ಕಣಿವೆ, ಮೇ.೧೫: ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವುದು, ಈ ನಾಡಿನ ನೆಲ, ಜಲ ಸಂಸ್ಕೃತಿ ಉಪಾಸನೆ ಈ ನಾಡಿನ ಪ್ರತಿಯೊಬ್ಬರ ಉಸಿರಾಗಬೇಕೆಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಅಶೋಕ್ ಸಂಗಪ್ಪ ಆಲೂರ ಕರೆಕೊಟ್ಟರು.
ಕುಶಾಲನಗರದ ಅನುಗ್ರಹ ಪದವಿ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ವತಿಯಿಂದ ದ್ವಿತೀಯ ಪಿಯುಸಿಯ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಕನ್ನಡ ಭಾಷೆಯನ್ನು ಮಾತನಾಡುವುದು ಹೆಮ್ಮೆಯ ಸಂಗತಿಯಾಗಬೇಕು. ಇತರೆ ಭಾಷೆಗಳನ್ನು ಗೌರವಿಸಿ ನಮ್ಮ ತಾಯಿ ಭಾಷೆಯನ್ನು ಪೂಜಿಸಬೇಕು. ಕನ್ನಡ ಈ ನೆಲದ ಅಸ್ಮಿತೆ ಹಾಗೂ ಸಂಸ್ಕೃತಿ. ಕನ್ನಡದಲ್ಲಿ ಓದಿ ಪರಿಪೂರ್ಣವಾದ ಜೀವನ ನಡೆಸಿದ ಮಹನೀಯರು ನಮಗೆ ಆದರ್ಶರಾಗಬೇಕು ಎಂದರು.
ಅನುಗ್ರಹ ಕಾಲೇಜಿನ ಧರ್ಮದರ್ಶಿ ಆರ್.ಕೆ.ನಾಗೇಂದ್ರ ಮಾತನಾಡಿ, ಕನ್ನಡ ಭಾಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೂಕ್ತ ಧನಸಹಾಯದೊಂದಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕಿದೆ. ಸಾಧನೆ ತೋರಿದ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಆ ಮಕ್ಕಳನ್ನು ಮೆರವಣಿಗೆ ಮೂಲಕ ಸತ್ಕರಿಸುವ ಕೆಲಸ ಸಾಮೂಹಿಕವಾಗಿ ನಡೆಯಬೇಕಿದೆ ಎಂದರು.
ಕಾಲೇಜು ಪ್ರಾಂಶುಪಾಲೆ ಡಾ.ಬಿ.ಡಿ ಚೈತ್ರ ಮಾತನಾಡಿ, ಇಡೀ ವಿಶ್ವದಲ್ಲಿಯೇ ಅತ್ಯಂತ ಸುಂದರವಾಗಿರುವ ಕನ್ನಡ ಭಾಷೆಯನ್ನು ಬೆಳೆಸುವ ಹಾಗೂ ಗೌರವಿಸುವ ಕೆಲಸ ಇಂದಿನ ಯುವ ಜನಾಂಗದಿAದ ಆಗಬೇಕಿದೆ ಎಂದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ ಲೋಕೇಶ್ ಮಾತನಾಡಿ, ಕನ್ನಡ ಭಾಷೆಗಿರುವ ತಾಕತ್ತು ವಿಶ್ವದ ಬೇರಾವುದೇ ಭಾಷೆಗಳಿಗಿಲ್ಲ. ಕನ್ನಡದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಗೌರವಿಸುವ ಕೆಲಸ ಕನ್ನಡ ಅಭಿಮಾನಿಗಳಿಗೆ ಹೆಮ್ಮೆಯ ಸಂಗತಿ ಎಂದರು.
ಸಾಹಿತ್ಯ ಹಾಗೂ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಭಾಷೆಯ ಮೇಲೆ ಯುವ ಜನಾಂಗ ಹೆಚ್ಚು ಸದಭಿಮಾನ ಮೂಡಿಸಲು ಪ್ರೇರಣೆಯಾಗುವ ಉದ್ದೇಶದಿಂದ ಕನ್ನಡದಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಗೌರವಿಸಲಾಗುತ್ತಿದೆ ಎಂದರು.
ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ದರ್ಶನ್ ಕನ್ನಡ ಗೀತೆಗಳನ್ನು ಹಾಡಿದರು. ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ, ಕಾಲೇಜಿನ ಧರ್ಮದರ್ಶಿಗಳಾದ ಶ್ಯಾಮಲಾ ನಾಗೇಂದ್ರ, ಚಂದ್ರಶೇಖರ್, ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಪಾಣತ್ತಲೆ ಗಿರೀಶ್, ನಿರ್ದೇಶಕ ಕೆ.ಆರ್ ಗಣೇಶ್, ಕಾಲೇಜಿನ ಉಪಪ್ರಾಂಶುಪಾಲೆ ಮೇಘನಾ, ಕನ್ನಡ ಭಾಷಾ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಇದ್ದರು.