ಮಡಿಕೇರಿ, ಮೇ ೯ : ಕನ್ನಡ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುವ ಮೂಲಕ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿದೆ ಎಂದು ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಿ.ಬಿ. ಶಿವಪ್ಪ ನುಡಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿಯ ಪತ್ರಿಕಾ ಭವನದಲ್ಲಿ ಏರ್ಪಡಿಸಿದ್ದ ೧೧೨ನೇ ಪರಿಷತ್ ಸಂಸ್ಥಾಪನಾ ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ ಎಂದೊಡನೆ ಕನ್ನಡಿಗರಲ್ಲಿ ರೋಮಾಂಚನವಾಗುತ್ತದೆ. ಯಾವ ಉದ್ದೇಶದಿಂದ ೧೧೨ ವರ್ಷಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿಂತನೆಯಿAದ ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭವಾಯಿತೋ ಆ ಉದ್ದೇಶ ಸಫಲವಾಗಿದೆ. ಕನ್ನಡ ನಾಡು-ನುಡಿ, ಆಚಾರ-ವಿಚಾರ, ಸಾಹಿತ್ಯ-ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ರಮ ಕನ್ನಡ ಸಾಹಿತ್ಯ ಪರಿಷತ್ ಮಾಡಿಕೊಂಡು ಬರುತ್ತಿದೆ ಎಂದರು. ಯುವಜನರು ಹೆಚ್ಚು ಸಾಹಿತ್ಯಿಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಕು. ಎಲ್ಲಿ ಹೆಚ್ಚು ಯುವಜನರು ತೊಡಗಿಸಿಕೊಳ್ಳುತ್ತಾರೋ ಆ ವಲಯ ಬೆಳೆಯುತ್ತಾ ಹೋಗುತ್ತದೆ. ಯುವಜನರನ್ನು ಸಾಹಿತ್ಯದೊಳಗೆ ಕರೆತರುವ ಕೆಲಸ ಆಗಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಒಂದು ಸಂಸ್ಥೆ ೧೧೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದಿಗೂ ತನ್ನ ಅಸ್ಮಿತೆ ಉಳಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದರು. ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಸ್ಥಾಪನೆ ಮಾಡುವ ಸಂದರ್ಭ ಹಾಕಿಕೊಟ್ಟ ಅಡಿಪಾಯ ಕನ್ನಡ ನಾಡು ನುಡಿ ರಕ್ಷಣೆಗಾಗಿ ರಾಜ್ಯಾದ್ಯಂತ ತಾಲೂಕು, ಜಿಲ್ಲಾ, ಹೋಬಳಿ, ಅಖಿಲ ಭಾರತ ಮಟ್ಟದ ಸಮ್ಮೇಳನಗಳನ್ನು ನಡೆಸುತ್ತಾ ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿ ಸರಕಾರದೊಂದಿಗೆ ಗುರುತಿಸಿಕೊಂಡು ಕೆಲಸ ಮಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುವುದು, ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಳ್ಳುವುದು ಒಂದು ಅದೃಷ್ಟವೇ ಸರಿ ಎಂದರು.
ಸಾಧಕರಿಗೆ ಸನ್ಮಾನ
ಕನ್ನಡ ನಾಡಿನ ಸೇವೆಗಾಗಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವ ಆರು ಜನ ಹಿರಿಯರನ್ನು ಗೌರವಿಸಿ ಸನ್ಮಾನಿಸಲಾಯಿತು. ವೀರಾಜಪೇಟೆ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ
ಮುಲ್ಲೇಂಗಡ ಮಧೋಶ್ ಪೂವಯ್ಯ, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ನ ಸ್ಥಾಪಕ ಅಧ್ಯಕ್ಷರು, ಸಾಹಿತಿ ಮತ್ತು ಕವಿ ವೈದ್ಯ ಮೇಚಿರ ಸುಭಾಷ್ ನಾಣ್ಯಯ್ಯ, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರು, ಸಾಂದೀಪನಿ ವಿದ್ಯಾಸಂಸ್ಥೆಯ ಅಧ್ಯಕ್ಷರು, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷ ಆಹ್ವಾನಿತರೂ ಆದ ಎಂ.ಟಿ. ದಾಮೋದರ್, ಬಾಳೆಲೆ ವಿಜಯಲಕ್ಷಿö್ಮ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಹಿರಿಯ ಪತ್ರಕರ್ತ, ಸಾಹಿತಿ, ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನ ಮಾಜಿ ಪ್ರಾಂಶುಪಾಲ ಕೆ.ಜಿ. ದಿವಾಕರ್ ಕೃಷಿಕರು, ಕಲಾವಿದರು ಎಂ.ಎನ್. ಕಾಳಪ್ಪ ಅವರುಗಳನ್ನು ಅವರ ಕನ್ನಡ ಸೇವೆಗಾಗಿ ಗುರುತಿಸಿ ಸನ್ಮಾನಿಸಲಾಯಿತು.
ಗ್ರಾಹಕರ ನ್ಯಾಯಾಲಯದ ಮಾಜಿ ಅಧ್ಯಕ್ಷರು, ಪ್ರಸ್ತುತ ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರರು ಆದ ಲೋಕೇಶ್ ಕುಮಾರ್ ಸನ್ಮಾನಿಸಿದರು. ಸನ್ಮಾನಿಸಿದ ನಂತರ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಹಲವು ಕನ್ನಡದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನನ್ನ ಊರಾದ ಸುಂಟಿಕೊಪ್ಪದಲ್ಲಿ ನಡೆಸುತ್ತಿದೆ. ಇಡೀ ಸುಂಟಿಕೊಪ್ಪ ಊರು ಸಮ್ಮೇಳನದಲ್ಲಿ ಭಾಗಿಯಾಗಿ ಸಮ್ಮೇಳನವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುತ್ತದೆ ಎಂದರು.
ಲಾAಛನ ಬಿಡುಗಡೆ
೧೭ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಈ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಬಿಡುಗಡೆಗೊಳಿಸಿದರು. ಸಾಹಿತ್ಯ ಪರಿಷತ್ತಿನ ಸದಸ್ಯರುಗಳಿಂದ ನಾಡಗೀತೆ, ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ನಿರೂಪಿಸಿದರು. ರೇವತಿ ರಮೇಶ್ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ವಂದಿಸಿದರು.