ಮಡಿಕೇರಿ, ಮೇ ೬: ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ ಕವಿ, ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದ ಪತ್ರಿಕಾ ಭವನ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ಎಂ.ಪಿ ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಒಮ್ಮತದಿಂದ ಸರ್ವಾಧ್ಯಕ್ಷರ ಆಯ್ಕೆ ಮಾಡಲಾಗಿದೆ. ಮಡಿಕೇರಿ ತಾಲೂಕು ೧೨ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮಡಿಕೇರಿ ತಾಲೂಕಿನ ಕಡಂಗ (ಅರಪಟ್ಟು) ಗ್ರಾಮದಲ್ಲಿ ತಾ. ೨೦ ರಂದು ನಡೆಯಲಿದೆ.

ಐತಿಚಂಡ ರಮೇಶ್ ಉತ್ತಪ್ಪ ಅವರು ಹಿರಿಯ ಪತ್ರಕರ್ತರು ಮತ್ತು ಹೆಸರಾಂತ ಲೇಖಕರಾಗಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರಡ ಗ್ರಾಮದಲ್ಲಿ ಜನಿಸಿದರು. ವಿದ್ಯಾಭ್ಯಾಸವನ್ನು ಕೊಡಗು ಮತ್ತು ಮೈಸೂರಿನಲ್ಲಿ ಪೂರೈಸಿದ್ದಾರೆ. ಅವರು ಕನ್ನಡ ಜಾನಪದ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವೃತ್ತಿಜೀವನ ಮತ್ತು ಸಾಹಿತ್ಯ ಕೃಷಿಯನ್ನುಪತ್ರಿಕೋದ್ಯಮದ ಮೂಲಕ ಪ್ರಾರಂಭಿಸಿದ ಇವರು ದೀರ್ಘಕಾಲದಿಂದ ಪತ್ರಿಕೋದ್ಯಮದಲ್ಲಿದ್ದು, ಪ್ರಸ್ತುತ ಮೈಸೂರಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಸ್ಥಾನಿಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಮೇಶ್ ಉತ್ತಪ್ಪ ಅವರು ಇದುವರೆಗೆ ೪೦ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ವನ್ಯಜೀವಿ ಸಾಹಿತ್ಯದಲ್ಲಿ ಆಸಕ್ತರಾಗಿದ್ದು, ವಿಶೇಷವಾಗಿ ಆನೆಗಳ ಬಗ್ಗೆ ಅಪಾರ ಜ್ಞಾನ ಹೊಂದಿರುವ ಇವರು, ಆನೆಗಳ ಕುರಿತೇ ಸುಮಾರು ೧೦ ಪುಸ್ತಕಗಳನ್ನು ಬರೆದಿದ್ದಾರೆ. ಕೊಡವ ಭಾಷೆಯಲ್ಲಿಯೂ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರ ‘ಕೊಡಗಿನ ಆಟಿ ತಿಂಗಳ ಆಚರಣೆಯ ಅಚ್ಚರಿಗಳು’ ಎಂಬ ಲೇಖನವು ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಎಸ್ಸಿ ಪಠ್ಯಪುಸ್ತಕದಲ್ಲಿಯೂ ಸೇರ್ಪಡೆಯಾಗಿದೆ.