ವೀರಾಜಪೇಟೆ, ಮೇ ೫: ವೀರಾಜಪೇಟೆ ಪುರಸಭೆ ವ್ಯಾಪ್ತಿಯ ನೆಹರು ನಗರದಲ್ಲಿ ಶಾಸಕರ ವಿಶೇಷ ಅನುದಾನದಿಂದ ರೂ. ೧೪ ಲಕ್ಷ ವೆಚ್ಚದಲ್ಲಿ ಪಲ್ಲಾಟ್ ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಸಾರ್ವಜನಿಕರ ಹಾಗೂ ಭಕ್ತಾದಿಗಳ ಬಳಕೆಗೆ ಶಾಸಕರು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಶಾಸಕ ಪೊನ್ನಣ್ಣ ಅವರು, ಪುರಸಭೆ ಸದಸ್ಯರುಗಳು ಹಾಗೂ ಸ್ಥಳೀಯ ನಿವಾಸಿಗಳ ಕೋರಿಕೆ ಮೇರೆಗೆ ವಿಶೇಷÀ ಅನುದಾನದಿಂದ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ದೇವಸ್ಥಾನಕ್ಕೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ರಸ್ತೆ ನಿರ್ಮಾಣಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಅದರಂತೆ ರಸ್ತೆ ನಿರ್ಮಾಣ ಪೂರ್ಣ ಗೊಂಡಿದೆ. ಇನ್ನಷ್ಟು ಅಭಿವೃದ್ಧಿಯನ್ನು ಮುಂದಿನ ದಿನಗಳಲ್ಲಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಪುರಸಭೆ ಮಾಜಿ ಸದಸ್ಯ ಮಹಮ್ಮದ್ ರಾಫಿ ಮಾತನಾಡಿ, ಸ್ಥಳೀಯ ನಿವಾಸಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗಿತ್ತು. ನೆಹರು ನಗರದಲ್ಲಿ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಕೋರಿಕೊಂಡಾಗ ಶಾಸಕರು ವಿಶೇಷ ಅನುದಾನ ಒದಗಿಸಿಕೊಟ್ಟು ಸ್ಥಳೀಯ ಸಮಸ್ಯೆಗಳ ನೆರವಿಗೆ ನಿಂತಿದ್ದನ್ನು ಸ್ಮರಿಸಬಹುದು ಎಂದರು.
ಈ ಸಂದರ್ಭ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ನಾಚಪ್ಪ, ಶ್ರೀ ಪಲ್ಲಾಟ್ ಅಯ್ಯಪ್ಪ ದೇವಸ್ಥಾನ ಸಮಿತಿಯವರು, ಸ್ಥಳೀಯರಾದ ಸಂತೋಷ್, ಕಾಳಮಂಡ ಜಗತ್, ಅಪ್ಪಣ್ಣ, ನಯಾಜ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.