ಮಡಿಕೇರಿ, ಮೇ ೫: ಪ್ರಾಮಾಣಿಕ ರೀತಿಯಲ್ಲಿ ತಮ್ಮ ಶ್ರೀಮಂತ ಮತ್ತು ವಿಶಿಷ್ಟವಾದ ಮೂಲ ಸಂಸ್ಕೃತಿಯನ್ನು ಸಂರಕ್ಷಿಸಿಕೊAಡು ಹೋಗುವ ಮೂಲಕ ಕೊಡವ ಸಮುದಾಯವರು ಮಾದರಿಯಾಗಿದ್ದಾರೆ. ಈ ಮೂಲಕ ಪ್ರಪಂಚದಲ್ಲಿಯೇ ಕೊಡವರು ತಮ್ಮತನವನ್ನು ಮೆರೆಯುತ್ತಿದ್ದಾರೆ ಎಂದು ಹಾವೇರಿ ಕ್ಷೇತ್ರದ ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶ್ಲಾಘಿಸಿದರು.
ಮಾದಾಪುರ ಕೊಡವ ಸಮಾಜದ ನೂತನ ಭವನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಎಲ್ಲರೂ ಆಧುನೀಕತೆಯತ್ತ ನಾಗಾಲೋಟದಲ್ಲಿ ಸಾಗುತ್ತಿರುವಾಗ ಕೊಡವರು ಮಾತ್ರ ತಮ್ಮ ಹಳೇ ಸಂಸ್ಕೃತಿಯ ಬುನಾದಿಯೊಂದಿಗೆ ಆಧುನೀಕತೆಯನ್ನೂ ಅಳವಡಿಸಿಕೊಂಡು ಪ್ರಬಲ ಮತ್ತು ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ ಜನಾಂಗವಾಗಿದ್ದಾರೆ. ಕೊಡವರ ಈ ಜೀವನ ಕ್ರಮ ಎಲ್ಲಾ ಸಮುದಾಯಕ್ಕೂ ಮಾದರಿಯಾಗಿದೆ ಎಂದರು.
ಕೊಡಗಿನ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಸಾಕಷ್ಟು ಅನುದಾನ ನೀಡಿದ್ದನ್ನು ಸ್ಮರಿಸಿಕೊಂಡ ಬಸವರಾಜ ಬೊಮ್ಮಾಯಿ, ಅನುದಾನ ನೀಡಿದ್ದು ಖಂಡಿತಾ ಸಾಧನೆಯಲ್ಲ. ಕೊಡಗಿನ ಜನರು ಸರ್ಕಾರಕ್ಕೆ ನೀಡಿದ್ದ ಆರ್ಥಿಕ ಸಂಪನ್ಮೂಲವನ್ನು ಮತ್ತೆ ಕೊಡಗಿನ ಜನತೆಗೇ ನೀಡುವ ಮೂಲಕ ಪುಣ್ಯ ಸಂಪಾದನೆಯ ಅವಕಾಶ ಮಾತ್ರ ತನ್ನದಾಯಿತು. ಇದರಲ್ಲಿ ಹೆಚ್ಚುಗಾರಿಕೆಯಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದರು.
ತಮಗೆ ನೀಡಿದ ನೆರವನ್ನು ಕೊಡವರು ಎಂದಿಗೂ ಮರೆಯುವುದಿಲ್ಲ. ಹೀಗಾಗಿಯೇ ಕೊಡವರಿಗೆ ನೀಡಿದ ನೆರವು ಸದಾ ಕೃತಜ್ಞತಾಪೂರ್ವಕವಾಗಿ ಸ್ಮರಿಸಲ್ಪಟ್ಟು, ಮತ್ತಷ್ಟು ಕೊಡುಗೆ ನೀಡಲು ಮನಸ್ಸು ಪ್ರೇರೇಪಿಸುತ್ತದೆ ಎಂದು ಬಸವರಾಜ ಬೊಮ್ಮಾಯಿ ನುಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್, ಮಾದಾಪುರ ಕೊಡವ ಸಮಾಜದ ಭವನಕ್ಕೆ ಸಂಸದರ ಅನುದಾನದಲ್ಲಿ ೨೫ ಲಕ್ಷ ರೂ. ನೀಡುವುದಾಗಿ ಘೋಷಿಸಿ, ಇದು ಕೊಡವರಿಗೆ ಸಲ್ಲಬೇಕಾದ ಗೌರವದ ಅನುದಾನ ಎಂದರಲ್ಲದೇ, ಕೊಡವ ಸಂಸ್ಕೃತಿ ಸಂರಕ್ಷಣೆಗೆ ಈ ಭವನ ಸೂಕ್ತ ವೇದಿಕೆಯಾಗಲಿ ಎಂದು ಹಾರೈಸಿದರು.
ದೆಹಲಿಗೆ ತೆರಳಿದಾಗಲೆಲ್ಲಾ ತಾನು ಕೊಡಗನ್ನು ಪ್ರತಿನಿಧಿಸುವ ಸಂಸದ ಎಂದಾಗ ಪ್ರತೀಯೊರ್ವರೂ ಕೊಡಗಿನ ಹೆಸರು ಕೇಳಿದೊಡನೆ ಗೌರವದಿಂದ ನೋಡುತ್ತಾರೆ. ಕೊಡಗಿನ ಕೀರ್ತಿ ಸರ್ವರಿಗೂ ಪರಿಚಿತವಾಗಿರುವುದು ಹೆಮ್ಮೆ ತಂದಿದೆ ಎಂದು ನುಡಿದರು. ಬಸವರಾಜ ಬೊಮ್ಮಾಯಿವರು ಕರ್ನಾಟಕದಲ್ಲಿ ನೀರಾವರಿ ಸಚಿವರಾಗಿದ್ದ ಸಂದರ್ಭ ಕೆ.ಆರ್.ಎಸ್. ಹಾರಂಗಿ ಸೇರಿದಂತೆ ಕೊಡಗು, ಮೈಸೂರಿನ ವಿವಿಧ ನೀರಾವರಿ ಯೋಜನೆಗಳಿಗೆ ಅಗತ್ಯ ಅನುದಾನ ನೀಡಿ ಸಹಕರಿಸಿದ್ದನ್ನೂ ಯದುವೀರ್ ಕೃತಜ್ಞತಾಪೂರ್ವಕವಾಗಿ ಸ್ಮರಿಸಿದರು.
ವಿಧಾನಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಕೊಡವರ ಸಂಸ್ಕೃತಿಯ ಹಿರಿಮೆಯ ಸಂರಕ್ಷಣೆಗಾಗಿ ಕೊಡವ ಸಮಾಜಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ ಎಂದರಲ್ಲದೇ, ಮಾದಾಪುರ ಕೊಡವ ಸಮಾಜದ ಕಟ್ಟಡದ ಉಳಿದ ಕಾಮಗಾರಿಗಳಿಗೆ ಶಾಸಕರ ಅನುದಾನದಿಂದ ೧೦ ಲಕ್ಷ ರುಪಾಯಿ ನೀಡುವುದಾಗಿ ಘೋಷಿಸಿದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಮಾದಾಪುರ ವ್ಯಾಪ್ತಿಗೆ ಈ ನೂತನ ಕಟ್ಟಡ ಐನ್ ಮನೆಯಿದ್ದಂತೆ ಎಂದು ಹೇಳಿದರಲ್ಲದೇ, ಪ್ರಬಲವಾದ ಪರಂಪರೆ ಇರುವುದರಿಂದಾಗಿಯೇ ಕೊಡವರ ಅಸ್ತಿತ್ತವನ್ನು ಎಂದಿಗೂ ಅಲುಗಾಡಿಸಲಾಗುವುದಿಲ್ಲ. ತಮ್ಮ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯಗಳಿAದಾಗಿ ಕೊಡವರು ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ ಎಂದು ನುಡಿದರು.