ವೀರಾಜಪೇಟೆ, ಮೇ ೧೪: ಜಿಲ್ಲೆಯಲ್ಲಿ ಕಾಡಾನೆ ಹಾಗೂ ಮಾನವ ಸಂಘರ್ಷ ಇದ್ದು, ಇಲ್ಲಿ ಕಾಡಾನೆಗಳ ದಾಳಿಯನ್ನು ತಡೆಗಟ್ಟಲು ಸಾಧ್ಯವಾಗದಿದ್ದರೂ ನಿಯಂತ್ರಣ ತರುವಲ್ಲಿ ಅರಣ್ಯ ಇಲಾಖೆ ಮತ್ತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ದೇವರಕಾಡು ಕೀಮಣಿ ಅಯ್ಯಪ್ಪ ಮತ್ತು ಕರೀಂಗುಟ್ಟಿ ಭಗವತಿ ದೇವಾಲಯದ ಅಂಚಿನಲ್ಲಿರುವ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯಿಂದ ಸುಮಾರು ೨೧ ಲಕ್ಷ ವೆಚ್ಚದಲ್ಲಿ ಮೂರು ಕಿ.ಮಿ ಉದ್ದದ ಸೌರ ತೂಗು ಬೇಲಿ ಉದ್ಘಾಟಿಸಿ ಮಾತನಾಡಿದರು.

ಕೊಡಗು ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ, ತಮಿಳುನಾಡು, ಕೇರಳಂ ಬಹುತೇಕ ಪ್ರದೇಶಗಳಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ ನಿರಂತರವಾಗಿದೆ. ಕಾಡಾನೆಗಳು ದಾಳಿ ಮಾಡುವುದನ್ನು ತಡೆಗಟ್ಟಲು ಅಸಾಧ್ಯವಾದರು ಧಾಳಿಯಾಗದಂತೆ ನಿಯಂತ್ರಣ ಮಾಡಲು ವೈಜ್ಞಾನಿಕ ಮಾರ್ಗೋಪಾಯಗಳನ್ನು ಇಲಾಖೆ ಸೃಷ್ಟಿ ಮಾಡುತ್ತಿದೆ. ಕೇಂದ್ರ ಸರ್ಕಾರ ಕಾಡಾನೆಗಳ ದಾಳಿ ತಡೆಗಟ್ಟಲು ರಾಜ್ಯಕ್ಕೆ ವಿಶೇಷ ಅನುದಾನ ಬಿಡುಗಡೆಗೊಳಿಸಿದಲ್ಲಿ ಸೋಲಾರ್ ಬೇಲಿ, ಕಂದಕ ನಿರ್ಮಾಣ ಮತ್ತು ರೈಲ್ವೆ ಬ್ಯಾರಿಕೇಡ್ ಅಳವಡಿಸಿ ಕಾಡಾನೆಗಳ ದಾಳಿಯನ್ನು ತಡಗಟ್ಟುವಲ್ಲಿ ಕ್ರಮವಹಿಸಬಹುದು. ಗ್ರಾಮಸ್ಥರ ಬಹುಬೇಡಿಕೆಯ ಆಗ್ರಹವನ್ನು ವಿಶೇಷ ಅನುದಾನದ ಮೂಲಕ ಇದೀಗ ಈಡೇರಿಸಲಾಗಿದೆ ಎಂದು ಹೇಳಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ಪಾಲಂಗಾಲ ಭಾಗದಲ್ಲಿ ಕಾಡನೆಗಳ ಉಪಟಳ ಹೆಚ್ಚಾಗಿದ್ದು, ಈ ವ್ಯಾಪ್ತಿಯ ಗ್ರಾಮಸ್ಥರ ಬೇಡಿಕೆಯಂತೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಇಲಾಖೆಯು ಅಣಿಯಾಗಿದ್ದು, ಅರಣ್ಯ ಅಂಚಿನಲ್ಲಿ ಕಾಡನೆಗಳ ದಾಳಿಯನು ತಡೆಗಟ್ಟಲು ಸುಮಾರು ಮೂರು ಕಿ.ಮೀ.ತನಕ ಸೌರ ತೂಗುಬೇಲಿಯನ್ನು ಅಳವಡಿಸಲಾಗಿದೆ. ಮುಂದೆಯು ಬೇಡಿಕೆಗೆ ಅನುಗುಣವಾಗಿ ಇಲಾಖೆಯ ವತಿಯಿಂದ ಸೌರ ಬೇಲಿ ನಿರ್ಮಾಣಕ್ಕೆ ಮುಂದಾಗಲಾಗುತ್ತದೆ. ಅಲ್ಲದೆ ಬೇಲಿ ನಿರ್ಮಾಣ ಮಾಡುವುದು ಇಲಾಖೆಯ ಕರ್ತವ್ಯವಾದರೆ ನಿರ್ವಹಣೆಯಲ್ಲಿ ಗ್ರಾಮಸ್ಥರ ಪಾತ್ರ ಮುಖ್ಯವಾಗಿದೆ. ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ತಹಸೀನ್ ಬಾನು, ವಲಯ ಅರಣ್ಯ ಅಧಿಕಾರಿ ಶಿವರಾಮ್, ಶ್ರೀನಿವಾಸ್, ರಾಘವ, ಇಲಾಖೆಯ ಸಿಬ್ಬಂದಿ, ಕಾಂಗ್ರೆಸ್ ವಲಯ ಅಧ್ಯಕ್ಷ ನಡಿಕೇರಿಯಂಡ ಮಹೇಶ್, ಪ್ರಮುಖರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ, ಜೆಫ್ರಿ ಉತ್ತಪ್ಪ, ಎಂ.ಎA. ಇಸ್ಮಾಯಿಲ್, ಕರಿನೆರವಂಡ ಜಾಲು ಚೆಂಗಪ್ಪ, ಮಿಟ್ಟು ಅಯ್ಯಪ್ಪ, ಸಂಕೇತ್ ಕಾಳಯ್ಯ, ಜೀತನ್, ಬಾಚಮಂಡ ಲವ ಚಿಣ್ಣಪ್ಪ, ಮತ್ತು ಕಲಿಯಂಡ ಸಂಪನ್ ಹಾಗೂ ಗ್ರಾಮಸ್ಥರು, ಪಕ್ಷದ ಕಾರ್ಯಕರ್ತರು ಹಾಜರಿದ್ದರು.