ಗೋಣಿಕೊಪ್ಪಲು, ಮೇ ೧೮ : ಮಲಬಾರ್ ಮುಸ್ಲಿಂ ಅಸೋಸಿಯೇಷನ್ ಹಾಗೂ ಪೊಳಕರಾಂಡಿ ಕುಟುಂಬದ ಸಹಯೋಗದಲ್ಲಿ ಪೊನ್ನಂಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ೨ ದಿನಗಳ ಕಾಲ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್.ಅರುಣ್ ಮಾಚಯ್ಯ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ಗೆ ಒಳಪಡುವ ೧೨ ಮುಸ್ಲಿಂ ಕುಟುಂಬದ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ನ ಅಧ್ಯಕ್ಷ ಕೆ.ಎಂ. ಫೈಜಲ್ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿ.ಎಸ್.ಅರುಣ್ ಮಾಚಯ್ಯ, ಕರ್ನಾಟಕ ಸರ್ಕಾರ ಕ್ರೀಡೆಗೆ ಹೆಚ್ಚಿನ ಉತ್ತೇಜನ ನೀಡುತ್ತಿದ್ದು, ಯುವಕ, ಯುವತಿಯರು ಇದರ ಪ್ರಯೋಜನ ಪಡೆಯುವಂತಾಗಬೇಕು ಎಂದರು.

ವೇದಿಕೆಯಲ್ಲಿ ಪೊಳಕರಾಂಡಿ ಕುಟುಂಬದ ಅಧ್ಯಕ್ಷ ಪಿ.ಎ. ಮುಸ್ತಫಾ, ಕಾರ್ಯದರ್ಶಿ ಪಿ.ಎ.ಉಮ್ಮರ್, ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ನ ಗೌರವ ಅಧ್ಯಕ್ಷ ಪಿ.ಎ. ಅಜೀಜ್, ಉಪಾಧ್ಯಕ್ಷ ಎಂ.ಎ. ಅಶ್ರಫ್, ಕಾರ್ಯದರ್ಶಿ ಸಿ.ಎ. ಜುನೈದ್ ,ಖಜಾಂಚಿ ಸಿ.ಎ. ಸಜೀರ್ ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಂಗವಾಗಿ ಪೊಳಕರಾಂಡಿ ಕುಟುಂಬದ ಹಾಗೂ ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ನ ಗಣ್ಯರನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.

ಮಲಬಾರ್ ಮುಸ್ಲಿಂ ಅಸೋಸಿಯೇಷನ್‌ನ ಕಾರ್ಯದರ್ಶಿ ಜುನೈದ್ ಸ್ವಾಗತಿಸಿ ವಂದಿಸಿದರು. ವೀಕ್ಷಣೆ ವಿವರಣೆಗಾರರಾಗಿ ಸಫೀರ್, ತೀರ್ಪುಗಾರರಾಗಿ ಟಿ.ಆರ್.ಕಿರಣ್ ಹಾಗೂ ಸುಹೇಲ್ ಕಾರ್ಯ ನಿರ್ವಹಿಸಿದರು.