ವೀರಾಜಪೇಟೆ, ಮೇ. ೧೩: ಕುಟುಂಬದ ರಕ್ಷಣೆ ಬಗ್ಗೆ ದುಡಿಯುವ ತಾಯಿಯ ಪಾತ್ರ ಮಹತ್ವವಾದದ್ದು ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಎಸ್.ಎಂ. ರಜನಿ ಹೇಳಿದರು.

ವೀರಾಜಪೇಟೆ ಸಮೀಪದ ಅರಮೇರಿ ಕಳಂಚೇರಿ ಮಠದ ಶ್ರೀ ಲಿಂಗರಾಜೇAದ್ರ ಭವನದಲ್ಲಿ ನಡೆದ 'ಹೊಂಬೆಳಕು ಕಿರಣ ೨೪೩ ಮಾಸಿಕ ತತ್ವಚಿಂತನಾಗೋಷ್ಠಿ' ಕಾರ್ಯಕ್ರಮದಲ್ಲಿ ವಿಶ್ವ ತಾಯಂದಿರ ದಿನದ ಅಂಗವಾಗಿ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕುಟುಂಬದ ರಕ್ಷಣೆಯಲ್ಲಿ ದುಡಿಯುವ ಮಹಿಳೆಯರ ಪಾತ್ರ' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಅವರು ಯಾವುದೇ ಮಗು ಮೊದಲು ನೋಡುವುದೇ ತಾಯಿಯನ್ನು, ನಂತರ ಮನೆಯೇ ಮೊದಲ ಪಾಠಶಾಲೆಯಾಗಿ ಬೆಳೆಯುತ್ತದೆ. ಬಾಲ್ಯದಿಂದಲೂ ಮಗುವಿಗೆ ಯಾವುದೇ ತೊಂದರೆ ಆಗದಂತೆ ಪ್ರೀತಿ-ಮಮತೆಯಿಂದ ನೋಡಿಕೊಳ್ಳುವಳು ತಾಯಿ, ಮಕ್ಕಳು ಉತ್ತಮ ಗುಣವಂತರಾಗಲು ತಾಯಿಯ ಪಾತ್ರ ಬಹುಮುಖ್ಯ ಎಂದ ರಜನಿ ಅವರು ಮಕ್ಕಳು ಉತ್ತಮ ಶಿಕ್ಷಣ ಕಲಿತು ಹುದ್ದೆಗೇರುವಂತಾಗಬೇಕು, ಹಿರಿಯರು ಕಲಿಸಿದ ಸಂಸ್ಕಾರವನ್ನು ಯುವಕರು ಕಲಿಯುವಂತಾಗಬೇಕು. ಇತ್ತೀಚೆಗೆ ವಿದ್ಯಾರ್ಥಿಗಳು ದುಷ್ಚಟಗಳಿಗೆ ಬಲಿಯಾಗುತ್ತಿರುವುದು ಹೆಚ್ಚುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸುವ ಬಗ್ಗೆ ಗಮನ ಹರಿಸುವುದು ಉತ್ತಮ, ಕಡಂಗ ಸರಕಾರಿ ಪ್ರಾಥಮಿಕ ಶಾಲಾ ಉಪಾಧ್ಯಾಯಿನಿ ವತ್ಸಲಾ ಶ್ರೀಶ ಅವರು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿ, ಮನೆಯ ಎಲ್ಲಾ ಕೆಲಸಗಳನ್ನು ಮುಗಿಸಿ ಮಕ್ಕಳನ್ನು ಬಾಲ್ಯದಿಂದಲೂ ಯೋಗಕ್ಷೇಮ ನೋಡಿಕೊಳ್ಳುವಳು ತಾಯಿ, ಮಕ್ಕಳ ಭವಿಷ್ಯಕ್ಕಾಗಿ ದುಡಿಯುವವಳೇ ತಾಯಿ, ಮನೆಯಲ್ಲಿ ಎಷ್ಟು ಜನರಿದ್ದರೂ ಮಗುವನ್ನು ತಾಯಿಯೇ ನೋಡಿಕೊಳ್ಳುತ್ತಾಳೆ. ತಂದೆ ತಾಯಿ ಕಲಿಸಿದ ಸಂಸ್ಕಾರವನ್ನು ಮಕ್ಕಳು ಕಲಿಯುವಂತಾಗಬೇಕು ಎಂದರು.

ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿಗಳಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಮಾತನಾಡಿ, ತಾಯಿಯ ರೂಪದಲ್ಲಿ ದೇವರನ್ನು ಕಾಣಬಹುದು, ಹಿಂದಿನ ದಿನದಲ್ಲಿ ವಿದ್ಯೆ ಇಲ್ಲದಿದ್ದರೂ ಸರಿ ತಪ್ಪು ಎಂಬುದನ್ನು ವಿಮರ್ಶೆ ಮಾಡುವ ಜ್ಞಾನವಿತ್ತು, ತಾಯಿ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಂಡು ಶಿಕ್ಷಣದ ಬಗ್ಗೆ ಗಮನ ಹರಿಸುತ್ತಿದ್ದರು. ಯಾರು ತಂದೆ-ತಾಯಿ ಆಶೀರ್ವಾದ ಪಡೆಯುತ್ತಾರೊ ಅವರು ಉತ್ತಮರಾಗಲು ಸಾಧ್ಯ, ನೆಮ್ಮದಿಯಿಂದ ಜೀವನ ನಡೆಸುತ್ತಾರೆ. ಪ್ರತಿಯೊಬ್ಬರು ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಾಗಬೇಕು. ವಿದ್ಯಾರ್ಥಿಗಳು ದುಶ್ಚಟವನ್ನು ದೂರಮಾಡಿ ದೇಶದ ಉತ್ತಮ ಪ್ರಜೆಗಳಾಗುವಂತೆ ಸ್ವಾಮೀಜಿ ಹೇಳಿದರು.

ವೀರಾಜಪೇಟೆ ವೈದ್ಯರು, ಪಕ್ಷಿ ತಜ್ಞರಾದ ಡಾ. ಎಸ್.ವಿ. ನರಸಿಂಹನ್ ತಾಯಂದಿರ ದುಡಿಮೆಯ ಬಗ್ಗೆ ಮಾತನಾಡಿದರು.

ಸಭೆಯನ್ನುದ್ದೇಶಿಸಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಸಾಹಿತಿ ಕಿಗ್ಗಾಲು ಗಿರೀಶ್, ವೈಲೇಶ್, ಕೃಷಿಕರಾದ ತಿಮ್ಮಪಯ್ಯ, ವೆಂಕಟಗಿರಿ, ಉಪನ್ಯಾಸಕ ಹರೀಶ್ ಕಿಗ್ಗಾಲು ಮಾತನಾಡಿದರು.