ಮುಳ್ಳೂರು, ಮೇ ೧೭: ಗ್ರಾಮೀಣ ಭಾಗದಲ್ಲಿ ದೇವಸ್ಥಾನಗಳು ನಿರ್ಮಾಣವಾಗುವುದರಿಂದ ಮುಂದಿನ ಪೀಳಿಗೆಯ ಧಾರ್ಮಿಕ ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ ಎಂದು ಅಂಕನಹಳ್ಳಿ ತಪೋವನ ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ ಹೇಳಿದರು. ಸಮೀಪದ ಶುಂಠಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ವೀರಭದ್ರರೇಶ್ವರ ದೇವಸ್ಥಾನದ ಪ್ರತಿಷ್ಠಾಪನೆಯ ಪೂಜಾ ಮಹೋತ್ಸವ ಮತ್ತು ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದಿನ ಪೀಳಿಗೆ ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲೇ ಮುಳುಗುತ್ತಿದ್ದು, ಇಂತಹ ಸಂದರ್ಭ ದೇವಾಲಯಗಳ ನಿರ್ಮಾಣ, ದೇವಸ್ಥಾನಗಳ ಪುನರ್ ಪ್ರತಿಷ್ಠಾಪನೆಗಳಂತಹ ಧಾರ್ಮಿಕ ಕಾರ್ಯಗಳು ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಆದಿಚುಂಚನಗಿರಿ ಹಾಸನ ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ದಾನಿಗಳ ಸಹಕಾರದಿಂದ ಶ್ರೀ ಸ್ವಾಮಿಯ ದೇವಸ್ಥಾನವನ್ನು ನಿರ್ಮಿಸಿ ಸಮಾಜಕ್ಕೆ ಲೋಕಾರ್ಪಣೆಗೊಳಿಸಿರುವುದು ಶ್ಲಾಘನೀಯ ಎಂದರು.

ಶುAಠಿ ಭರತ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮುತ್ತಣ್ಣ, ಕಳಲೆ ಕೃಷ್ಣೇಗೌಡ, ಹಣಕೋಡು ತಮ್ಮಯ್ಯ, ಶುಂಠಿ ಮುದ್ದಪ್ಪ, ಮಾಜಿ ಜಿ.ಪಂ.ಅಧ್ಯಕ್ಷ ವಿಜಯ್, ಹಣಕೋಡು ಸುರೇಶ್, ಅಬಕಾರಿ ಇಲಾಖೆ ಡಿವೈಎಸ್‌ಪಿ ಚೈತ್ರ ಮುಂತಾದವರು ಇದ್ದರು. ದೇವಸ್ಥಾನ ಲೋಕಾರ್ಪಣೆ ಅಂಗವಾಗಿ ವಿವಿಧ ಹೋಮ, ಪೂಜಾ ಕೈಂಕರ್ಯಗಳು ನಡೆದವು.