ಮಡಿಕೇರಿ, ಮೇ ೯: ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಬೇಸಿಗೆ ಮಳೆ ಜನತೆಯನ್ನು ಒಂದಷ್ಟು ಪರದಾಡುವಂತೆ ಮಾಡಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಮಾರ್ಚ್ ತಿಂಗಳಿನಿAದ ಆಗಾಗ್ಗೆ ಮಳೆಯಾಗಿದೆ. ವಿಶೇಷವಾಗಿ ನಾಪೋಕ್ಲು, ನೆಲಜಿ, ಕಕ್ಕಬೆ ವ್ಯಾಪ್ತಿಯಲ್ಲಿ ಸರಿಸುಮಾರು ಎಂಟತ್ತು ಇಂಚುಗಳಷ್ಟು ಮಳೆ ಸುರಿದಿದೆ. ಆದರೆ ಜಿಲ್ಲೆಯ ಹಲವಾರು ಭಾಗಗಳಲ್ಲಿ ಮಳೆಯೇ ಆಗುತ್ತಿಲ್ಲ. ಬೇಸಿಗೆ ಸಂದರ್ಭದಲ್ಲಿ ಅದರಲ್ಲೂ ಕಾಫಿ ಬೆಳೆಗಾರರು ಮಳೆಗಾಗಿ ಕಾಯುತ್ತಿರುತ್ತಾರೆ. ಕಾಫಿ ಬೆಳೆಗೆ ಈ ಮಳೆ ಅತ್ಯಗತ್ಯವೂ ಆಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಂತೂ ಕೌಟುಂಬಿಕ ಹಾಕಿ ಪಂದ್ಯಾವಳಿ ಸಂದರ್ಭ ನಡುನಡುವೆ ಭಾರೀ ಮಳೆಯೇ ಕಂಡುಬAದು ಪಂದ್ಯಕ್ಕೂ ಅಡಿಯಾಗಿತ್ತು. ಒಂದಷ್ಟು ಹೆಚ್ಚು ಮಳೆಯಾದ ಕಡೆಗಳಲ್ಲಿ ಪದೇ ಪದೇ ಮಳೆ ಕಂಡುಬರುತ್ತಿದೆ. ಮಳೆ ಕಡಿಮೆ ಬಿದ್ದಿರುವ ಪ್ರದೇಶಗಳಿಗೆ ಮಳೆಯ ಪ್ರಮಾಣ ಈತನಕದ ಅವಧಿಯಲ್ಲಿ ತೀರಾ ಕಡಿಮೆಯಿದೆ. ಕೆಲವು ಪ್ರದೇಶಗಳಲ್ಲಿ ಇನ್ನೂ ಒಂದು ಇಂಚಿನಷ್ಟೂ ಮಳೆ ಸುರಿದಿಲ್ಲ ಆದರೆ ಹಲವೆಡೆ ೧೦ ಇಂಚುಗಳಷ್ಟು ಮಳೆ ಬಿದ್ದಿರುವುದು ಪ್ರಕೃತಿಯಲ್ಲಿನ ಏರು - ಪೇರನ್ನು ಸಾಕ್ಷೀಕರಿಸುವಂತಿದೆ. ಪ್ರಸ್ತುತ ಸುಡುಬಿಸಿಲಿನ ವಾತಾವರಣವಿದ್ದು, ಕಳೆದ ಒಂದೆರಡು ದಿನಗಳಿಂದ ಮೋಡ ಆವರಿಸುತ್ತಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬೀಳುತ್ತಿಲ್ಲ. ನದಿ... ತೋಡುಗಳಲ್ಲಿ ನೀರಿನ ಹರಿವೂ ಕ್ಷೀಣಿಸಿದೆ. ಇದೀಗ ಮೇ ತಿಂಗಳ ೧೦ನೇ ದಿನ ಎದುರಾಗಿದೆ. ಇನ್ನೇನು ವಾಡಿಕೆಯಂತೆ ಸದ್ಯದಲ್ಲಿ ಮಳೆಗಾಲವೂ ಆರಂಭಗೊಳ್ಳುವ ನಿರೀಕ್ಷೆಯಿದೆ. ಪ್ರಸಕ್ತ ವರ್ಷ ಜೂನ್ ಆರಂಭದ ವೇಳೆಗೆ ಜಿಲ್ಲೆಗೆ ಮುಂಗಾರು ಅಡಿಯಿಡಲಿದೆ ಎಂದೂ ಹೇಳಲಾಗುತ್ತಿದೆ. ಆದರೆ ಬೇಸಿಗೆ ಸಂದರ್ಭದ ಅಡ್ಡಮಳೆ ಮಾತ್ರ ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಸಮಾನ ರೀತಿಯಲ್ಲಿ ಕಂಡು ಬಂದಿಲ್ಲ ಎಂಬುದು ಜನತೆಯ ಮಾತು. ಶನಿವಾರದಂದು ಕೆಲವು ವಿಭಾಗದಲ್ಲಿ ಅರ್ಧ ಇಂಚಿನಿAದ ಒಂದೂವರೆ ಇಂಚಿನಷ್ಟು ಮಳೆಯಾಗಿರುವ ಕುರಿತು ವರದಿಯಾಗಿದೆ. ಶ್ರೀಮಂಗಲ ಸನಿಹದ ಕಾಕೂರು, ಕುಮಟೂರು, ಪೇರ್ಮಾಡು ವ್ಯಾಪ್ತಿಯಲ್ಲಿ ೧.೫೦ ಇಂಚಿನಿAದ ೨ ಇಂಚುಗಳಷ್ಟು ಮಳೆಯಾಗಿದೆ.