇನುಗಳ ಪಾತ್ರ, ಮಾನವರ ಆರೋಗ್ಯ ರಕ್ಷಣೆಗೆ ಜೇನು ಕೃಷಿ, ಜೇನು ಕುಟುಂಬ ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳು ಮತ್ತು ಅವುಗಳ ನಿರ್ವಹಣೆ ಬಗ್ಗೆ ವಿಸ್ತೃತ ಮಾಹಿತಿಯನ್ನು ನೀಡಲಾಗುವುದು. ಇದೇ ಸಂದರ್ಭ ಜಿಲ್ಲೆಯ ಪ್ರಗತಿಪರ ಜೇನು ಕೃಷಿಕರನ್ನು ಸನ್ಮಾನಿಸಲಾಗುವುದು. ಜೇನು ತುಪ್ಪಗಳ ಪ್ರದರ್ಶನದೊಂದಿಗೆ ಪರಿಶುದ್ಧತೆ ಪರೀಕ್ಷಿಸುವ ಕುರಿತು ಪ್ರಾತ್ಯಾಕ್ಷಿತೆ ನಡೆಯಲಿದೆ ಎಂದು ವಿವರಿಸಿದರು
ಗೋಷ್ಠಿಯಲ್ಲಿ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕಾ ತಜ್ಞ ಡಾ. ಹೇಮಂತ್ ಕುಮಾರ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಕ್ಷೇತ್ರ ಅಧೀಕ್ಷಕ ಡಾ. ಪ್ರಶಾಂತ್ ಹಾಜರಿದ್ದರು.