ಕುಶಾಲನಗರ, ಮೇ.೫: ರಾಜ್ಯ ವಿಧಾನಸಭೆಯ ಎರಡು ಕ್ಷೇತ್ರಗಳ ಉಪಚುನಾವಣೆ ಮತ್ತು ಕೇರಳ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಪಟ್ಟಣದ ಗಣಪತಿ ದೇವಾಲಯ ಮುಂಭಾಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ ಶಶಿಧರ್ ನೇತೃತ್ವದಲ್ಲಿ ಸೇರಿದ ಕಾರ್ಯಕರ್ತರು ಪಕ್ಷದ ಪರ ಜಯಘೋಷ ಕೂಗಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳ ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಗಳಿಸಿದ ಬಿಜೆಪಿ ಪಕ್ಷದ ಪರವಾಗಿ ಕುಶಾಲನಗರ ನಗರ ನಗರ ಬಿಜೆಪಿ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗಿ ವಿಜಯೋತ್ಸವ ಆಚರಿಸಿದರು.
ನಗರ ಅಧ್ಯಕ್ಷ ಎಂ ಎಂ ಚರಣ್ ಅವರ ನೇತೃತ್ವದಲ್ಲಿ, ಪಟೇಲ್ ಗಣಪತಿ ದೇವಾಲಯ ಮುಂಭಾಗ ನಡೆದ ವಿಜಯೋತ್ಸವದಲ್ಲಿ ತಾಲೂಕು ಅಧ್ಯಕ್ಷರಾದ ಗೌತಮ್ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಪ್ರಮುಖರು ಪಟಾಕಿ ಸಿಡಿಸುವ ಮೂಲಕ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ಸಂದರ್ಭ ಸ್ಥಳದಲ್ಲಿದ್ದ ಕೆಲವು ಮಂದಿ ಟಿಬೆಟಿಯನ್ ಬೌದ್ಧ ಭಿಕ್ಷುಗಳು, ವಿದೇಶಿಯರು ಬಿಜೆಪಿ ಧ್ವಜ ಹಿಡಿದು ಬಿಜೆಪಿ ಪರ ಹಾಗೂ ಭಾರತದ ಪರ ಘೋಷಣೆ ಕೂಗಿ ಹರ್ಷ ವ್ಯಕ್ತಪಡಿಸಿದ ದೃಶ್ಯವೂ ಕಂಡು ಬಂತು.