ವರದಿ: ಈಶಾನ್ವಿ
ವೀರಾಜಪೇಟೆ, ಮೇ.೧೩: ಗಡಿಭಾಗವಾದ ವೀರಾಜಪೇಟೆಯಲ್ಲಿ ದಿನನಿತ್ಯ ವಾಹನ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದು ಬಿಸಿಲಿನ ತೀವ್ರತೆಯ ನಡುವೆ ವಾಹನ ಸವಾರರು, ಸಾರ್ವಜನಿಕರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ವೀರಾಜಪೇಟೆ ಪಟ್ಟಣ ದಿನೇದಿನೆ ಅಭಿವೃದ್ಧಿ ಹೊಂದುತ್ತಿರುವ ಜತೆಯಲ್ಲಿ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಮುಖ್ಯ ರಸ್ತೆ ಬದಿಯಲ್ಲಿ ಅಂಗಡಿ, ಹೊಟೇಲ್, ಶಾಪಿಂಗ್ ಕಾಂಪ್ಲೆಕ್ಸ್, ಕಟ್ಟಡಗಳಿದ್ದು ಮುಖ್ಯ ರಸ್ತೆ ತೀರಾ ಇಕ್ಕಟ್ಟಾಗಿರುವುದು ಮತ್ತು ವಾಹನಗಳ ದಟ್ಟಣೆ ನಡುವೆ ರಸ್ತೆಯ ಎರಡೂ ಬದಿಗಳಲ್ಲಿ ಕಾರು, ಜೀಪು, ಬೈಕ್, ಬಸ್ ಮುಂತಾದ ವಾಹನಗಳ ನಿಲುಗಡೆ ಮಾಡುವುದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಿದೆ.
ಪಟ್ಟಣದ ಪಂಜರಪೇಟೆ ಮುಖ್ಯರಸ್ತೆಯಿಂದ ವಾಹನ ದಟ್ಟಣೆ ಪ್ರಾರಂಭವಾದರೆ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಮಾರ್ಗ, ಅಪ್ಪಚ್ಚಕವಿ ವೃತ್ತ, ಗಡಿಯಾರ ಕಂಬದ ಬಳಿ ಮುಖ್ಯರಸ್ತೆ, ಖಾಸಗಿ ಬಸ್ಸು ನಿಲ್ದಾಣ ಸಮೀಪ, ಅಬ್ದುಲ್ ಕಲಾಂ ರಸ್ತೆ, ಮಟನ್ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.
ವೀರಾಜಪೇಟೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಲು ಮುಖ್ಯ ಕಾರಣವೆಂದರೆ ಕಿರಿದಾದ ರಸ್ತೆ. ವೀರಾಜಪೇಟೆ ನಗರದ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ನಗರದ ಒಂದು ಕಡೆಯಿಂದ ಮತ್ತೊಂದು ಕಡೆಯನ್ನು ತಲುಪಲು ಕೆಲವು ಸಂದರ್ಭ ೫ ರಿಂದ ೧೦ ನಿಮಿಷಗಳ ಸಮಯ ಬೇಕಾಗುತ್ತಿದೆ.
ವೀರಾಜಪೇಟೆ ನಗರದಲ್ಲಿ ಮುಖ್ಯ ರಸ್ತೆಯು ಕಿರಿದಾಗಿದ್ದು ಕೇರಳ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಒಂದು ಕಡೆಯಾದರೆ, ಇನ್ನೊಂದು ಕಡೆ ಮೈಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಹೋಗುತ್ತದೆ. ಎರಡು ಹೆದ್ದಾರಿಗಳು ನಗರದ ಮೂಲಕ ಹಾದು ಹೋಗುತ್ತಿರುವ ಕಾರಣ ರಸ್ತೆ ಕಿರಿದಾಗಿದ್ದು ಮುಖ್ಯ ರಸ್ತೆಯ ಎರಡು ಬದಿಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ಕೆಲವು ಕಡೆಗಳಲ್ಲಿ ರಸ್ತೆಯ ಒಂದು ಬದಿ ವಾಹನಗಳನ್ನು ಪಾರ್ಕಿಂಗ್ ಮಾಡಿದಾಗ ಕಿರಿದಾಗಿರುವ ರಸ್ತೆ ಇನ್ನೂ ಕಿರಿದಾಗುತ್ತದೆ. ಇದರಿಂದ ದೊಡ್ಡ ದೊಡ್ಡ ವಾಹನಗಳು ಮುಂದೆ ಸಾಗುವಂತಹ ಸಂದರ್ಭದಲ್ಲಿ ಅವುಗಳನ್ನು ಹಿಂದಿಕ್ಕಿ ಚಿಕ್ಕ ವಾಹನಗಳಿಗೆ ಮುಂದೆ ಸಾಗಲು ಸ್ಥಳಾವಕಾಶ ದೊರೆಯುತ್ತಿಲ್ಲ.
ಮುಖ್ಯ ರಸ್ತೆಯಲ್ಲಿ ಸಂಚರಿಸುವಾಗ ಬಸ್ ಅಥವಾ ಲಾರಿ ಅಂತಹ ದೊಡ್ಡ ವಾಹನಗಳು ಎದುರು ಸಿಕ್ಕರೆ ನಗರ ದಾಟುವವರೆಗೂ ಅವುಗಳ ಹಿಂದೆ ಸಾಗಬೇಕಾದಂತಹ ದುಸ್ಥಿತಿ ಇತರೆ ವಾಹನಗಳದ್ದಾಗಿದೆ. ಬಸ್ ಜನರನ್ನು ಹತ್ತಿಸಲು ಹಾಗೂ ಇಳಿಸಲು ರಸ್ತೆಬದಿ ನಿಂತರೆ ಅದರ ಹಿಂದೆ ಮಾರುದ್ದ ವಾಹನ ದಟ್ಟಣೆ ಉಂಟಾಗುತ್ತದೆ.
ವಾಹನಗಳನ್ನು ತಿಂಗಳಲ್ಲಿ ೧೫ ದಿನ ಎಡ ಬದಿಯಲ್ಲಿ ೧೫ ದಿನ ಬಲ ಬದಿಯಲ್ಲಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಕೊಂಚ ಕಡಿಮೆಯಾಗಿತ್ತು. ವಾಹನ ಸವಾರರು ನಿಯಮವನ್ನು ಗಾಳಿಗೆ ತೂರಿ ಎಲ್ಲಡೆಯಲ್ಲೂ ವಾಹನಗಳನ್ನು ನಿಲುಗಡೆ ಮಾಡುತಿದ್ದಾರೆ. ಇದರಿಂದ ಬಸ್, ಲಾರಿ ಮುಂತಾದ ದೊಡ್ಡ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಪ್ರತಿದಿನ ೪೦ಕ್ಕಿಂತ ಹೆಚ್ಚಿನ ಕೆಎಸ್ಆರ್ಸಿ ಬಸ್ಗಳು ಬೆಂಗಳೂರು, ಮಂಗಳೂರು, ಮೈಸೂರು, ಚಿಕ್ಕಮಗಳೂರು, ಶಿವಮೊಗ್ಗ, ಇನ್ನು ಮುಂತಾದ ಕಡೆಗಳ ಮೂಲಕ ಸಂಚರಿಸುತ್ತವೆ.
ಜತೆಗೆ ಎರಡೂ ಬದಿಯಲ್ಲೂ ಕಾರು, ಜೀಪು, ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆಯಾಗುತ್ತಿದೆ. ಬುಧವಾರ ಸಂತೆ ದಿನವಾಗಿದ್ದು ವಾಹನಗಳ ದಟ್ಟಣೆಯಿಂದ ವಾಹನ ಸಂಚಾರಕ್ಕೆ ಅಡಚಣೆಯಾಗುತ್ತದೆ.
ಪೊಲೀಸರು ನಿಯಮ ಉಲ್ಲಂಘಿಸುವ ವಾಹನ ಮಾಲೀಕರಿಗೆ ಕಾನೂನಿನಂತೆ ದಂಡ ವಿಧಿಸಿದರೆ ಮಾತ್ರ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು. ಎಲ್ಲೆಡೆ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಟ್ರಾಫಿಕ್ ಸಮಸ್ಯೆ ಜತೆಯಲ್ಲಿ ವರ್ತಕರ ವ್ಯಾಪಾರ, ವಹಿವಾಟಿಗೆ ಅಡಚಣೆಯಾಗುತ್ತಿದೆ. ಕಾರು, ದ್ವಿಚಕ್ರ ವಾಹನಗಳಿಗೆ ಪ್ರತ್ಯೇಕವಾಗಿ ನಿಲುಗಡೆ ವ್ಯವಸ್ಥೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ.
ಸೂಕ್ತ ಪಾರ್ಕಿಂಗ್ ವ್ಯವಸ್ಥೆಯ ತೊಂದರೆ.
ನಗರದ ಹೆಚ್ಚಿನ ಕಡೆಗಳಲ್ಲಿ ಸೂಕ್ತವಾದಂತಹ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಕೆಲವು ಕಡೆಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಮಾರ್ಕಿಂಗ್ ಇಲ್ಲದ ಕಾರಣ ವಾಹನಗಳನ್ನು ಅಡ್ಡಾದಿಡ್ಡಿ ನಿಲ್ಲಿಸುತ್ತಾರೆ. ಇದರಿಂದ ಪಾರ್ಕಿಂಗ್ ವ್ಯವಸ್ಥೆ ಸಿಗದಂತಹ ಕೆಲವು ವಾಹನಗಳು ಅನಿವಾರ್ಯವಾಗಿ ಪಾರ್ಕಿಂಗ್ ಹುಡುಕುತ್ತಾ ನಗರ ಪ್ರದಕ್ಷಿಣೆ ನಡೆಸಬೇಕಾಗುತ್ತದೆ. ನಗರದಲ್ಲಿ ಇತ್ತೀಚೆಗೆ ವ್ಯಾಪಾರ ವಹಿವಾಟುಗಳು, ಖಾಸಗಿ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗಿರುವುದರಿಂದ ದಿನನಿತ್ಯ ನಗರಕ್ಕೆ ಬರುವಂತಹ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ನೂತನವಾಗಿ ನಿರ್ಮಾಣವಾಗುತ್ತಿರುವ ಯಾವುದೇ ವಾಣಿಜ್ಯೋದ್ಯಮ ಸಂಕೀರ್ಣಗಳಲ್ಲಿ ಸರಿಯಾದ ಅಂಡರ್ ಪಾರ್ಕಿಂಗ್ ವ್ಯವಸ್ಥೆ ನೀಡದ ಕಾರಣ ವಿವಿಧ ಕೆಲ¸ಗಳÀ ನಿಮಿತ್ತ ಬರುವಂತಹ ಜನರು ರಸ್ತೆಯ ಬದಿಗಳಲ್ಲಿ ತಮ್ಮ ವಾಹನವನ್ನು ನಿಲ್ಲಿಸುತ್ತಾರೆ. ಇದರಿಂದಾಗಿ ಎದುರು ಬದುರು ವಾಹನ ಸಂಚಾರ ಏರ್ಪಟ್ಟಾಗ ವಾಹನಗಳು ಸುಲಭವಾಗಿ ಸಂಚರಿಸಲು ಸಾಧ್ಯವಾಗದೆ ವಾಹನ ದಟ್ಟಣೆ ಉಂಟಾಗುತ್ತಿದೆ.
ರಸ್ತೆ ದಾಟಲು ಪರದಾಟ
ನಗರದ ಮುಖ್ಯ ರಸ್ತೆಯಲ್ಲಿ ನಿರಂತರವಾಗಿ ವಾಹನ ದಟ್ಟಣೆ ಉಂಟಾಗುತ್ತಿರುವ ಪರಿಣಾಮವಾಗಿ ರಸ್ತೆಯ ಒಂದು ಕಡೆಯಿಂದ ಮತ್ತೊಂದು ಕಡೆ ದಾಟಲು ಪಾದಚಾರಿಗಳು ಹಾಗೂ ವಿದ್ಯಾರ್ಥಿಗಳು ಹರ ಸಾಹಸ ಪಡಬೇಕಾಗುತ್ತದೆ. ಮುಖ್ಯರಸ್ತೆಯಲ್ಲಿ ಎಲ್ಲಿಯೂ ಜೀಬ್ರಾ ಪಟ್ಟಿ ಇಲ್ಲದಿರುವುದು ಇದಕ್ಕೆ ಒಂದು ಕಾರಣ. ಇನ್ನು ವಯಸ್ಕರು ಹಾಗೂ ರೋಗಿಗಳ ಪರದಾಟ ಹೇಳುತೀರದು.