ಸುಂಟಿಕೊಪ್ಪ, ಮೇ.೫: ಸುಂಟಿಕೊಪ್ಪ ಬಿಜೆಪಿ ಪಕ್ಷದ ಕಾರ್ಯಕರ್ತರು ಕನ್ನಡ ವೃತ್ತದಲ್ಲಿ ಜಮಾವಣೆಗೊಂಡು ೩ ರಾಜ್ಯಗಳಲ್ಲಿ ಭರ್ಜರಿ ಜಯಗಳಿಸಿದ ಹಿನ್ನೆಲೆ ಪಟಾಕಿ ಸಿಡಿಸಿ ವಿಜಯೋತ್ಸವ ನಡೆಸಿದರು.
ಕನ್ನಡ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು ದೇಶದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮಾಜಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ಅವರುಗಳಿಗೆ ಜಯಘೋಷಗಳನ್ನು ಕೂಗಿದರಲ್ಲದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್ ಸುನಿಲ್ ಕುಮಾರ್ ವಿಜಯೋತ್ಸವದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನರೇಂದ್ರ ಮೋದಿ ಅವರು ವಿಶ್ವಗುರು, ಅಲ್ಲದೆ ದೇಶದಲ್ಲಿ ಉತ್ತಮ ಆಡಳಿತಗಾರರಾಗಿದ್ದು, ದೇಶದ ಬಹುಪಾಲು ರಾಜ್ಯಗಳ ಆಡಳಿತದ ಚುಕ್ಕಾಣಿಯನ್ನು ಬಿಜೆಪಿ ಹಾಗೂ ಎನ್ಡಿಎ ಮಿತ್ರ ಕೂಟ ಪಕ್ಷಗಳು ಹಿಡಿದಿವೆ. ಈ ಬಾರಿ ನಡೆದ ಚುನಾವಣೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಗಳಲ್ಲಿ ಗೆಲುವು ಸಾಧಿಸಿ ಕೇರಳದಲ್ಲಿ ೩ ಸ್ಥಾನಗಳನ್ನು ಗೆದ್ದಿರುವುದು ಸಂತಸ ಎಂದರು.
ಈ ಸಂದರ್ಭ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷ ಧನು ಕಾವೇರಪ್ಪ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಬಿ.ಕೆ ಪ್ರಶಾಂತ್, ಪಕ್ಷದ ಹಿರಿಯ ಮುಖಂಡ ಡಿ ನರಸಿಂಹ, ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಗ್ರಾ.ಪಂ ಮಾಜಿ ಅಧ್ಯಕ್ಷೆ ಬಿ.ಐ ಭವಾನಿ, ಹಿರಿಯ ಮುಖಂಡ ಲೀಲಾ ಮೇದಪ್ಪ, ಸಹನಾ, ಕೆದಕಲ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಹಾಗೂ ಬಿಜೆಪಿ ಕಾರ್ಯರ್ತರು ಇದ್ದರು.