ಸೋಮವಾರಪೇಟೆ, ಮೇ ೩: ನಿವೇಶನ ರಹಿತರಿಗೆ ಸರ್ಕಾರಿ ಜಾಗದಲ್ಲಿ ನಿವೇಶನ ನೀಡಬೇಕೆಂದು ಆಗ್ರಹಿಸಿ ನೂರಾರು ಮಂದಿ ನಿವೇಶನ ರಹಿತರು ನಿನ್ನೆ ರಾತ್ರಿಯಿಂದಲೇ ಪ್ರತಿಭಟನೆಗೆ ಇಳಿದಿದ್ದು, ಅಧಿಕಾರಿಗಳಿಂದ ಮನವೊಲಿಸುವ ಯತ್ನ ವಿಫಲವಾದ ಹಿನ್ನೆಲೆ ಆಹೋರಾತ್ರಿ ಧರಣಿ ನಡೆಯಿತು.
ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆಗೆ ಇಳಿದ ನಿವೇಶನ ರಹಿತರು, ತಮಗೆ ಮನೆ ಕಟ್ಟಿಕೊಳ್ಳಲು ಜಾಗ ನೀಡಲೇಬೇಕೆಂದು ಪಟ್ಟು ಹಿಡಿದು ಧರಣಿ ಹಮ್ಮಿಕೊಂಡರು. ತಾಲೂಕಿನ ಗರಗಂದೂರು ಹಾಗೂ ಕುಂಬೂರು ಗ್ರಾಮ ವ್ಯಾಪ್ತಿಯ ಸ.ನಂ. ೧೨೫/೧ರಲ್ಲಿ ೨೯ ಏಕರೆ ಜಾಗದ ಪೈಕಿ ೨ ಎಕರೆ ಜಾಗವನ್ನು ಈ ಹಿಂದೆ ನಿವೇಶನ ರಹಿತರಿಗೆಂದು ಗುರುತಿಸಲಾಗಿತ್ತು. ಆದರೆ ಇತ್ತೀಚೆಗೆ ಆ ಜಾಗವೂ ಕಬಳಿಕೆಯಾಗಿದ್ದು, ನಮಗೆ ಸ್ವಂತ ನಿವೇಶನದ ಕನಸು ಮತ್ತೆ ಮುಸುಕಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಧರಣಿಯನ್ನು ಮುಂದುವರೆಸಿದರು.
ನಿನ್ನೆ ರಾತ್ರಿ ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಕೆ.ಕೆ. ಕೃಷ್ಣಮೂರ್ತಿ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ಕುಮಾರ್, ವಲಯ ಅರಣ್ಯಾಧಿಕಾರಿ ಶೈಲೇಂದ್ರಕುಮಾರ್ ಅವರುಗಳು ತೆರಳಿ ಪ್ರತಿಭಟನಾಕಾರರ ಮನವಿ ಆಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಇದಕ್ಕೆ ಒಪ್ಪದ ನಿವೇಶನ ರಹಿತರು ಧರಣಿಯನ್ನು ಮುಂದುವರೆಸಿದರು.
ಪೊಲೀಸ್ ಡಿವೈಎಸ್ಪಿ ಚಂದ್ರಶೇಖರ್, ಇನ್ಸ್ಪೆಕ್ಟರ್ ಮುದ್ದುಮಹದೇವ, ಸಬ್ ಇನ್ಸ್ಪೆಕ್ಟರ್ಗಳಾದ ಮೋಹನ್ರಾಜ್, ಖತೀಜಾ ಸೇರಿದಂತೆ ಸಿಬ್ಬಂದಿಗಳು ಸ್ಥಳದಲ್ಲಿದ್ದು, ಬಂದೋಬಸ್ತ್ ಕಲ್ಪಿಸಿದ್ದರು.
ಸ್ಥಳದಲ್ಲಿಯೇ ತಾತ್ಕಾಲಿಕ ಶೆಡ್ಗಳನ್ನು ನಿರ್ಮಿಸಿ, ಊಟ ತಯಾರಿಸಿ ರಾತ್ರಿ ಕಳೆದ ನಿವೇಶನ ರಹಿತರು, ಇಂದು ಬೆಳಗ್ಗಿನಿಂದಲೇ ಮತ್ತೆ ಮುಷ್ಕರ ಮುಂದುವರೆಸಿದರು.
ಸ.ನಂ. ೧೨೫/೧ರಲ್ಲಿ ೨೯ ಏಕರೆ ಜಾಗವಿದ್ದು, ೨೦೧೧ರಲ್ಲಿ ನವಗ್ರಾಮ ನಿರ್ಮಾಣಕ್ಕೆ ಜಿಲ್ಲಾಧಿಕಾರಿ ಆದೇಶದ ಮೇರೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಹೆಸರಿಗೆ ೨ ಏಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಈ ಜಾಗವನ್ನು ನಿವೇಶನ ರಹಿತರಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ನವಗ್ರಾಮಕ್ಕೆಂದು ಗುರುತಿಸಿದ ಸ.ನಂ. ಜಾಗದಲ್ಲಿ ಹದ್ದುಬಸ್ತು ಸರ್ವೆ ಮಾಡಬೇಕು. ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಬಹುಜನ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ಮೊಣ್ಣಪ್ಪ ಆಗ್ರಹಿಸಿದರು.
ನಿವೇಶನದ ಬಗ್ಗೆ ತಾರ್ಕಿಕ ಅಂತ್ಯ ಸಿಗುವವರೆಗೂ ನಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಅವರು ಹೇಳಿದರು.
ಇಂದೂ ಸಹ ತಹಶೀಲ್ದಾರ್ ಕೃಷ್ಣಮೂರ್ತಿ, ಡಿಸಿಎಫ್ ಅಭಿಷೇಕ್, ಎಸಿಎಫ್ ಗೋಪಾಲ್, ಆರ್ಎಫ್ಓ ಶೈಲೇಂದ್ರಕುಮಾರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್ಕುಮಾರ್ ಅವರುಗಳು ಸ್ಥಳಕ್ಕೆ ಭೇಟಿ ನೀಡಿ ಮತ್ತೊಮ್ಮೆ ಮನವೊಲಿಸಲು ಮುಂದಾದರು.
ತಹಶೀಲ್ದಾರ್ ಮಾತನಾಡಿ ಸ.ನಂ. ೧೨೫/೧ರಲ್ಲಿ ನವಗ್ರಾಮಕ್ಕೆ ಗುರುತು ಮಾಡಿರುವ ಜಾಗದ ದಾಖಲೆಗಳನ್ನು ಪರಿಶೀಲಿಸಿ, ತಾಲೂಕು ಪಂಚಾಯಿತಿಗೆ ಹಸ್ತಾಂತರಿಸಲಾಗುವುದು. ಮುಂದಿನ ಕ್ರಮವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಐಗೂರು, ಮಾದಾಪುರ, ಸುಂಟಿಕೊಪ್ಪ, ಮಾದಾಪುರ, ಕುಂಬೂರು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ನಿವೇಶನ ರಹಿತ ಕುಟುಂಬಗಳು ಮಕ್ಕಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು, ಸ್ಥಳದಲ್ಲಿಯೇ ಅಡುಗೆ ತಯಾರಿಸಿ, ಧರಣಿ ಮುಂದುವರೆಸಿದ್ದಾರೆ.
ತಾ. ೪ರಂದು (ಇಂದು) ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಧರಣಿ ಮುಂದುವರೆಸುವುದಾಗಿ ಘೋಷಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷ ಮಹೇಶ್, ಕಿರಣ್ ಜಗದೀಶ್, ಕಾರ್ಯದರ್ಶಿ ಶಿವಪ್ಪ, ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಪಿ.ಎ. ಕುಸುಮಾವತಿ ಅವರುಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ.