ಮಡಿಕೇರಿ, ಮೇ ೧೮: ವಿದ್ಯಾರ್ಥಿ ಜೀವನದಲ್ಲಿ ಪುಸ್ತಕಗಳು ಕೇವಲ ಪಠ್ಯದ ಭಾಗವಾಗಿರದೆ, ಅವರ ಉತ್ತಮ ಸಹಚರವಾಗಿರಬೇಕು. ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ ಬಿ. ನಂಜುAಡ ಸ್ವಾಮಿ ಅವರು ನುಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ೨೦೨೫-೨೬ನೇ ಸಾಲಿನ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣ ಮುಗಿದ ನಂತರ ವಿದ್ಯಾರ್ಥಿಗಳಲ್ಲಿ ಮುಂದೆ ಏನು ಎಂಬ ಭಾವನೆ ಮೂಡುತ್ತದೆ. ಜಾತಿಗಿಂತ ಮಾನವೀಯ ಮೌಲ್ಯಗಳು ದೊಡ್ಡದು ಎಂಬ ಸಂದೇಶವನ್ನು ಬುದ್ಧ, ಬಸವ ಅಂಬೇಡ್ಕರ್ ಸೇರಿದಂತೆ ಮಹಾನ್ ವ್ಯಕ್ತಿಗಳು ಸಾರಿದ್ದಾರೆ. ಇಂತಹ ಗುಣಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು. ನಾವು ಸೋತಾಗ ಅಥವಾ ದಾರಿ ಕಾಣದಿದ್ದಾಗ ಧೈರ್ಯ ತುಂಬಲು ಸಕಾರಾತ್ಮಕ ಆಲೋಚನೆಗಳುಳ್ಳ ವ್ಯಕ್ತಿಗಳು ನಮ್ಮೊಂದಿಗೆ ಇರಬೇಕು. ಅದು ಜೀವನದ ನೆಮ್ಮದಿ ಮತ್ತು ಸಮಾಜದ ಸ್ವಾಸ್ಥö್ಯಕ್ಕೆ ಅತ್ಯಂತ ಅವಶ್ಯಕವಾಗಿದೆ. ಈ ದಿಸೆಯಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳುವುದರೊಂದಿಗೆ ಸಾರ್ಥಕವಾದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಧ್ಯಕ್ಷರಾದ ನವೀನ್ ಅಂಬೇಕಲ್ಲು ಅವರು ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಸ್ತುತ ದಿನಗಳಲ್ಲಿ ಉತ್ತಮವಾಗಿ ನಡೆಯುತ್ತಿದ್ದು, ಹಲವು ವಿಶೇಷತೆಯನ್ನು ಹೊಂದಿದೆ. ಶಿಕ್ಷಣದೊಂದಿಗೆ ಸಾಂಸ್ಕೃತಿಕವಾಗಿ, ಇತರ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದೆ. ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟ ವಿತರಿಸುವ ಮೂಲಕ ಇತರ ಕಾಲೇಜುಗಳಿಗೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ ಪಿ.ಕೆ ವೆಂಕಟೇಶ ಪ್ರಸನ್ನ ಅವರು, ಕೇವಲ ಖಾಸಗಿ ಕಾಲೇಜುಗಳ ವೈಭವವನ್ನು ನೋಡಿ, ಸರ್ಕಾರಿ ಕಾಲೇಜುಗಳನ್ನು ಕೀಳಾಗಿ ಕಾಣುವ ಮನಸ್ಥಿತಿ ಬದಲಾಗಬೇಕಿದೆ. ವಿದ್ಯಾರ್ಥಿಗಳು ಗಟ್ಟಿ ಮನಸ್ಸು ಮಾಡಿದರೆ ಉತ್ತಮ ಸಾಧನೆ ಮಾಡಬಹುದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿ ಜೀವನ ಬೊಗಸೆಯಲ್ಲಿ ಹಿಡಿದಿಟ್ಟ ನೀರಿನ ಹಾಗೆ, ವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದರು.

ಪುಸ್ತುತ ದಿನಗಳಲ್ಲಿ ದಾನಿಗಳ ಸಹಕಾರದಿಂದ ಕಾಲೇಜು ಮತ್ತಷ್ಟು ಪ್ರಗತಿ ಸಾಧಿಸುತ್ತಿದ್ದು, ಕಾಲೇಜಿಗೆ ಅಗತ್ಯವಿರುವ ಕಂಪ್ಯೂಟರ್, ನೀರಿನ ಫಿಲ್ಟರ್, ಹೊಲಿಗೆ ಯಂತ್ರ ಸೇರಿದಂತೆ ಬಿಸಿ ಊಟವನ್ನು ವಿತರಿಸುತ್ತಿದ್ದು, ಇದನ್ನು ಕಾಲೇಜು ಸದಾ ಸ್ಮರಿಸುತ್ತದೆ ಎಂದು ಹೇಳಿದರು.

ಉದ್ಯಮಿ ಮಾರ್ಟಿನ್, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ.ಚೈತ್ರ ಎಸ್.ಜಿ, ಕಾಲೇಜು ಅಭಿವೃದ್ಧಿ ಸಮಿತಿ ನೂರುಜಾನ್ ಬೇಗಂ, ಉಪನ್ಯಾಸಕರಾದ ಡಾ.ಅನುಪಮ ಸಭಾಪತಿ, ಟಿ.ಎಂ ಸುಧಾಕರ್, ಬಿ.ಎಸ್ ಧನರಾಜ್ ಕುಮಾರ್, ಎ.ಎಮ್ ಅನುರಾಧ, ಡಾ.ವಿ ಧೀಕ್ಷಿತ, ಎಂ.ಬಿ ಆನಂದ್, ದೈಹಿಕ ಶಿಕ್ಷಣ ಶಿಕ್ಷಕಿ ಡಾ. ತ್ರಿಶೋನಿ, ಕಾಲೇಜು ವಿದ್ಯಾರ್ಥಿ ನಾಯಕರು, ಕಾಲೇಜಿನ ಕಚೇರಿ ಮುಖ್ಯಸ್ಥರು ಇದ್ದರು.

ಉಪನ್ಯಾಸಕರಾದ ಕಾವ್ಯ ನಿರೂಪಿಸಿದರು, ನವೀನ್ ಕುಮಾರ್ ಸ್ವಾಗತಿಸಿದರು. ಕ್ರೀಡಾ ಸಾಧನೆ, ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಉಪನ್ಯಾಸಕಿ ಸುಪ್ರಿಯ ಇ ಅವರು ಬರೆದ ‘ಸಾಂಸ್ಥಿಕ ನಡವಳಿಕೆಯ ಮೂಲಭೂತ ಅಂಶಗಳು’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.