ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ, ಮೇ ೮: ದೇಶದ ಬಹುತೇಕ ರಾಜ್ಯಗಳಲ್ಲಿ ಜಾರಿಯಾಗಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಎಸ್ಐಆರ್ (ಸ್ಪೆಷಲ್ ಇಂಟೆನ್ಸಿವ್ ರಿವಿಜನ್) ಪ್ರಕ್ರಿಯೆ ಸದ್ಯದಲ್ಲೇ ಕರ್ನಾಟಕದಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಈಗಾಗಲೇ ರಾಜ್ಯದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಪೂರ್ವಭಾವಿಯಾಗಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯು, ಕೊಡಗು ಜಿಲ್ಲೆಯಲ್ಲಿ ಇದುವರೆಗೆ ಎರಡು ವಿಧಾನಸಭಾ ಕ್ಷೇತ್ರ ಸೇರಿ ಶೇ. ೯೩.೮೨ ಪೂರ್ಣಗೊಂಡಿದೆ.
ಜಿಲ್ಲೆಯ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨೦೨೫ರ ಮತದಾರರ ಪಟ್ಟಿಯಲ್ಲಿ ೨,೩೯,೩೧೭ ಮತದಾರರು ಇದ್ದಾರೆ. ಇದೀಗ ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ೨,೨೫,೭೯೧ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ. ೯೪.೩೫ ರಷ್ಟು ಪೂರ್ಣಗೊಂಡಿದೆ. ಮಡಿಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇನ್ನೂ ಕೂಡ ೧೩,೫೨೬ ಮತದಾರರ ಮ್ಯಾಪಿಂಗ್ ಆಗಬೇಕಿದೆ.
೨೦೨೫ರ ಮತದಾರರ ಪಟ್ಟಿಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨,೩೦,೯೦೨ ಮತದಾರರು ಇದ್ದಾರೆ. ಕ್ಷೇತ್ರದಲ್ಲಿ ಇದುವರೆಗೆ ೨,೧೫,೩೬೦ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ. ೯೩.೨೭ ರಷ್ಟು ಪೂರ್ಣಗೊಂಡಿದೆ. ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೧೫,೫೪೨ ಮತದಾರರ ಮ್ಯಾಪಿಂಗ್ ಬಾಕಿ ಉಳಿದಿದೆ. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ ೨೦೨೫ರ ಮತದಾರರ ಪಟ್ಟಿಯಲ್ಲಿ ೪,೭೦,೨೧೯ ಮತದಾರರು ಸ್ಥಾನ ಪಡೆದಿದ್ದರು. ಇದುವರೆಗೆ ಕೊಡಗಿನ ವೀರಾಜಪೇಟೆ ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರ ಸೇರಿ ೪,೪೧,೧೫೧ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಜಿಲ್ಲೆಯಲ್ಲಿ ೯೩.೮೨ ರಷ್ಟು ಗುರಿ ಸಾಧಿಸಿದೆ. ಜಿಲ್ಲೆಯಲ್ಲಿ ೨೯,೦೬೮ ಮತದಾರರ ಮ್ಯಾಪಿಂಗ್ ಆಗಬೇಕಿದೆ.
ಎರಡು ವಿಭಾಗಗಳಲ್ಲಿ ಮ್ಯಾಪಿಂಗ್ ಪ್ರಕ್ರಿಯೆ
ಮ್ಯಾಪಿಂಗ್ ಪ್ರಕ್ರಿಯೆ ಎರಡು ವಿಭಾಗಗಳಲ್ಲಿ ನಡೆಯುತ್ತಿದೆ. ೪೦ ವರ್ಷ ಮೇಲ್ಪಟ್ಟವರು ಹಾಗೂ ೪೦ ವರ್ಷ ಕೆಳಗಿನವರು ಎಂದು ಪ್ರತ್ಯೇಕಿಸಲಾಗಿದೆ. ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ೪೦ ವರ್ಷ ಮೇಲ್ಪಟ್ಟ ೨,೮೭,೦೬೮ ಮಂದಿ ಮತದಾರರು ಇದ್ದಾರೆ. ಇವರು ೨೦೦೨ರ ಮತದಾರ ಪಟ್ಟಿಗೆ ಸೇರಿದವರು ಎಂದು ಅಂದಾಜಿಸಲಾಗಿದೆ. ಈ ಪೈಕಿ ಜಿಲ್ಲೆಯಲ್ಲಿ ೪೦ ವರ್ಷ ಮೇಲ್ಪಟ್ಟ ೨,೦೬,೪೧೩ ಮತದಾರರ ನೇರ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ. ೭೧.೯೦ ರಷ್ಟು ಪೂರ್ಣಗೊಂಡಿದೆ. ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ೨,೩೪,೭೩೮ ಮಂದಿಯನ್ನು ತಮ್ಮ ತಂದೆ-ತಾಯಿ, ಅಥವಾ ಅಜ್ಜ-ಅಜ್ಜಿಯೊಂದಿಗೆ ಆ್ಯಡ್ ಪ್ರೋಗೆನ್ಸಿ (ಸಂತತಿ) ಮಾಡಲಾಗಿದೆ.
ಮ್ಯಾಪಿಂಗ್ ಸವಾಲು!
ಎಸ್ಐಆರ್ ಪೂರ್ವಭಾವಿಯಾಗಿ ನಡೆಯುತ್ತಿರುವ ಮತದಾರರ ಪಟ್ಟಿ ಮ್ಯಾಪಿಂಗ್ ಕಾರ್ಯ ಜಿಲ್ಲೆಯಲ್ಲಿ ಬಹುತೇಕ ಯಶಸ್ವಿಯಾಗಿ ನಡೆಯುತ್ತಿದೆ. ಮತಗಟ್ಟೆ ಅಧಿಕಾರಿ (ಬಿಎಲ್ಒ), ಶಿಕ್ಷಕರು, ಪಂಚಾಯಿತಿ ಸಿಬ್ಬಂದಿಗಳನ್ನು ಮ್ಯಾಪಿಂಗ್ ಪ್ರಕ್ರಿಯೆ ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಕೆಲವೊಂದು ಸವಾಲುಗಳ ನಡುವೆ ಮ್ಯಾಪಿಂಗ್ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಪ್ರಕ್ರಿಯೆ ಕಾರ್ಯ ನಡೆಯುತ್ತಿದೆ. ವಿಧಾನಸಭಾ ಕ್ಷೇತ್ರ ಬದಲಾದ ಮತದಾರರು, ಮದುವೆಯಾಗಿ ಬಂದವರು, ೨೦೦೨ರ ಮತದಾರರ ಪಟ್ಟಿಯಲ್ಲಿ ಇದ್ದು, ಗುರುತು ಪತ್ತೆಯಾಗದ ಮತದಾರರ ಮಾಹಿತಿ ಸಂಗ್ರಹಿಸುವುದು ಬಿಎಲ್.ಒ.ಗಳಿಗೆ ಸವಾಲಿನ ಕೆಲಸವಾಗಿದೆ. ಕೆಲವರು ಸರಿಯಾದ ಮಾಹಿತಿ ನೀಡುತ್ತಾರೆ. ಮದುವೆಯಾಗಿ ಬಂದವರ ಮಾಹಿತಿ ಕೇಳಿದರೂ ಕೆಲವರು ಹಿಂಜರಿಯುತ್ತಾರೆ. ಮ್ಯಾಪಿಂಗ್ ಮಾಡಿಸಲು ಆಸಕ್ತಿ ತೋರದವರು ಇದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದರು ಸಹಕಾರ ಮಾಡದ ಹಲವು ಮಂದಿ ಇದ್ದಾರೆ ಎಂದು ಮತಗಟ್ಟೆ ಅಧಿಕಾರಿ ಒಬ್ಬರು ಹೇಳುತ್ತಾರೆ. ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ ೨೦೦೨ರ ಮತದಾರರ ಪಟ್ಟಿಯನ್ನು ಸಿಇಒ ಕರ್ನಾಟಕ ಅಥವಾ ವೋಟರ್ಸ್ ಇಸಿಐ ವೆಬ್ಸೈಟ್ನಲ್ಲಿ ನೋಡಬಹುದು. ಮೊಬೈಲ್ನಲ್ಲಿ ‘ಇಸಿಎನ್ಇಟಿ’ ಆ್ಯಪ್ ಡೌನ್ಲೋಡ್ ಮಾಡಿ, ಅದರಲ್ಲಿ ಕನೆಕ್ಟಿವಿದ್ ಎಲೆಕ್ಷನ್ ಆಫೀಶಿಯಲ್ ಒತ್ತಿ, ನಿಮ್ಮ ವೋಟರ್ ಐಡಿ ಸಂಖ್ಯೆ ಹಾಕಿ ಸಬ್ಸಿಟ್ ಕೊಟ್ಟರೆ, ಬಿಎಲ್ಒ ಹೆಸರು, ಮೊಬೈಲ್ ಸಂಖ್ಯೆ ಸಿಗುತ್ತದೆ.೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದರೆ, ತಮ್ಮ ವಿಧಾನಸಭಾ ಕ್ಷೇತ್ರದ ಸಂಖ್ಯೆ, ಮತದಾರರ ಗುರುತಿನ ಚೀಟಿ ಸಂಖ್ಯೆ, ಭಾಗದ ಸಂಖ್ಯೆ, ಕ್ರಮ ಸಂಖ್ಯೆಯನ್ನು ತಮ್ಮ ಬಿ.ಎಲ್.ಒ.ಗಳಿಗೆ ನೀಡಿ ಮ್ಯಾಪಿಂಗ್ ಮಾಡಬಹುದಾಗಿದೆ. ೨೦೦೨ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ, ತಂದೆ-ತಾಯಿ ಅಥವಾ ಅಜ್ಜ-ಅಜ್ಜಿ ಅವರ ೨೦೦೨ರ ಮತದಾರ ಪಟ್ಟಿಯ ಮಾಹಿತಿಯನ್ನು ಬಿಎಲ್ಒಗಳಿಗೆ ನೀಡಿ ಮ್ಯಾಪಿಂಗ್ ಮಾಡಿಸಿಕೊಳ್ಳಬೇಕು. ಮತದಾರರು ಎಸ್ಐಆರ್ ಸಂದರ್ಭದಲ್ಲಿ ಚುನಾವಣಾ ಆಯೋಗ ಸೂಚನೆ ನೀಡುವ ತಮ್ಮ ದಾಖಲೆಗಳನ್ನು ನೀಡಬೇಕು ಇಲ್ಲದಿದ್ದರೆ, ಒಂದು ವೇಳೆ ಮತದಾರರ ಪಟ್ಟಿಯಿಂದಲೇ ಡಿಲಿಟ್ ಆಗುವ ಸಾಧ್ಯತೆ ಇದೆ. ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಇನ್ನೂ ಕೂಡ ಚಾಲ್ತಿಯಲ್ಲಿದ್ದು, ಮ್ಯಾಪಿಂಗ್ ಮಾಡದ ಮತದಾರರು ತಮ್ಮ ಮತಗಟ್ಟೆ ಅಧಿಕಾರಿಗೆ ಮಾಹಿತಿ ಮ್ಯಾಪಿಂಗ್ ಮಾಡಿಸಬಹುದಾಗಿದೆ. ಹಾಗೂ ಮ್ಯಾಪಿಂಗ್ ಆಗಿದೆ ಎಂದು ತಮ್ಮ ಬಿಎಲ್.ಒ ಬಳಿ ಪರಿಶೀಲನೆ ಕೂಡ ಮಾಡಬಹುದಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಪೂರ್ವಭಾವಿಯಾಗಿ ರಾಜ್ಯದಲ್ಲಿ ಈವರೆಗೆ ೪.೬೭ ಕೋಟಿ ಮತದಾರರ ವಿವರಗಳನ್ನು ಹೋಲಿಸಿ ನೋಡಲಾಗಿದೆ (ಮ್ಯಾಪಿಂಗ್). ಇನ್ನೂ ಸುಮಾರು ೯೦ ಲಕ್ಷ ಮತದಾರರ ವಿವರ ಮ್ಯಾಪಿಂಗ್ ಪ್ರಕ್ರಿಯೆ ಬಾಕಿ ಇದೆ.