ವೀರಾಜಪೇಟೆ, ಮೇ ೧೮: ಸಮೀಪದ ಚೆಂಬೆಬೆಳ್ಳೂರಿನಲ್ಲಿ ಕೆರೆಗೆ ಬಿದ್ದು ನರಳಾಡಿದ ಕಾಡಾನೆಯನ್ನು ಅರಣ್ಯ ಇಲಾಖೆ ರಕ್ಷಿಸಿ ಕಾಡಿಗೆ ಅಟ್ಟಿದ ಘಟನೆ ನಡೆದಿದೆ.
ಚಂಬೆಬೆಳ್ಳೂರು ಗ್ರಾಮದ ತೋಟಕ್ಕೆ ಭಾನುವಾರ ರಾತ್ರಿ ಕಾಡಾನೆ ಲಗ್ಗೆ ಇಟ್ಟ ಸಂದರ್ಭದಲ್ಲಿ ಕೆರೆಗೆ ಜಾರಿ ಬಿದ್ದಿದೆ.
ಮಾಲೀಕರು ತೋಟಕ್ಕೆ ತೆರಳಿದ ವೇಳೆ ಕಾಡಾನೆ ಕೆರೆಯಲ್ಲಿ ಬಿದ್ದು ನರಳಾಡುತ್ತಿದ್ದುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಬಳಿಕ ಜೆಸಿಬಿಯ ಮೂಲಕ ಕಾಡಾನೆಗೆ ಕೆರೆಯಿಂದ ಮೇಲೆ ಬರಲು ದಾರಿ ಮಾಡಿಕೊಡಲಾಯಿತು. ನಂತರ ಕಾಡಾನೆ ಕೆರೆಯಿಂದ ಮೇಲೆ ಬಂದು ತೋಟದತ್ತ ಸಾಗಿತು. ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಕಾಡಿಗೆ ಅಟ್ಟಿದ್ದಾರೆ. ಈ ಸಂದರ್ಭ ತೋಟದ ಮಾಲೀಕರು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ, ಗ್ರಾಮಸ್ಥರು ಇದ್ದರು.