ಕುಶಾಲನಗರ, ಮೇ ೧೯: ನಕಲಿ ಜಾತಿ ಪ್ರಮಾಣ ಪತ್ರವನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ವಜಾ ಮಾಡದೆ ಕುಶಾಲನಗರ ತಹಶೀಲ್ದಾರ್ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿ ಸಮುದಾಯ ಸಂಘಟನೆಗಳ ಒಕ್ಕೂಟದಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು. ಧರಣಿ ನಡೆಸಿದ ಆದಿವಾಸಿ ಜನಾಂಗದವರು ನ್ಯಾಯಕ್ಕೆ ಒತ್ತಾಯಿಸಿ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಾಜ್ಯಾಧ್ಯಕ್ಷ ಎಂ.ಕೃಷ್ಣಯ್ಯ ಜಿಲ್ಲಾ ಪಂಚಾಯತ್ ಹಿಂದಿನ ಅಧ್ಯಕ್ಷರಾಗಿದ್ದ ದಿ.ಎಸ್.ಎನ್.ರಾಜಾ ರಾವ್ ಅವರ ಮಕ್ಕಳು ನಕಲಿ ಮಾಡಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ಪಡೆದಿದ್ದಾರೆ. ಇದನ್ನು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳ ಆದೇಶವನ್ನು ತಹಶೀಲ್ದಾರ್ ಪಾಲಿಸದೆ ಉಲ್ಲಂಘಿಸಿದ್ದಾರೆ, ವಿಚಾರಿಸಿದರೆ ನ್ಯಾಯಾಲಯದಿಂದ ತಡೆ ಇದೆ ಎನ್ನುವ ಸಬೂಬು ನೀಡುತ್ತಿದ್ದಾರೆ.

ಅಧಿಕಾರಿಗಳು ಇದಕ್ಕೆ ಸೂಕ್ತ ದಾಖಲೆಗಳನ್ನು ಇದುವರೆಗೆ ಒದಗಿಸಿಲ್ಲ, ಸರಕಾರದ ವಕೀಲರು ಅಥವಾ ಹೈಕೋರ್ಟ್ ವಕೀಲರ ಅಭಿಪ್ರಾಯ, ಕಾನೂನು ಸಲಹೆ ಪಡೆಯದೆ ತಹಶೀಲ್ದಾರ್ ಖಾಸಗಿ ವಕೀಲರ ಅಭಿಪ್ರಾಯ ಬಳಸುವುದು ಪಕ್ಷಪಾತ ಧೋರಣೆ, ಆಡಳಿತಾತ್ಮಕ ನಿಯಮ ಉಲ್ಲಂಘನೆ ಮತ್ತು ನ್ಯಾಯದ ಅವಹೇಳನವಾಗಿದೆ ಎಂದು ಆರೋಪಿಸಿದರು. ನಕಲಿ ಜಾತಿ ಪ್ರಮಾಣ ಪಡೆಯುವ ಮೂಲಕ ತಮ್ಮ ಸಮುದಾಯಕ್ಕೆ ದೊರೆಯಬೇಕಾದ ಉನ್ನತ ಹುದ್ದೆ ಅವಕಾಶಗಳು ಅಕ್ರಮವಾಗಿ ಕಬಳಿಸಿರುವುದು ನಮಗೆ ಮಾಡಿದ ಅನ್ಯಾಯವಾಗಿದೆ ಎಂದು ಆರೋಪಿಸಿದರು.

ನ್ಯಾಯಾಲಯದ ತಡೆ ಇದ್ದಲ್ಲಿ ಆದೇಶ ಪ್ರತಿ ನಮಗೆ ಒದಗಿಸಿದಲ್ಲಿ ಈಗಲೆ ಧರಣಿ ಕೈಬಿಡುತ್ತೇವೆ ಎಂದ ಅವರು; ನಮ್ಮ ಬೇಡಿಕೆ ಈಡೇರುವ ತನಕ ಅಮರಣಾಂತ ಉಪವಾಸ ಹೋರಾಟ ಮುಂದುವರೆಸುವುದಾಗಿ ಹಾಗೂ ಎಸ್.ಟಿ.ಆಯೋಗಕ್ಕೆ ಅಧಿಕಾರಿ ವಿರುದ್ದ ದೂರು ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭ ತಾಲೂಕು ತಹಶೀಲ್ದಾರ್ ಕಿರಣ್ ಜಿ ಗೌರಯ್ಯ ಅವರು ಅಗತ್ಯ ದಾಖಲೆಗಳನ್ನು ನಿಗದಿತ ಅವಧಿಯಲ್ಲಿ ನೀಡುವ ಭರವಸೆ ನೀಡಿದ ಮೇರೆಗೆ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು. ಸ್ಥಳಕ್ಕೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿದರು. ಈ ಸಂದರ್ಭ ಆದಿವಾಸಿ ಮುಖಂಡರಾದ ಆರ್.ಕೆ.ಚಂದ್ರು, ಜೆ.ಟಿ.ಕಾಳಿಂಗ, ಬಿ.ಬಿ.ಮಹೇಶ, ನಂಜಯ್ಯ, ಬಸವಣ್ಣ, ವಿಶ್ವ, ಡಿ.ಆರ್. ಪ್ರಭಾಕರ್ ಮತ್ತಿತರರು ಇದ್ದರು.