ೆÆÃಮವಾರಪೇಟೆ, ಮೇ ೧೫: ನಿವೇಶನ ನೀಡುವಂತೆ ಒತ್ತಾಯಿಸಿ, ಕರ್ನಾಟಕ ಬಹುಜನ ಕಾರ್ಮಿಕ ಸಂಘಟನೆಯ ನೇತೃತ್ವದಲ್ಲಿ ಕುಂಬೂರು ಗ್ರಾಮದ ಪೈಸಾರಿ ಜಾಗದಲ್ಲಿ ವಸತಿರಹಿತ ಕಾರ್ಮಿಕರು ನಡೆಸುತ್ತಿರುವ ಆಹೋರಾತ್ರಿ ಧರಣಿ ೧೫ನೇ ದಿನಕ್ಕೆ ಕಾಲಿಟ್ಟಿದೆ.

ಈ ವಿಷಯದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಭೋಸ್‌ರಾಜ್ ಅವರಿಗೆ, ಈ ಭಾಗದಲ್ಲಿರುವ ಸುಮಾರು ೬ ಸಾವಿರ ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಮನವಿ ಮಾಡಲಾಗಿತ್ತು. ಸಚಿವರಿಂದ ಶುಕ್ರವಾರ ಉತ್ತರ ಬಂದಿದ್ದು, ಸೂಕ್ತ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದ್ದಾರೆ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಅಯಾ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳ ಗುರುತಿಸಿ, ಸ್ಥಳೀಯ ನಿವೇಶನ ರಹಿತರಿಗೆ ನೀಡಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಸುದೀಪ್ ತಿಳಿಸಿದರು.

ನಾವು ಸುಂಟಿಕೊಪ್ಪ, ಮಾದಾಪುರ, ಕುಂಬೂರು ಸೇರಿದಂತೆ ಹಲವು ಗ್ರಾಮಗಳಲ್ಲಿ ಸ್ಥಳ ಗುರುತಿಸಿ ನಿವೇಶನ ನೀಡುವಂತೆ ಸಚಿವರಲ್ಲಿ ಮನವಿ ಮಾಡಿದ್ದೆವು. ಅದರಂತೆ ನಮ್ಮ ಮನವಿಗೆ ಸ್ಪಂದಿಸಿರುವ ಸಚಿವರು ಸ್ಥಳ ಗುರುತಿಸುವಂತೆ ಸೂಚಿಸಿದ್ದಾರೆ. ನಮಗೆ ನಿವೇಶನ ನೀಡುವ ತನಕ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಮೊಣ್ಣಪ್ಪ ತಿಳಿಸಿದರು.