ಗೋಣಿಕೊಪ್ಪಲು, ಮೇ ೫: ಸ್ವಾತಂತ್ರö್ಯ ಲಭಿಸಿ ಏಳುದಶಕಗಳು ಕಳೆದರೂ ಶೋಷಿತರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯವಾಗದ ಬಗ್ಗೆ ವಿಶ್ರಾಂತ ನ್ಯಾಯಮೂರ್ತಿಗಳು, ಹಾಗೂ ನಾಲ್ಸಾ ಸಂವಾದ ಯೋಜನೆಯ ಅಧ್ಯಕ್ಷರಾದ ಆರ್.ಗುರುರಾಜನ್ ವಿಷಾದವ್ಯಕ್ತಪಡಿಸಿದರು.
ತಿತಿಮತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಇವುಗಳ ಸಂಯುಕ್ತ ಆಶ್ರಯದಲ್ಲಿ ಬುಡಕಟ್ಟು ಜನಾಂಗದವರಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಹಾಗೂ ಕಾನೂನು ಅರಿವಿನಿಂದ ಬುಡಕಟ್ಟು ಜನಾಂಗದವರು, ಶೋಷಿತ ವರ್ಗದವರು ವಂಚಿತರಾಗಿದ್ದಾರೆ. ಇದನ್ನು ತಿಳಿಸುವುದಕ್ಕಾಗಿಯೇ ತಾನು ನಿಮ್ಮ ಬಳಿಗೆ ಬಂದಿದ್ದೇನೆ. ಪ್ರಮುಖವಾಗಿ ಎಲ್ಲರೂ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಯಾವುದೇ ಸವಲತ್ತುಗಳನ್ನು ಪಡೆಯಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಸಾಕಷ್ಟು ಬುಡಕಟ್ಟು ಜನಾಂಗದವರು ಆಧಾರ್ನಿಂದ ವಂಚಿತರಾಗಿದ್ದಾರೆ ಎಂಬ ಮಾಹಿತಿಯಿದೆ. ಸಂಬAಧಿಸಿದ ಅಧಿಕಾರಿಗಳಿಂದ ಆಧಾರ್ ಕಾರ್ಡ್ನ್ನು ಒದಗಿಸುವ ಕೆಲಸ ಮಾಡಲಾಗುತ್ತದೆ. ತಾಲೂಕು ಮಟ್ಟದ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ವರೆಗೂ ಬುಡಕಟ್ಟು ಜನಾಂಗ, ಶೋಷಿತ ಸಮುದಾಯ ಉಚಿತ ಕಾನೂನು ನೆರವು ಪಡೆಯುವ ಅವಕಾಶವಿದೆ. ತಮ್ಮ ತಮ್ಮ ವ್ಯಾಜ್ಯವನ್ನು ಅದಾಲತ್ ಮೂಲಕ ಬಗೆಹರಿಸುವ ಪ್ರಯತ್ನ ಮಾಡಲಾಗುತ್ತದೆ. ಇದಕ್ಕಾಗಿ ವರ್ಷಾನುಗಟ್ಟಲೆ ಸಮಯವನ್ನು ಹಾಳು ಮಾಡಿಕೊಳ್ಳದಿರಿ ಎಂದು ಸಲಹೆಯಿತ್ತರು.
ವೃದ್ಧಾಪ್ಯ, ವಿಧವಾ ವೇತನ,ಅಂಗವಿಕಲ ವೇತನ ಇತ್ಯಾದಿ ವೇತನಗಳನ್ನು ಜನರಿಗೆ ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಇದು ಪ್ರಸ್ತುತ ಸನ್ನಿವೇಶದಲ್ಲಿ ಸಾಕಾಗುವುದಿಲ್ಲ. ಸರ್ಕಾರಕ್ಕೆ ಈ ಬಗ್ಗೆ ವರದಿ ನೀಡಲಾಗಿದೆ. ಇಂತಹ ವೇತನಗಳನ್ನು ಹೆಚ್ಚು ಮಾಡುವ ಬಗ್ಗೆ ಸರ್ಕಾರ ನಿಲುವು ತೆಗೆದುಕೊಳ್ಳುವ ವಿಶ್ವಾಸವಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರು ಬಡವರು ಆಸ್ಪತ್ರೆಗೆ ಬಂದ ಸಂದರ್ಭ ಅವರೊಂದಿಗೆ ಉತ್ತಮವಾಗಿ ನಡೆದುಕೊಂಡು ಅವರಿಗಾಗಿ ಸ್ವಲ್ಪ ಸಮಯ ಮೀಸಲಿಡಬೇಕೆಂದು ವೈದ್ಯಕೀಯ ತಂಡಕ್ಕೆ ಗುರುರಾಜನ್ ಕಿವಿಮಾತು ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮಟ್ಟದ ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಅವರನ್ನು ಖುದ್ದು ನ್ಯಾಯಮೂರ್ತಿಗಳು ಸನ್ಮಾನಿಸಿ ಗೌರವಿಸಿದರು. ಬಡವರಿಗೆ ಉಚಿತವಾಗಿ ಸಿಗುವ ಸೌಲಭ್ಯಗಳ ಬಗ್ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ನಾಮಫಲಕವನ್ನು ಅಳವಡಿಸುವಂತೆ ತಿಳಿಸಿದರು.
ಅಧಿಕಾರಿ ಹೊನ್ನೇಗೌಡ ಮಾತನಾಡಿ, ಜಿಲ್ಲೆಯ ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಪರಿಶಿಷ್ಟ ವರ್ಗದ ಸಾಕಷ್ಟು ಮಂದಿ ಆಧಾರ್ನಿಂದ ವಂಚಿತರಾಗಿದ್ದಾರೆ. ಇವರಿಗೆ ಸವಲತ್ತುಗಳನ್ನು ನೀಡಲು ಅಗತ್ಯ ದಾಖಲಾತಿಗಳು ಲಭಿಸುತ್ತಿಲ್ಲ.
ಜಿಲ್ಲಾ ಕೇಂದ್ರ ಮಡಿಕೇರಿಗೆ ತೆರಳಿ ಆಧಾರ್ ಕಾರ್ಡ್ ಪಡೆಯಲು ಕಷ್ಟ ಸಾಧ್ಯ. ಆದ್ದರಿಂದ ಪ್ರತಿ ಹಾಡಿಗಳಲ್ಲಿ ಆಧಾರ್ ಕಾರ್ಡ್ ಪಡೆಯಲು ಹೊಸ ಕ್ಯಾಂಪ್ ಆರಂಭಿಸಲು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ್ ಶೆಟ್ಟಿ, ರಾಜ್ಯದಲ್ಲಿ ಬಾಲ್ಯ ವಿವಾಹಗಳು ಕಂಡು ಬರುತ್ತಿವೆ. ಇದೇ ವಿಚಾರದಲ್ಲಿ ಬುಡಕಟ್ಟು ಜನಾಂಗದ ಯುವಕರು ಜೈಲು ಪಾಲಾಗಿದ್ದಾರೆ. ಮೌಢ್ಯಗಳಿಗೆ ಬಲಿಯಾಗಿ ಬಾಲ್ಯವಿವಾಹ ಮಾಡಲು ಮುಂದಾಗದಿರಿ, ಬಾಲ್ಯ ವಿವಾಹ ಕಂಡು ಬಂದಲ್ಲಿ ಕೂಡಲೇ ಸಂಬAಧಿಸಿದ ಇಲಾಖೆಗೆ ನಾಗರಿಕರು ತಿಳಿಸಬೇಕು, ಇದರಿಂದ ಸಮಾಜದಲ್ಲಿ ಬಾಲ್ಯ ವಿವಾಹ ತಡೆಯಲು ಸಾಧ್ಯವಾಗಲಿದೆ ಎಂದರು.
ಜಿಲ್ಲಾ ಸರ್ಜನ್ ಡಾ.ನಂಜುAಡಯ್ಯ ಮಾತನಾಡಿ, ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ಚಿಕಿತ್ಸೆಗಳು ಉಚಿತವಾಗಿ ಬುಡಕಟ್ಟು ಜನಾಂಗ ಹಾಗೂ ಪರಿಶಿಷ್ಟ ಜಾತಿಯವರಿಗೆ ಲಭಿಸುತ್ತಿದೆ ಇದರ ಪ್ರಯೋಜನ ಪಡೆಯುವಂತೆ ಹೇಳಿದರು.
ವೇದಿಕೆಯಲ್ಲಿ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಡಿ.ಆರ್.ಪ್ರಸನ್ನ ಕುಮಾರ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ ನರ್ವಾಡೆ, ವೀರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್, ಸೇರಿದಂತೆ ಅನೇಕ ನ್ಯಾಯಾಧೀಶರು ಉಪಸ್ಥಿತರಿದ್ದರು.
ಕೊಡಗು ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶುಭ ಸ್ವಾಗತಿಸಿ, ಪ್ರಾಧಿಕಾರದ ಆಡಳಿತ ಸಹಾಯಕ ಬಿ.ಎಸ್.ಜಯಪ್ಪ ನಿರೂಪಿಸಿ, ಶಿಕ್ಷಕಿ ಚೈತ್ರ ಪ್ರಾರ್ಥಿಸಿ, ವಾಲ್ಮೀಕಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಪ್ರಶಾಂತ್ ವಂದಿಸಿದರು. ಕಾರ್ಯಕ್ರಮದಲ್ಲಿ ಬುಡಕಟ್ಟು ಜನಾಂಗದ ಫÀಲಾನುಭವಿಗಳಿಗೆ ಹಲವು ಸವಲತ್ತುಗಳನ್ನು ನ್ಯಾಯಮೂರ್ತಿಗಳು ವಿತರಿಸಿದರು. ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರುಗಳು ವಿವಿಧ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಶಿಬಿರಗಳನ್ನು ಉದ್ಘಾಟನೆ ಮಾಡಿದರು.
ಕಳಸ ಹಿಡಿದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ನ್ಯಾಯಮೂರ್ತಿಗಳು ಹಾಗೂ ನ್ಯಾಯಾಧೀಶರನ್ನು ವೇದಿಕೆಗೆ ಕರೆತಂದರು. ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯೆ ಪಿ.ಆರ್.ಪಂಕಜ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಮಣಿಕುಂಞ, ಚುಬ್ರು, ಪುಷ್ಪಾ, ಪಿ.ಕೆ.ಸಿದ್ದಪ್ಪ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ಆರಂಭದಲ್ಲಿ ನಾಡಗೀತೆ, ರಾಜ್ಯ ಪ್ರಾಧಿಕಾರದ ಧ್ಯೇಯಗೀತೆಯನ್ನು ಹಾಡಲಾಯಿತು. ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನ್ಯಾಯಮೂರ್ತಿಗಳನ್ನು ಹಾಗೂ ನ್ಯಾಯಾಧೀಶರುಗಳನ್ನು ಸಮಗ್ರ ಗಿರಿಜನ ಕಲ್ಯಾಣ ಇಲಾಖೆಯ ವತಿಯಿಂದ ಅಧಿಕಾರಿ ಹೊನ್ನೇಗೌಡ ಸನ್ಮಾನಿಸಿ ಗೌರವಿಸಿದರು. - ಹೆಚ್.ಕೆ.ಜಗದೀಶ್