ಶನಿವಾರಸಂತೆ, ಮೇ ೧೮: ಪಟ್ಟಣದ ಗುಂಡೂರಾವ್ ಬಡಾವಣೆಯ ಬಾಪೂಜಿ ವಿದ್ಯಾಸಂಸ್ಥೆ ಹತ್ತಿರದ ಶ್ರೀವೀರ ಪಂಚಮ ಶನೇಶ್ಚರ ಸ್ವಾಮಿ ದೇವಸ್ಥಾನದಲ್ಲಿ ಸ್ವಾಮಿಯ ೧೧ನೇ ವರ್ಷದ ಜಾತ್ರಾ ಮಹೋತ್ಸವ ಎರಡು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ನಡೆಯಿತು. ಸಾವಿರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.
ಬೆಳಿಗ್ಗೆ ಗಂಗಾ ಸ್ನಾನ, ಪೂಜೆ ಸಲ್ಲಿಸಿ ಶ್ರೀವೀರ ಪಂಚಮ ಶನೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಪುರೋಹಿತ ಮಂಜುನಾಥ್ ಶರ್ಮ ಅವರ ನೇತೃತ್ವದಲ್ಲಿ ಶನೇಶ್ವರ ಹೋಮ, ದುರ್ಗಾ ಹೋಮ, ಗಾಯತ್ರಿ ಹೋಮ, ಗಣ ಹೋಮ ನಡೆಯಿತು.
ನಂತರ ದೇವಸ್ಥಾನ ಪ್ರಧಾನ ಅರ್ಚಕ ಲೋಕೇಶ್ ೯ ಅಡಿ ಎತ್ತರದ ಶನೇಶ್ವರ ಸ್ವಾಮಿಯ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸಿದರು. ದೃಷ್ಠಿ ಪೂಜೆ, ಕಳಸ ಸ್ಥಾಪನೆ, ಶನೇಶ್ವರ ಹೋಮ ನೆರವೇರಿಸಿದ ಬಳಿಕ ಭಕ್ತಾದಿಗಳಿಗೆ ತೀರ್ಥ-ಪ್ರಸಾದ ವಿನಿಯೋಗವಾಯಿತು. ನಂತರ ದೇವಸ್ಥಾನದ ಮುಂದೆ ಅಡ್ಡೆ ಕುಣಿಸುವಿಕೆ ನಡೆಯಿತು.
ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಶನೇಶ್ವರ ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ತಹಶೀಲ್ದಾರ್ ಕೃಷ್ಣಮೂರ್ತಿ, ಮತ್ತಿತರ ದಾನಿಗಳು ಪಾಲ್ಗೊಂಡಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸಂಜೆ ಶ್ರೀದುರ್ಗಾಪರಮೇಶ್ವರಿ ಕುರುಹು ಶ್ರೀಚಕ್ರ ಸ್ಥಾಪನೆ ನಡೆದು ದೇವತೆ ಅಡ್ಡೆಯನ್ನು ಕುಣಿಸಲಾಯಿತು. ಶ್ರೀಶನೇಶ್ಚರ ಉತ್ಸವ ಮೂರ್ತಿ ಹಾಗೂ ಶ್ರೀ ದುರ್ಗಾಪರಮೇಶ್ವರಿ ಶಕ್ತಿಪೀಠವನ್ನು ಅಲಂಕೃತ ವಾಹನದಲ್ಲಿ ಪ್ರತಿಷ್ಠಾಪಿಸಿ ತರಿಕೇರೆ ದುಗ್ಲಾಪುರದ ಮಂಜುಶ್ರೀ ಮಹಿಳಾ ವೀರಗಾಸೆ, ಶ್ರೀಕಾಳಿ ನೃತ್ಯ, ಶಿವರುದ್ರ ಅಘೋರಿ ನೃತ್ಯ ವಾದ್ಯಗೋಷ್ಠಿಯ ಮೆರವಣಿಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಬನ್ನಿ ಮಂಟಪಕ್ಕೆ ತೆರಳಿ ಪೂಜೆ ಸಲ್ಲಿಸಿ, ಮಂಡಳ ಪೂಜೆ ಹಾಗೂ ಸಿಡಿಮದ್ದಿನ ಪ್ರದರ್ಶನ ನಡೆದು, ಬಳಿಕ ಬೈಪಾಸ್ ರಸ್ತೆಯ ಮುಖಾಂತರ ಗುಂಡೂರಾವ್ ಬಡಾವಣೆಗಾಗಿ ದೇವಸ್ಥಾನ ಸನ್ನಿಧಾನಕ್ಕೆ ತೆರಳಿತು. ರಾತ್ರಿ ಬೆಂಗಳೂರು ಗ್ರಾಮಂತರದ ಶ್ರೀಛಾಯನಂದನ ಕಲಾ ತಂಡದವರಿAದ ಶ್ರೀ ರಾಜ ವಿಕ್ರಮಾದಿತ್ಯ(ಶಕಟಾದ್ರಿ ಶನಿಪ್ರಭಾವ) ಹರಿಕಥೆ ಏರ್ಪಡಿಸಲಾಗಿತ್ತು. ದೇವಸ್ಥಾನ ಪ್ರಧಾನ ಅರ್ಚಕ ಲೋಕೇಶ್, ಆಡಳಿತ ಮಂಡಳಿ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷರಾದ ಶಿವರಾಜ್, ಉಮೇಶ್, ಖಜಾಂಚಿ ರೋಹಿತ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.