ಪೊನ್ನಂಪೇಟೆ, ಮೇ ೧೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿ ಕೆ.ಬಿ. ಬಿದ್ದಪ್ಪ ‘ಕಾವೇರಿ ಕಾಲೇಜು ಆ್ಯಪ್’ ಅನ್ನು ಅಭಿವೃದ್ಧಿಪಡಿಸಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಯಶಸ್ವಿಯಾಗಿ ಬಿಡುಗಡೆಗೊಳಿಸಿದ್ದಾರೆ. ಇದರ ಮುಂದುವರಿದ ಹೆಜ್ಜೆಯಾಗಿ ೨೦೨೬ ರಲ್ಲಿ ಕಾಲೇಜ್ ಅಟೆಂಡನ್ಸ್ ಆ್ಯಪ್ ಅನ್ನು ಬಿಡುಗಡೆ ಮಾಡುವ ಯೋಜನೆ ಸಿದ್ಧಗೊಂಡಿದ್ದು, ಈ ಆ್ಯಪ್ ಮೂಲಕ ವಿದ್ಯಾರ್ಥಿಗಳ ಹಾಜರಾತಿ ವಿವರಗಳು, ನೋಟಿಸ್ ಬೋರ್ಡ್ ಮೂಲಕ ಮಹತ್ವದ ಪ್ರಕಟಣೆಗಳು, ಮತ್ತು ತಕ್ಷಣದ ಮಾಹಿತಿ ಹಂಚಿಕೆ ಸಾಧ್ಯವಾಗಲಿದೆ. ಪೋಷಕರು ಮತ್ತು ಕಾಲೇಜಿನ ನಡುವೆ ಉತ್ತಮ ಸಂವಹನವನ್ನು ಬೆಳೆಸುವಲ್ಲಿ ಈ ಆ್ಯಪ್ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ ಎಂದು ಪ್ರಾಂಶುಪಾಲರ ಡಾ. ಎಂ.ಬಿ. ಕಾವೇರಿಯಪ್ಪ ಹಾಗೂ ಬಿಸಿಎ ವಿಭಾಗ ಮುಖ್ಯಸ್ಥ ಯು.ಟಿ. ಪೆಮ್ಮಯ್ಯ ಮಾಹಿತಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ, ವಿಭಾಗವು ರೋಬೋಟಿಕ್ಸ್ ಮತ್ತು ಐಒಟಿ ಸಂಶೋಧನಾ ಪ್ರಯೋಗಾಲಯವನ್ನು ಪ್ರಾರಂಭಿಸುವ ಯೋಜನೆಯನ್ನು ಹೊಂದಿದ್ದು, ಸ್ಥಳೀಯ ಕೃಷಿ ಉತ್ಪನ್ನಗಳಿಗೆ ತಂತ್ರಜ್ಞಾನಾಧಾರಿತ ಪರಿಹಾರಗಳನ್ನು ರೂಪಿಸುವ ಮೂಲಕ ಸ್ಥಳೀಯ ರೈತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದೆ. ಡೇಟಾ ಸೈನ್ಸ್, ಗೇಮ್ ಡೆವಲಪ್‌ಮೆಂಟ್ ಮತ್ತು ವೀಡಿಯೋ ಅನಿಮೇಶನ್ ಕ್ಷೇತ್ರಗಳಲ್ಲಿ ಹೊಸ ಪ್ರಮಾಣಪತ್ರ ಕೋರ್ಸ್ಗಳನ್ನು ಪ್ರಾರಂಭಿಸುವ ಯೋಜನೆ ಇದೆ. ವಿಶೇಷವಾಗಿ, ವೀಡಿಯೋ ಅನಿಮೇಶನ್‌ಗಾಗಿ ಅತ್ಯಾಧುನಿಕ ರೆಕಾರ್ಡಿಂಗ್ ಸ್ಟುಡಿಯೋವನ್ನು ಸ್ಥಾಪಿಸಲಾಗುತ್ತಿದ್ದು, ಇದು ಕೊಡಗು ಜಿಲ್ಲೆಯ ಕಾಲೇಜುಗಳಲ್ಲಿ ಮೊದಲನೆ ಪ್ರಯತ್ನವಾಗಿದೆ ಎಂದು ಕಾಲೇಜು ಪ್ರಾಂಶುಪಾಲರು ಮಾಹಿತಿ ನೀಡಿದ್ದಾರೆ.