ಚೆಟ್ಟಳ್ಳಿ, ಮೇ ೩: ಮೊಬೈಲ್, ಟಿವಿ ಮತ್ತು ಡಿಜಿಟಲ್ ಜಗತ್ತಿನ ನಡುವೆ ಪ್ರಕೃತಿಯಿಂದ ದೂರವಾಗುತ್ತಿರುವ ಇಂದಿನ ಮಕ್ಕಳನ್ನು ಮತ್ತೆ ನದಿ, ಕಾಡು ಮತ್ತು ಜೀವ ವೈವಿಧ್ಯದತ್ತ ಕರೆದೊಯ್ಯುವ ಅಪರೂಪದ ಪ್ರಯತ್ನಕ್ಕೆ ಕೂರ್ಗ್ ವೈಲ್ಡ್ಲೈಫ್ ಸೊಸೈಟಿ ಸಾಕ್ಷಿಯಾಯಿತು. ಕುಶಾಲನಗರ ಸಮೀಪದ ವಾಲ್ನೂರು ಕಾವೇರಿ ಹೊಳೆಯಲ್ಲಿ ನಡೆದ ಒಂದು ದಿನದ ವಿಶೇಷ ಕಾರ್ಯಾಗಾರ ಮಕ್ಕಳಿಗೆ ಕೇವಲ ಮನರಂಜನೆಯ ಕಾರ್ಯಕ್ರಮವಾಗಿರದೆ, ಪ್ರಕೃತಿಯೊಂದಿಗೆ ನೇರಸಂಪರ್ಕ ಬೆಳೆಸಿದ ಪಾಠಶಾಲೆಯಾಯಿತು.

ಸ್ಥಳೀಯ ೩೯ಕ್ಕೂ ಹೆಚ್ಚು ಮಕ್ಕಳು ತಮ್ಮ ಪಾಲಕರೊಂದಿಗೆ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ನದಿ ಪರಿಸರ ವ್ಯವಸ್ಥೆಯ ಮಹತ್ವವನ್ನು ಮಕ್ಕಳಿಗೆ ಸರಳ ಹಾಗೂ ಆಸಕ್ತಿದಾಯಕ ರೀತಿಯಲ್ಲಿ ಪರಿಚಯಿಸಲಾಯಿತು. ನದಿ ತೀರದ ಮರಗಳು, ಮಣ್ಣಿನ ಸಂರಕ್ಷಣೆ ಮಾಡುವುದರಿಂದ ಹಿಡಿದು, ನದಿಯಲ್ಲಿನ ಮೀನುಗಳು ಪರಿಸರ ಸಮತೋಲನ ಕಾಪಾಡುವಲ್ಲಿ ವಹಿಸುವ ಪಾತ್ರದವರೆಗೆ ಹಲವು ವಿಚಾರಗಳನ್ನು ಮಕ್ಕಳಿಗೆ ವಿವರಿಸಲಾಯಿತು.

ಮಹಶೀರ್ ಮೀನುಗಳು ಇಂದು ಅಸ್ತಿತ್ವದ ಸಂಕಷ್ಟ ಎದುರಿಸುತ್ತಿರುವ ಕುರಿತು ಮಕ್ಕಳಿಗೆ ತಿಳಿಸಲಾಯಿತು. ಅಕ್ರಮ ಮೀನುಗಾರಿಕೆ, ನದಿ ಮಾಲಿನ್ಯ ಹಾಗೂ ಪರಿಸರ ಹಾನಿಯಿಂದ ಈ ಮೀನುಗಳ ಸಂಖ್ಯೆ ಕುಸಿಯುತ್ತಿರುವ ವಿಷಯ ಮಕ್ಕಳಲ್ಲಿ ಕಳವಳ ಮೂಡಿಸಿತು.

ಹಾವುಗಳ ಕುರಿತು ಪವರ್‌ಪಾಯಿಂಟ್ ಪ್ರಸ್ತುತಿ ನಡೆಯಿತು. ಹಾವುಗಳು ಪ್ರಕೃತಿಯಲ್ಲಿ ಎಷ್ಟು ಮುಖ್ಯ ಎಂಬುದನ್ನು ಚಿತ್ರಗಳು ಹಾಗೂ ಮಾಹಿತಿಗಳ ಮೂಲಕ ವಿವರಿಸಲಾಯಿತು. ವಿಷಕಾರಿ ಮತ್ತು ಅವಿಷಕಾರಿ ಹಾವುಗಳ ವ್ಯತ್ಯಾಸ, ಹಾವುಗಳನ್ನು ಕಂಡಾಗ ಪಾಲಿಸಬೇಕಾದ ಎಚ್ಚರಿಕೆ ಹಾಗೂ ಹಾವುಗಳ ಸಂರಕ್ಷಣೆಯ ಅಗತ್ಯವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಂತರರಾಷ್ಟಿçÃಯ ಗೇಮ್ ಫಿಶಿಂಗ್ ಅಸೋಸಿಯೇಷನ್ ಪ್ರತಿನಿಧಿ ಡೆರೆಕ್ ಡಿಸೋಜ ಮಕ್ಕಳೊಂದಿಗೆ ಸಂವಾದ ನಡೆಸಿ ನದಿಗಳ ಸಂರಕ್ಷಣೆಯಲ್ಲಿ ಮುಂದಿನ ಪೀಳಿಗೆಯ ಪಾತ್ರ ಮಹತ್ವವಾದುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಕುಂಞAಗಡ ಬೋಸ್ ಮಾದಪ್ಪ, ಕಾರ್ಯದರ್ಶಿ ಚೇನಂಡÀ ಪಿ. ಅಯ್ಯಪ್ಪ, ಖಜಾಂಚಿ ಕೊರವಂಡ ಪ್ರಶಾಂತ್ ಅಯ್ಯಪ್ಪ, ಮಾಜಿ ಅಧ್ಯಕ್ಷ ಕೇಟೋಳಿರ.ಎ. ಚಂಗಪ್ಪ ಹಾಗೂ ಸಮಿತಿ ಸದಸ್ಯರಾದ ಕರ್ತಮಾಡ ನವೀನ್ ಬೋಪಯ್ಯ, ಪಟ್ಟಮಾಡ ಹೇಮ್ ಮಾದಪ್ಪ, ಚೇನಂಡ ದೇವಯ್ಯ, ಅದೀಪ್ ಕೋದಂಡ, ಐಚೆಟ್ಟೀರ ಶಿವು ಸುಬ್ಬಯ್ಯ, ಹಂಚೆಟೀರ ಚಿಟ್ಟಿಯಪ್ಪ ಮತ್ತು ಸಂಘದ ಹಿರಿಯ ಸದಸ್ಯ ಐಚೆಟ್ಟಿರ ಮ್ಯಾಕ್ ಮಾಚಯ್ಯ ಹಾಗೂ ಸಂಘದ ಇತರ ಸದಸ್ಯರು ಇದ್ದರು. - ಪುತ್ತರಿರ ಕರುಣ್ ಕಾಳಯ್ಯ