ಶನಿವಾರಸಂತೆ, ಮೇ ೯: ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೋರಗಲ್ಲು ಗ್ರಾಮದ ಶ್ರೀ ಬಸವೇಶ್ವರ ದೇವಾಲಯ ಉದ್ಘಾಟನೆ ಹಾಗೂ ಶ್ರೀ ಬಸವೇಶ್ವರ ಸ್ವಾಮಿ ದೇವರ ವಿಗ್ರಹ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.

ಅರ್ಚಕರಾದ ಸೋಮಶೇಖರ ಶಾಸ್ತಿç ಅವರ ನೇತೃತ್ವದಲ್ಲಿ ಬಸವೇಶ್ವರಸ್ವಾಮಿ ದೇವರಿಗೆ ರುದ್ರಾಭಿಷೇಕ, ಕಲಶಾರೋಹಣ, ಬಿಲ್ವಾರ್ಚನೆ, ಪೂರ್ಣಾಹುತಿ, ಪುಷ್ಪಾರ್ಚನೆ, ಮಹಾಮಂಗಳಾರತಿ ನೆರವೇರಿತು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.

ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಕಲ್ಲುಮಠದ ಮಹಾಂತ ಸ್ವಾಮೀಜಿ ಆಶೀರ್ವಚನ ನೀಡಿ, ದೇವಾಲಯಗಳು ಭಾರತೀಯ ನಾಗರಿಕತೆಯ ಸಾಂಸ್ಕೃತಿಕ ಕುರುಹುಗಳಾಗಿವೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಸರ್ವರ ಸಹಭಾಗಿತ್ವ ಶ್ಲಾಘನೀಯ. ಮನುಷ್ಯನಿಂದಾಗಿರುವ ಪರಿಸರದ ಕಲುಷಿತ ವಾತಾವರಣವೇ ಹವಾಮಾನ ವೈರುಧ್ಯಗಳಿಗೆ ಕಾರಣವಾಗಿದೆ. ಹಾಗಾಗಿ, ಎಲ್ಲರು ಪರಿಸರವನ್ನು ಸಂರಕ್ಷಿಸುವ ಪಣತೊಡಬೇಕಿದೆ ಎಂದು ಕರೆ ನೀಡಿದರು.

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿ, ಹಳ್ಳಿಗಳು ನಗರಗಳಾಗುತ್ತಿರುವುದರಿಂದ ಮೂಲ ಸಂಸ್ಕೃತಿ, ಸಂಸ್ಕಾರಗಳು ನಾಶವಾಗದಂತೆ ನೋಡಿಕೊಳ್ಳಬೇಕಿದೆ. ತಾಯಂದಿರು ಮಕ್ಕಳಿಗೆ ಮನೆಯಲ್ಲೇ ಉತ್ತಮ ಸಂಸ್ಕಾರ ಕಲಿಸಿಕೊಡಬೇಕು. ಶಾಲೆಗಳಲ್ಲೂ ಸಂಸ್ಕಾರ ತುಂಬಿದ ಶಿಕ್ಷಣದ ಅಗತ್ಯವಿದೆ ಎಂದರು. ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಮೂರ್ತಿ, ಜಿಲ್ಲಾ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಾಂಬಶಿವಯ್ಯ ಮಾತನಾಡಿದರು.

ದೇವಾಲಯ ಸೇವಾ ಸಮಿತಿ ಅಧ್ಯಕ್ಷ ಕೆ.ಪಿ. ಮಲ್ಲಿಕಾರ್ಜುನ, ಉಪಾಧ್ಯಕ್ಷ ಧರ್ಮಪ್ಪ, ನಿರ್ದೇಶಕರು, ಪ್ರಮುಖರಾದ ಗುರುರಾಜ್, ಕೌಶಿಕ್, ಚಂದ್ರಶೇಖರ್ ಇತರರು ಹಾಜರಿದ್ದರು. ಹಸು-ಕರು ಜತೆ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ ನಡೆಯಿತು. ಉದ್ದೂರಿನ ಕಲಾವಿದ ರವಿಕುಮಾರ್ ತಂಡದವರ ವೀರಗಾಸೆ ನೃತ್ಯ ಭಕ್ತರನ್ನು ಆಕರ್ಷಿಸಿತು.