ಕೂಡಿಗೆ, ಮೇ ೧೧: ಇಂದಿನ ರಾಜ್ಯ ಸರಕಾರ ಕುರ್ಚಿ ಕಿತ್ತಾಟದಲ್ಲಿ ಜನರ ಜ್ವಲಂತ ಸಮಸ್ಯೆಗಳನ್ನು ಮರೆತಿದೆ ಎಂದು ಆರೋಪಿಸಿದ ಸಂಸದ ಯದುವೀರ್ ಒಡೆಯರ್, ಈಗಿನ ಸರ್ಕಾರಕ್ಕೆ ಪರ್ಯಾಯವಾಗಿ ಜನಸೇವೆಗೆ ಬಿಜೆಪಿ ಅನಿವಾರ್ಯ ಎಂಬ ಜನಾಭಿಪ್ರಾಯ ಹೊರಹೊಮ್ಮುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮವಹಿಸಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು

ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕತ್ತೂರಿನ ಖಾಸಗಿ ಸಭಾಂಗಣದಲ್ಲಿ ನಡೆದ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ೨೦೨೬ ರ ಕೊಡಗು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಪಕ್ಷವನ್ನು ಮತ್ತಷ್ಟು ಬಲಪಡಿಸುತ್ತವೆ. ಜಿಲ್ಲಾಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಪ್ರತಿ ಹಂತದಲ್ಲಿ ಈ ಕಾರ್ಯ ಕ್ರಮ ನಡೆಯಲಿದೆ. ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು, ಶಿಸ್ತು ಮೂಡಿಸಲು ಸಹಕಾರಿ ಯಾಗಲಿದೆ. ನಿರ್ದಿಷ್ಟ ಗುರಿ ಹೊಂದಿರುವ ನಮ್ಮ ಬಿಜೆಪಿ ಪಕ್ಷ ಇತರೆ ಪಕ್ಷಗಳಿಗಿಂತ ಭಿನ್ನವಾಗಿದೆ. ಕೇವಲ ಅಧಿಕಾರ ಗಳಿಸುವುದು ಮಾತ್ರ ನಮ್ಮ ಉದ್ದೇಶವಲ್ಲ; ಉತ್ತಮ ಸೇವೆ ಸಲ್ಲಿಸುವುದು ನಮ್ಮ ಉದ್ದೇಶ. ಪಕ್ಷದ ಮೂಲ ತತ್ವ ಸಿದ್ದಾಂತ, ಪರಂಪರೆಯನ್ನು ಇಂದಿನ ಕಾರ್ಯಕರ್ತರಿಗೆ ತಿಳಿಸಿ ಪಕ್ಷದೊಳಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು, ಜನರಿಗೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ತಿಳಿಸಲು ಪ್ರಶಿಕ್ಷಣ ಕಾರ್ಯಕ್ರಮದ ಮೂಲಕ ಸಾಧ್ಯ ಎಂದ ಸಂಸದರು, ಜಿಲ್ಲೆಯಲ್ಲಿ ಕೂಡ ಮತ್ತೆ ಬಿಜೆಪಿ ವೈಭವ ಮರುಕಳಿಸುವಂತಾಗಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.

ಬಿಜೆಪಿಗೆ ಕಾರ್ಯಕರ್ತರೆ ಮಾಲೀಕರು : ಸಿ.ಟಿ. ರವಿ

ಬಿಜೆಪಿ ರಾಷ್ಟಿçÃಯ ಸಮಿತಿ ಮಾಜಿ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ.ರವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಬೇರೆ ಪಕ್ಷಗಳಂತೆ ಬಿಜೆಪಿ ಪಕ್ಷಕ್ಕೆ ಮಾಲೀಕರಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ಮಾಲೀಕರು. ನಮ್ಮದು ಕಾರ್ಯಕರ್ತರನ್ನೇ ನಾಯಕರನ್ನಾಗಿ ಬೆಳೆಸುವ ವ್ಯವಸ್ಥೆಯನ್ನು ನಂಬಿರುವ ರಾಜಕೀಯ ಪಕ್ಷ. ಕಾರ್ಯಕರ್ತರು ಎಷ್ಟೇ ಹಿರಿಯರಾದರೂ, ಅನುಭವಿಗಳಾದರೂ ಕೂಡ ಕಾಲಕಾಲಕ್ಕೆ ಅವರನ್ನು ಮತ್ತಷ್ಟು ಚುರುಕುಗೊಳಿಸುವ ಅಗತ್ಯವಿದೆ. ಅದರ ಅಂಗವಾಗಿ ಈ ಪ್ರಶಿಕ್ಷಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇಲ್ಲಿ ಔಪಚಾರಿಕವಾಗಿ, ಅನೌಪಚಾರಿಕವಾಗಿ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಪ್ರಶಿಕ್ಷಣ ವರ್ಗ ಕಾರ್ಯಕ್ರಮದ ಬಗ್ಗೆ ಮಾಹಿತಿಯಿತ್ತರು. ವೇದಿಕೆಯಲ್ಲಿ ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ರಾಬಿನ್ ದೇವಯ್ಯ, ರಾಜ್ಯ ಸಹ ಸಂಯೋಜಕ ಎನ್.ವಿ. ಗÀಣೇಶ್, ಕಾರ್ಯಕ್ರಮದ ಸಂಯೋಜಕ ಮನು ಮುತ್ತಪ್ಪ, ಮೈಸೂರು ವಿಭಾಗದ ಸಂಯೋಜಕ ರಾಜೇಶ್, ಪ್ರಮುಖರಾದ ಸ್ವಾಮಿ, ಕಾರ್ಯಾಗಾರದ ಪ್ರಬಂಧಕರಾದ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ರಕ್ಷಿತ್ ಮಾವಜಿ, ಸುಮನ್ ಗೌಡ, ಪ್ರಮೀಣ್ ಮಲ್ಲಜಿರ, ನವನೀತ್ ಪೊನ್ನಟ್ಟಿ, ರಾಮನಾಥನ್ ಸೇರಿದಂತೆ ಹಲವರು ಹಾಜರಿದ್ದರು.