ಮಡಿಕೇರಿ, ಮೇ ೧೩: ಕೊಡಗು ಜಿಲ್ಲೆಯ ಮನೆಗಳಲ್ಲಿ ನಡೆಯುವ ಕಳ್ಳತನವನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ. ‘ಲಾಕ್ಡ್ ಹೌಸ್ ಬೀಟ್ ಸಿಸ್ಟಮ್’ ಎಂಬ ಹೊಸ ಕಾರ್ಯಕ್ರಮವನ್ನು ಪರಿಚಯಿಸಲಾಗಿದ್ದು, ಈ ಮೂಲಕ ಮನೆಗಳಿಗೆ ಭದ್ರತೆಯನ್ನು ಪೊಲೀಸರು ನೀಡಲಿದ್ದಾರೆ.
ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿನ ತೋಟ ಪ್ರದೇಶಗಳಲ್ಲಿ ಒಂಟಿ ಮನೆಗಳ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಮನೆಗೆ ನುಗ್ಗಿ ಹಣ, ಚಿನ್ನವನ್ನು ದೋಚಿರುವ ಪ್ರಕರಣಗಳು ನಡೆಯುತ್ತಿರುತ್ತವೆ. ಅಲ್ಲದೆ ನಗರ ಪ್ರದೇಶಗಳ ಮನೆಗಳಲ್ಲಿಯೂ ಕಳ್ಳತನ ನಡೆದಿರುವ ಪ್ರಕರಣಗಳು ವರದಿಯಾಗಿವೆ. ಈ ಹಿನ್ನೆಲೆ ಕಳ್ಳತನವನ್ನು ತಡೆಗಟ್ಟುವ ಉದ್ದೇಶದಿಂದ ಪೊಲೀಸ್ ಇಲಾಖೆ ಈ ತಂತ್ರಗಾರಿಕೆಗೆ ಮುಂದಾಗಿದೆ.
ಈಗಾಗಲೇ ಕೊಡಗು ಪೊಲೀಸ್ ಇಲಾಖೆ ಅಪರಾಧ ತಡೆಗೆ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಮಾದಕ ವಸ್ತು ಸಾಗಾಟ, ಮಾರಾಟ ತಡೆಗಟ್ಟುವಲ್ಲಿಯೂ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಂಡಿದೆ. ಇದರೊಂದಿಗೆ ಮನೆಯಲ್ಲಿ ನಡೆಯುವ ಕಳ್ಳತನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈ ಪರಿಕಲ್ಪನೆಯನ್ನು ಮಾಡಿದ್ದು, ಜನರ ಸಹಕಾರ ದೊರೆತಲ್ಲಿ ಕಳ್ಳತನ ಪ್ರಕರಣಗಳನ್ನು ನಿಯಂತ್ರಿಸಬಹುದು ಎಂದು ಪೊಲೀಸ್ ಇಲಾಖೆ ಆಶಾಭಾವನೆಯನ್ನು ಹೊಂದಿದೆ.
ಏನಿದು ಎಲ್‌ಹೆಚ್‌ಬಿಎಸ್?
ಸಾರ್ವಜನಿಕರು ಪ್ರವಾಸ ಅಥವಾ ಇತರ ಕಾರಣಗಳಿಂದ ಬೇರೆ ಊರುಗಳಿಗೆ ತೆರಳುವ ಸಂದರ್ಭಗಳಲ್ಲಿ ಬೀಗ ಹಾಕಿರುವ ಮನೆಗಳ ಭದ್ರತೆಗೆ ನೆರವಾಗುವ ಉದ್ದೇಶದಿಂದ ಲಾಕ್ಡ್ ಹೌಸ್ ಬೀಟ್ ಸಿಸ್ಟಮ್ (ಎಲ್‌ಹೆಚ್‌ಬಿಎಸ್) ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಇಲಾಖೆ ರೂಪಿಸಿದೆ. ಹೆಸರು, ವಿಳಾಸ, ಮನೆಯ ಗೂಗಲ್ ಲೋಕೇಶನ್ ಜೊತೆಗೆ ಮನೆಯಿಂದ ಹೊರಗೆ ಹೋಗುವ ದಿನಾಂಕದ ಮಾಹಿತಿಯನ್ನು ಪೊಲೀಸ್ ನಿಯಂತ್ರಣ ಕೊಠಡಿಗೆ ನೀಡಿದ್ದಲ್ಲಿ ಸೂಕ್ತ ಭದ್ರತೆಯನ್ನು ಖಾಕಿಪಡೆ ನೀಡಲಿದೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಪೊಲೀಸರು ಮನೆಗಳ ಮೇಲೆ ಕಣ್ಣಿಡಲಿದ್ದಾರೆ. ನಿಯಮಿತವಾಗಿ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಮುನ್ನೆಚ್ಚರಿಕೆಯಾಗಿ ಪೊಲೀಸ್ ನಿಯಂತ್ರಣ ಕೊಠಡಿ ೦೮೨೭೨ ೨೨೮೩೩೦ಗೆ ಮಾಹಿತಿ ನೀಡಿದಲ್ಲಿ ಈ ಸೇವೆಯನ್ನು ಪೊಲೀಸರು ನೀಡಲಿದ್ದಾರೆ.