ಕುಶಾಲನಗರ, ಮೇ ೬: ಆನೆ-ಮಾನವ ಸಂಘರ್ಷ ತಪ್ಪಿಸಲು ವೈಜ್ಞಾನಿಕ ಯೋಜನೆ ರೂಪಿಸಲಾಗುತ್ತಿದೆ ಎಂದು ಅರಣ್ಯ ಜೀವಿಶಾಸ್ತç ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ದುಬಾರೆ ಪ್ರವಾಸಿ ಕೇಂದ್ರದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನೂತನ ತೂಗುಸೇತುವೆ ಹಾಗೂ ವಸತಿಗೃಹ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ವನ್ಯಜೀವಿಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜನರ ಅಮೂಲ್ಯ ಜೀವ ಹಾಗೂ ಬೆಳೆ ಹಾನಿ ತಪ್ಪಿಸಲು ಆಯ್ದ ಪ್ರದೇಶದಲ್ಲಿ, ಆಯ್ದ ವನ್ಯಜೀವಿಗಳ ಸಂತಾನ ನಿಯಂತ್ರಣದ ಸಲಹೆಗಳು ಬಂದಿದ್ದು, ಈ ಬಗ್ಗೆ ಸಾರ್ವಜನಿಕವಾಗಿ ತಜ್ಞರ ಮಟ್ಟದಲ್ಲಿ ಚರ್ಚೆ ಆಗುವ ಅಗತ್ಯವಿದೆ. ಆನೆ-ಮಾನವ ಸಂಘರ್ಷ ನಿಯಂತ್ರಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, ಅವರು ವರದಿ ನೀಡಿದ್ದಾರೆ. ಕಾಡಂಚಿನ ಜನರು ಕೂಡ ಈ ಬಗ್ಗೆ ಸಲಹೆ ನೀಡಬೇಕು ಎಂದರು. ರೈಲ್ವೆ ಬ್ಯಾರಿಕೇಡ್, ಆನೆಕಂದಕ ನಿರ್ಮಾಣಕ್ಕೆ ಹಣಕಾಸಿನ ಕೊರತೆ ಇಲ್ಲ. ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಆದಷ್ಟು ಶೀಘ್ರ ಹೆಚ್ಚಿನ ಬ್ಯಾರಿಕೇಡ್ ಅಳವಡಿಸಲಾಗುವುದು ಎಂದರು. ಪ್ರಸಕ್ತ ದಿನಗಳಲ್ಲಿ ನಗರೀಕರಣದ ನಡುವೆ ಅರಣ್ಯ ಪ್ರದೇಶಗಳು ಕ್ಷೀಣಗೊಳ್ಳುತ್ತಿದ್ದು, ಪ್ರಾಣಿಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅರಣ್ಯವಾಸಿಗಳು ಮತ್ತು ಅರಣ್ಯದಂಚಿನ ಜನರು ದೀರ್ಘ ಕಾಲದಿಂದ ಅರಣ್ಯವನ್ನು ಸಂರಕ್ಷಿಸಿದ್ದಾರೆ. ಅರಣ್ಯ ಸಂರಕ್ಷಣೆ ಎಲ್ಲರ ಕರ್ತವ್ಯ ಜೊತೆಗೆ ವನ್ಯಜೀವಿಗಳ ಮೂಲಕ ಪರಿಸರ ಸಮತೋಲನ ಕಾಪಾಡಬೇಕಾಗಿದೆ ಎಂದರು.

ಪ್ರವಾಸಿಗರ ಅನುಕೂಲಕ್ಕಾಗಿ ಮತ್ತು ದುಬಾರೆ ಹಾಡಿಯಲ್ಲಿರುವ ೧೫೦ ಮನೆಗಳ ನಿವಾಸಿಗಳಿಗೆ ತುರ್ತು ಸಂದರ್ಭ ಶಿಬಿರದಿಂದ ಹೊರ ಬರಲು ಅನುಕೂಲವಾಗುವಂತೆ ೭ ಕೋಟಿ ೩೦ ಲಕ್ಷ ರೂ. ವೆಚ್ಚದಲ್ಲಿ ಗುಣಮಟ್ಟದ ತೂಗುಸೇತುವೆ ನಿರ್ಮಿಸಲಾಗುತ್ತಿದೆ. ಈ ಮೂಲಕ ದೀರ್ಘ ಕಾಲದ ಬೇಡಿಕೆಯನ್ನು ಈಡೇರಿಸಲಾಗುತ್ತಿದೆ ಎಂದು ಈಶ್ವರ್ ಖಂಡ್ರೆ ಹೇಳಿದರು.

ಕೊಡಗು ಜಿಲ್ಲೆ ಜಗತ್ತಿನ ಜೀವವೈವಿಧ್ಯತೆಯ ತಾಣ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಾಗೂ ಹಲವು ನದಿಗಳ ಮೂಲವಾದ ಪಶ್ಚಿಮ ಘಟ್ಟವನ್ನು ಒಳಗೊಂಡ ಸುಂದರ ಪ್ರದೇಶ. ಇಲ್ಲಿ ನೂರಾರು ಪ್ರಭೇದದ ಸಸ್ಯ ಸಂಕುಲ, ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟಸಂಕುಲ ಇದ್ದು, ನೀವೆಲ್ಲರೂ ಇಂತಹ ಸುಂದರ ಪರಿಸರದಲ್ಲಿ ಜೀವನ ಕಾಣುತ್ತಿರುವ ತಾವುಗಳು ನಿಜಕ್ಕೂ ಅದೃಷ್ಟವಂತರು ಎಂದರು.

ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದ್ದೇವೆ. ಬೆಂಗಳೂರು ನಿವೃತ್ತರ ಸ್ವರ್ಗವಾಗಿತ್ತು. ಆದರೆ ಇಂದು ತಾಪಮಾನ ಏರಿಕೆ ಆಗುತ್ತಿದೆ. ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಳವಾಗುತ್ತಿದೆ. ಇದೆಲ್ಲ ಕಾಡು ನಾಶದ ಪರಿಣಾಮವಾಗಿದೆ. ಹೀಗಾಗಿ ಅರಣ್ಯ, ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ ಎಂದರು.

ಇAದಿರಾಗಾAಧಿ ಅವರು ಪ್ರಧಾನಮಂತ್ರಿಗಳಾಗಿ ವನ್ಯಜೀವಿ ಸಂರಕ್ಷಣಾ ಕಾಯಿದೆ, ಅರಣ್ಯ ಸಂರಕ್ಷಣಾ ಕಾಯಿದೆ ಜಾರಿಗೆ ತಂದ ಪರಿಣಾಮವಾಗಿ ಕಾಡು, ವನ್ಯಜೀವಿ ಸಂಕುಲ ಉಳಿದಿದೆ. ಪರಿಸರ ಸಮತೋಲನ ಕಾಪಾಡುವಲ್ಲಿ ವನ್ಯಜೀವಿಗಳ ಪಾತ್ರ ಮಹತ್ವದಾಗಿದ್ದು, ಕಾಡಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂದು ತಿಳಿಸಿದರು.

ಆನೆಗಳ ಚಲನವಲನದ ಬಗ್ಗೆ ನಿಗಾಇಡಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿದೆ. ನವೆಂಬರ್, ಡಿಸೆಂಬರ್ ಜನವರಿಯಲ್ಲಿ ಆನೆಗಳು ಕಾಡಿನಿಂದ ಹೊರಬರುತ್ತವೆ. ಆಗ ಪ್ರಾಣಿ ಮಾನವ ಸಂಘರ್ಷ ಹೆಚ್ಚಾಗುತ್ತದೆ, ತೋಟ ಜಮೀನು ಮಾಲೀಕರು ಕೂಡ ಆನೆಗಳ ವಿಚಾರದಲ್ಲಿ ಸೌಹಾರ್ದತೆಯಿಂದ ನಡೆದುಕೊಳ್ಳಬೇಕು ಎಂದರು.

ದುಬಾರೆ ಆನೆ ಶಿಬಿರಕ್ಕೆ ೧೦೦ ವರ್ಷಗಳ ಇತಿಹಾಸವಿದೆ. ಇಲ್ಲಿ ೧೫ ಕುಮ್ಕಿ ಆನೆಗಳಿದ್ದು, ದಸರಾ ಮಹೋತ್ಸವದಲ್ಲಿ ಭಾಗಿಯಾಗುತ್ತಿವೆ. ವಿವಿಧ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿವೆ. ಆನೆಗಳಿಗೆ ಪೂಜ್ಯ ಸ್ಥಾನ ಇದೆ. ಹೀಗಾಗಿ ನಾವು ವನ್ಯಜೀವಿಗಳ ಸಂರಕ್ಷಣೆಗೂ ಮುಂದಾಗಬೇಕು. ಕಾಡಿನಂಚಿನ ಜನರೊಂದಿಗೆ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಕಾನೂನು ಪಾಲಿಸಿ, ಜನರಿಗೆ ಅರಿವು ಮೂಡಿಸಿ, ಆದರೆ ಸಂಘರ್ಷ ಬೇಡ ಎಂದು ಕಿವಿಮಾತು ಹೇಳಿದರು.

ಅರಣ್ಯದಂಚಿನ ಜನರಿಗೆ ಅನುಕೂಲವಾಗುವಂತೆ ಹಲವು ಸೌಲಭ್ಯಗಳನ್ನು ವಿತರಿಸಲಾಗುತ್ತಿದೆ. ಅವರ ಜೀವನೋಪಾಯಕ್ಕೆ ನೆರವಾಗುವಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಶಾಲೆಗಳ ಅಭಿವೃದ್ಧಿಗೂ ಶ್ರಮಿಸುತ್ತಿದ್ದೇವೆ ಎಂದರು.

ಸೆಕ್ಷನ್ ೪, ಡೀಮ್ಡ್ ಅರಣ್ಯ ಮೊದಲಾದ ವಿಚಾರಗಳ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಆನೆ ಮಾನವ ಸಂಘರ್ಷ ಸಂದರ್ಭ ನಡೆಯುವ ಮಾನವ ಪ್ರಾಣಹಾನಿಗೆ ಪರಿಹಾರವಾಗಿ ಪ್ರಸಕ್ತ ರೂ. ೨೦ ಲಕ್ಷ ನೀಡಲಾಗುತ್ತಿದ್ದು, ಅದನ್ನು ೫೦ ಲಕ್ಷಕ್ಕೆ ಏರಿಸುವಂತೆ ಮನವಿ ಮಾಡಿದರು. ಕೊಡಗಿನಲ್ಲಿ ಆನೆ-ಮಾನವ ಸಂಘರ್ಷ ಹೆಚ್ಚಾಗಿದ್ದು, ತೋಟದ ಆನೆಗಳನ್ನು ಸ್ಥಳಾಂತರಿಸಲು ಕ್ರಮ ವಹಿಸಬೇಕು, ಬೆಳೆ ಹಾನಿಗೆ ಶೀಘ್ರ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಮರ ಕಡಿತಲೆ ಅರ್ಜಿ ವಿಲೇವಾರಿ ವಿಳಂಬವಾಗುತ್ತಿದ್ದು, ಸಾಮಾನ್ಯ ಜನರಿಗೆ ಕಿರಿಕಿರಿಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಸ್ಥಳೀಯ ಅಧಿಕಾರಿಗಳು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗಮನಹರಿಸುವಂತೆ ಕೋರಿದರು. ದುಬಾರೆ ತೂಗುಸೇತುವೆ ನಿರ್ಮಾಣದ ಮೂಲಕ ಹಾಡಿಯ ಗಿರಿಜನ ಕುಟುಂಬಕ್ಕೆ ಸಹಕಾರ ಆಗಲಿದೆ. ಪ್ರವಾಸಿ ಕೇಂದ್ರದ ಮೂಲಕ ನೆರೆಯ ಗ್ರಾಮಗಳ ಅಭಿವೃದ್ಧಿ ಆಗಿರುವುದಾಗಿ ಹೇಳಿದರು. ಪ್ರಾಣಿಗಳಿಂದ ಬೆಳೆ ಹಾನಿ ಆಗುವ ಸಂದರ್ಭ ರೈತರಿಗೆ ಪರಿಹಾರ ಪ್ರಮಾಣದಲ್ಲಿ ಏರಿಕೆಯಾಗಬೇಕು. ಇನ್ನು ಕೆಲವೆಡೆ ಸುಮಾರು ೨೫ ಕಿ.ಮೀ ಉದ್ದಕ್ಕೆ ರೈಲ್ವೆ ಬ್ಯಾರಿಕೇಡ್ ಅಥವಾ ಸೋಲಾರ್ ಬೇಲಿ ನಿರ್ಮಾಣ ಅಳವಡಿಕೆ ಆಗಬೇಕಿದೆ ಎಂದು ಗಮನ ಸೆಳೆದರು.

ಇದೇ ಸಂದರ್ಭ ಅರಣ್ಯ ಇಲಾಖೆಯ ಜನಸಂಪರ್ಕ ಕಾರ್ಯಕ್ರಮದಡಿ ಫಲಾನುಭವಿಗಳಿಗೆ ಜೇನುಪೆಟ್ಟಿಗೆ, ಕಾಡಂಚಿನ ಗ್ರಾಮದ ಮಹಿಳೆಯರಿಗೆ ಹೊಲಿಗೆ ಯಂತ್ರ ಇತ್ಯಾದಿ ಸೌಲಭ್ಯಗಳನ್ನು ವಿತರಿಸಲಾಯಿತು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯಪಡೆ ಮುಖ್ಯಸ್ಥರಾದ ಮೀನಾಕ್ಷಿ ನೇಗಿ, ಮುಖ್ಯ ವನ್ಯಜೀವಿ ಪರಿಪಾಲಕ ಕುಮಾರ್ ಪುಷ್ಕರ್, ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೊಡಗು ಅರಣ್ಯ ವೃತ್ತದ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಟಿ, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ ಅಭಿಷೇಕ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಮಹಾಂತ ಶಿವಲಿಂಗ ಸ್ವಾಮೀಜಿ, ಕಲ್ಲಹಳ್ಳಿ ಮಠದ ಶ್ರೀ ರುದ್ರಮುನಿ ಮಹಾಂತ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು. ಸೋಮವಾರಪೇಟೆ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಸ್ವಾಗತಿಸಿದರು. ತಾಲೂಕು ತಹಶೀಲ್ದಾರ್ ಕಿರಣ್ ಜಿ. ಗೌರಯ್ಯ, ವಲಯ ಅರಣ್ಯಾಧಿಕಾರಿ ರಕ್ಷಿತ್, ಉಪ ವಲಯ ಅರಣ್ಯ ಅಧಿಕಾರಿ ಕೆ.ಪಿ. ರಂಜನ್ ಮತ್ತಿತರರು ಇದ್ದರು.