ಮಡಿಕೇರಿ, ಮೇ ೧೬: ಮಡಿಕೇರಿ ಸ್ನೇಹಾಶ್ರಯ ಹಾಗೂ ಓ.ಡಿ.ಪಿ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ಲಯನ್ಸ್ ಚೈತನ್ಯ ನೆಟ್‌ವರ್ಕ್ ಸಂಸ್ಥೆ, ಸಹಯೋಗದೊಂದಿಗೆ ವಿಶೇಷ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಓ.ಡಿ.ಪಿ ಮೈಸೂರು ನಿರ್ದೇಶಕರಾದ ಫಾದರ್ ಟೆನ್ನಿ ಕುರಿಯನ್ ವಹಿಸಿ ಮಾತನಾಡಿ, ಮನುಷ್ಯನಲ್ಲಿ ಎಲ್ಲಾ ರೀತಿಯ ಕುಂದುಕೊರತೆಗಳಿವೆ. ಅವುಗಳನ್ನು ಸಮಸ್ಯೆಯಾಗಿ ಪರಿಗಣಿಸದೆ ನಗು ನಗುತಾ ಬಗೆಹರಿಸುವಂತಾಗಬೇಕೆAದರು. ಮಕ್ಕಳು ಪೌಷ್ಟಿಕ ಆಹಾರ ಸೇವಿಸಬೇಕು. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದರು. ಓ.ಡಿ.ಪಿ ಸಂಸ್ಥೆಯು ಸ್ನೇಹಶ್ರಯ ಸಂಸ್ಥೆ ಸಹಕಾರದಲ್ಲಿ ನೋಂದಾಯಿತ ೩೦ ವಿಶೇಷಚೇತನ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಹಾಗೂ ಇತರ ರೀತಿಗಳಲ್ಲಿ ಸಹಾಯ ಮಾಡುತ್ತಿದೆ ಎಂದು ಈ ಸಂದರ್ಭ ಮಾಹಿತಿ ನೀಡಿದರು.
ಏಡ್ಸ್ ನಿಯಂತ್ರಣ ಘಟಕದ ಜಿಲ್ಲಾ ಮೇಲ್ವಿಚಾರಕರಾದ ಸುನಿತ ಅವರು ಮಾತನಾಡಿ, ವಿಶೇಷ ಮಕ್ಕಳು ಮತ್ತು ಪೋಷಕರಿಗೆ ಆಪ್ತ ಸಮಾಲೋಚನೆ, ಆರೈಕೆ, ಬೆಂಬಲ, ಪೌಷ್ಟಿಕ ಆಹಾರ, ಶಿಕ್ಷಣ ಇತ್ಯಾದಿ ವಿಷಯಗಳಲ್ಲಿ ಸ್ನೇಹಾಶ್ರಯ ಸಮಿತಿಯಿಂದ ಸಹಾಯ ಮಾಡಲಾಗುತ್ತದೆ ಎಂದರು. ಸ್ನೇಹಾಶ್ರಯ ಸಮಿತಿ ಕಾರ್ಯಾಧ್ಯಕ್ಷರಾದ ಕೆ.ಟಿ ಬೇಬಿ ಮ್ಯಾಥಿವ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಓ.ಡಿ.ಪಿ ಮೈಸೂರು ಯೋಜನಾ ಸಂಯೋಜಕರಾದ ಮೋಲಿ, ಸ್ನೇಹಾಶ್ರಯ ಸಮಿತಿ ಖಜಾಂಚಿ ಕನ್ನಂಡ ಕವಿತ, ಓ.ಡಿ.ಪಿ ಜಿಲ್ಲಾ ವಲಯ ಸಂಯೋಜಕಿ ಜಾಯ್ಸ್ ಮೆನೆಜೇಸ್ ಹಾಗೂ ಇತರ ಪ್ರಮುಖರು ಹಾಜರಿದ್ದರು.