ನಾಪೋಕ್ಲು, ಮೇ ೨: ಕೌಟುಂಬಿಕ ಹಾಕಿ ಉತ್ಸವದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿಲ್ಲ. ಬದಲಿಗೆ ಐತಿಹ್ಯ ಮರುಕಳಿಸಿತಷ್ಟೆ..ಹೌದು ಹಾಕಿ ಉತ್ಸವದ ೨೬ ವರ್ಷಗಳ ಸುದೀರ್ಘ ಪಯಣದಲ್ಲಿ ಈ ಹಿಂದೆ ಮೂರು ಬಾರಿ ಪ್ರಶಸ್ತಿಗೆ ಭಾಜನವಾಗಿದ್ದ ಕುಲ್ಲೇಟಿರ ಕುಟುಂಬ ಮತ್ತೊಮ್ಮೆ ಚಾಂಪಿಯನ್‌ಪಟ್ಟ ಮುಡಿಗೇರಿಸಿಕೊಂಡಿತು. ೨ನೇ ಬಾರಿಗೆ ಫೈನಲ್ ತಲುಪಿದ್ದ ಚೆಪ್ಪುಡಿರ ಕುಟುಂಬದ ಚೊಚ್ಚಲ ಪ್ರಶಸ್ತಿ ಕನಸು ಈ ಬಾರಿಯೂ ಭಗ್ನಗೊಂಡಿತು.

ಕುಲ್ಲೇಟಿರ ಕುಟುಂಬ ೨೦೦೨ ರಲ್ಲಿ ಹುದಿಕೇರಿಯಲ್ಲಿ ನಡೆದಿದ್ದ ಚೆಕ್ಕೇರ ಕಪ್‌ನಲ್ಲಿ ೩ನೇ ಬಾರಿಗೆ ಪ್ರಶಸ್ತಿ ಪಡೆದಿದ್ದು, ನಂತರದಲ್ಲಿ ಚಾಂಪಿಯನ್ ಆಗಿರಲಿಲ್ಲ. ಇದೀಗ ೨೪ ವರ್ಷಗಳ ಅಂತರದ ಬಳಿಕ ಮತ್ತೊಮ್ಮೆ ಚಾಂಪಿಯನ್ ಪಟ್ಟ ಧರಿಸುವ ಮೂಲಕ ಒಟ್ಟು ನಾಲ್ಕನೇ ಪ್ರಶಸ್ತಿ ಪಡೆದ ಕೀರ್ತಿಗೆ ಪಾತ್ರವಾಯಿತು. ೨೦೦೫ರಲ್ಲಿ ನಡೆದ ನೆಲ್ಲಮಕ್ಕಡ ಕಪ್‌ನಲ್ಲಿ ಫೈನಲ್ ತಲುಪಿದ್ದರೂ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿದ್ದ ಚೆಪ್ಪುಡಿರ ತಂಡ ಈ ಬಾರಿ ಚೊಚ್ಚಲ ಪ್ರಶಸ್ತಿ ಗಳಿಸುವ ಭಾರೀ ನಿರೀಕ್ಷೆ ಹೊಂದಿತ್ತು. ಆದರೆ, ಹೊಸ ಇತಿಹಾಸ ಸೃಷ್ಟಿಯಾಗಲೇ ಇಲ್ಲ. ಕಿಕ್ಕಿರಿದು ನೆರೆದಿದ್ದ ಸಾವಿರಾರು ಕ್ರೀಡಾಪ್ರೇಮಿಗಳ ಸಮ್ಮುಖದಲ್ಲಿ ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ೨೬ನೆಯ ವರ್ಷದ ಹಾಕಿ ನಮ್ಮೆ..ಚೇನಂಡ ಕಪ್‌ನ ಫೈನಲ್ ಕದನ ತೀರಾ ರೋಮಾಂಚನಕಾರಿಯಾಗಿ ಜರುಗಿತು. ಅಪರಾಹ್ನ ೧..೪೫ರ ವೇಳೆಗೆ ಅಂತಿಮ ಹಣಾಹಣಿಗೆ ಚಾಲನೆ ನೀಡಲಾಯಿತು. ಸುದೀರ್ಘ ಅವಧಿಯ ತನಕ ಪಂದ್ಯ ಮುಂದುವರಿದು ಅಂತಿಮ ಫಲಿತಾಂಶ ೩.೪೦ರ ವೇಳೆಗೆ ನಿರ್ಧಾರವಾಯಿತು. ಕುಲ್ಲೇಟಿರ ತಂಡ ೩-೧ ಗೋಲಿನ ಅಂತರದಲ್ಲಿ ಚೆಪ್ಪುಡಿರ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಚೆಪ್ಪುಡಿರ ತಂಡದ ಆಟಗಾರ ವಚನ್ ಚಿಣ್ಣಪ್ಪ ಆಕರ್ಷಕ ಫೀಲ್ಡ್ ಗೋಲು ಬಾರಿಸಿ ತಂಡಕ್ಕೆ ಮುನ್ನಡೆ ತಂದಿತ್ತರು. ಇತ್ತಂಡಗಳ ಸಮಬಲದ ಹೋರಾಟ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿತ್ತು. ಮೊದಲ ಗೋಲು ಚೆಪ್ಪುಡಿರ ಪರ ಬಂದಾಗ ಚೆಪ್ಪುಡಿರ ಪಾಳಯದಲ್ಲಿ ಭಾರೀ ಸಂತಸ ಮನೆ ಮಾಡಿತ್ತು. ಆದರೆ ಕುಲ್ಲೇಟಿರ ಆಟಗಾರರು ಸಂಘಟನಾತ್ಮಕ ಹೋರಾಟ ಮುಂದುವರಿಸಿದ್ದರು. ಈ ಹಂತದಲ್ಲಿ ಕುಲ್ಲೇಟಿರ ಲೋಕೇಶ್ ಎರಡನೇ ಕ್ವಾರ್ಟರ್‌ನಲ್ಲಿ ಆಕರ್ಷಕ ಗೋಲು ಬಾರಿಸಿ ಅಂತರವನ್ನು ೧-೧ ರಿಂದ ಸಮಗೊಳಿಸಿದರು. ಇಡೀ ಮೈದಾನದಲ್ಲಿ ಪ್ರೇಕ್ಷಕರ ಹÀರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೂರು ಹಾಗೂ ನಾಲ್ಕನೇ ಕ್ವಾರ್ಟರ್ ಮತ್ತಷ್ಟು ಚುರುಕಿನ ಆಟದ ಪ್ರದರ್ಶನ ಕಂಡಿತು. ಕುಲ್ಲೇಟಿರ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಅವನೀಶ್ ಮಂದಪ್ಪ ಅತ್ಯಾಕರ್ಷಕವಾಗಿ ಚೆಂಡನ್ನು ಎದುರಾಳಿ ತಂಡದ ಗೋಲು ಪೆಟ್ಟಿಗೆಯೊಳಗೆ ತಳ್ಳಿ ೨-೧ರ ಮುನ್ನಡೆ ಪಡೆದಾಗ ಕುಲ್ಲೇಟಿರ ಪಾಳಯ ಕುಣಿದು ಕುಪ್ಪಳಿಸಿತು. ನಾಲ್ಕನೇ ಕ್ವಾರ್ಟರ್‌ನಲ್ಲಿ ಕುಲ್ಲೇಟಿರ ಮುನ್ನಡೆ ಪಡೆದಿತ್ತು. ೪೪Àನೇ ಪುಟಕ್ಕೆ

ಇದನ್ನು ಸರಿಗಟ್ಟಲು ಚೆಪ್ಪುಡಿರ ಆಟಗಾರರು ಸತತ ಹೋರಾಟ ನಡೆಸಿದರಾದರೂ ಯಶಸ್ಸು ಕಾಣಲಿಲ್ಲ. ಬದಲಿಗೆ ಈ ಹಂತದಲ್ಲಿ ಕುಲ್ಲೇಟಿರ ಶುಭಂ ಚಿಟ್ಟಿಯ್ಯಪ್ಪ ಮತ್ತೊಂದು ಗೋಲು ಬಾರಿಸಿ ಅಂತರ ೩-೧ಕ್ಕೆ ಏರಿದಾಗ ಕುಲ್ಲೇಟಿರ ವಿಜಯ ಬಹುತೇಕ ಖಚಿತವಾಗಿತ್ತು. ಪಂದ್ಯಾವಳಿಯುದ್ದಕ್ಕೂ ಎರಡೂ ತಂಡಗಳಿಗೆ ಪ್ರೇಕ್ಷಕರಿಂದ ಬೆಂಬಲ ಕಂಡುಬAದಿತ್ತು. ಬ್ಯಾಂಡ್, ಕೊಳಲುವಾದನದೊಂದಿಗೆ ಯುವಕರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಕುಲ್ಲೇಟಿರ ವಿಜಯಗಳಿಸಿದೊಡನೆ ಗ್ಯಾಲರಿಯಲ್ಲಿ ನೆರೆದಿದ್ದವರು ಮೈದಾನಕ್ಕೆ ಇಳಿದು ಆಟಗಾರರನ್ನು ಎತ್ತಿಕೊಂಡು ಹರ್ಷ ವ್ಯಕ್ತಪಡಿಸಿದರು. ಚೊಚ್ಚಲ ಪ್ರಶಸ್ತಿಯ ನಿಟ್ಟಿನಲ್ಲಿ ಸಾಗಿದ್ದ ಚೆಪ್ಪುಡಿರ ಆಟಗಾರರು ಭಾರದ ಹೃದಯದ, ಕಣ್ಣಂಚಿನಲ್ಲಿ ಹರಿಯುತ್ತಿದ್ದ ಕಣ್ಣೀರಿನೊಂದಿಗೆ ಮೈದಾನದಿಂದ ನಿರ್ಗಮಿಸುತ್ತಿದ್ದುದು ಕಂಡುಬAದಿತು. ವೀಕ್ಷಕ ವಿವರಣೆಗಾರರಾಗಿ ಮಾಳೇಟಿರ ಶ್ರೀನಿವಾಸ್, ಚೇನಂಡ ಸಂಪತ್, ಚೋಕಿರ ಅನಿತಾ, ಅಜ್ಜೇಟಿರ ವಿಕ್ರಂ ಕಾರ್ಯನಿರ್ವಹಿಸಿದರು.