ಮಡಿಕೇರಿ, ಮೇ.೨: ಕೊಡಗು ಗೌಡ ಯುವ ವೇದಿಕೆ ವತಿಯಿಂದ ೧೦ ಕುಟುಂಬ ೧೮ ಗೋತ್ರದ ಗೌಡ ಕುಟುಂಬಗಳ ನಡುವೆ ಏರ್ಪಡಿಸಲಾಗಿರುವ ಕುಟುಂಬ -೨೦೨೬ ಕ್ರೀಡಾಕೂಟದ ಕ್ರಿಕೆಟ್ ಪಂದ್ಯಾವಳಿಗೆ ಹಾಸನದ ಅಬಕಾರಿ ಇಲಾಖೆ ಉಪ ಆಯುಕ್ತರಾದ ನಂಗಾರು ಸುಮಿತ್ರ ನಿಂಗರಾಜು ಚಾಲನೆ ನೀಡಿದರು.

ಜ. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿತವಾಗಿರುವ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಂದ್ಯಾವಳಿಗೆ ಉತ್ತಮ ಸ್ಪಂದನ ದೊರಕಿರುವುದು ಸಂತೋಷದ ವಿಚಾರ. ಎಲ್ಲ ಕುಟುಂಬಗಳನ್ನು ಬೆಸೆಯಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ. ಯಾವುದೇ ವಯಸ್ಸಿನ ಮಿತಿ ಇಲ್ಲದೆ ಹಿರಿಯರು ಕಿರಿಯರು ಎನ್ನುವ ಭೇದ ಬಾವವಿಲ್ಲದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು, ಪಂದ್ಯಾವಳಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.

ಇದೇ ಸಂದರ್ಭ ಕೊಡಗು ಗೌಡ ಯುವ ವೇದಿಕೆ ಆಡಳಿತ ಮಂಡಳಿ ಹಾಗೂ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘದ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕಾರ್ಯನಿರತ ಪತ್ರಕರ್ತರ ಸಂಘ ಐದು ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ೮೪ ರನ್ ಕಲೆ ಹಾಕಿತು. ಬಳಿಕ ಬ್ಯಾಟ್ ಮಾಡಿದ ಕೊಡಗು ಗೌಡ ಯುವ ವೇದಿಕೆ ತಂಡ ಐದು ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಕೇವಲ ೬೬ ರನ್ ಗಳಿಸುವ ಮೂಲಕ ಸೋಲು ಅನುಭವಿಸಿತು. ಆ ಮೂಲಕ ಪ್ರದರ್ಶನ ಪಂದ್ಯದಲ್ಲಿ ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ ೧೮ ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಕಾರ್ಯಕ್ರಮದಲ್ಲಿ ಗೌಡ ಯುವ ವೇದಿಕೆಯ ಅಧ್ಯಕ್ಷ ಬಾಳಾಡಿ ಮನೋಜ್, ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರಿಷಿತ್ ಮಾದಯ್ಯ, ಉಪಾಧ್ಯಕ್ಷ ಎಡಿಕೇರಿ ಪ್ರಸನ್ನ ಸೇರಿದಂತೆ ಗೌಡ ಯುವ ವೇದಿಕೆ ಪದಾಧಿಕಾರಿಗಳು, ಸದಸ್ಯರು ಹಾಗೂ ವಿವಿಧ ಭಾಗದಿಂದ ಆಗಮಿಸಿದ್ದ ಗೌಡ ಕುಟುಂಬದ ಕ್ರೀಡಾಪಟುಗಳು ಹಾಜರಿದ್ದರು.

ಕುಡೆಕಲ್ಲು- ಕಡ್ಲೇರ ಮುನ್ನಡೆ

ಇಂದು ನಡೆದ ಪಂದ್ಯಾವಳಿಯಲ್ಲಿ ಲಿಂಗಪ್ಪನ ತಂಡ ಬಾರದ ಕಾರಣ ಬಡುವಂಡ್ರ ವಾಕ್ ಓವರ್ ಮೂಲಕ ಮುನ್ನಡೆ ಸಾಧಿಸಿತು. ಬಾಳಾಡಿ ಹಾಗೂ ಸೆಟ್ಟೆಜನ ನಡುವಿನ ಪಂದ್ಯದಲ್ಲಿ ಬಾಳಾಡಿ ತಂಡ ೪೦ ರನ್‌ಗಳ ಅಂತರದಿAದ ಜಯ ಸಾಧಿಸಿತು. ಪೂಜಾರೀರ ಹಾಗೂ ಮೂಟೇರ ತಂಡಗಳ ನಡುವಿನ ಪಂದ್ಯದಲ್ಲಿ ಮೂಟೇರ ೧೩ ರನ್‌ಗಳ ಜಯ ಸಾಧಿಸಿತು. ಬಾಳಾಡಿ ಹಾಗೂ ಕುಡೆಕಲ್ಲು ತಂಡಗಳ ನಡುವಿನ ಮತ್ತೊಂದು ಪಂದ್ಯದಲ್ಲಿ ಬಾಳಾಡಿ ತಂಡ ೩೬ ರನ್ ಗಳಿಸಿದರೆ, ಕುಡೆಕಲ್ಲು ತಂಡ ಕೇವಲ ಎರಡು ಓವರ್‌ಗಳಲ್ಲಿ ಗುರಿ ಸಾಧಿಸಿತು. ಮೂಟೇರ ಹಾಗೂ ಕಡ್ಲೇರ ತಂಡಗಳ ನಡುವಿನ ಇನ್ನೊಂದು ಪಂದ್ಯದಲ್ಲಿ ಕಡ್ಲೇರ ತಂಡ ಜಯ ಗಳಿಸಿತು. ಬಡುವಂಡ್ರ ಹಾಗೂ ಕಡ್ಲೇರ ತಂಡಗಳ ನಡುವಿನ ಪಂದ್ಯದಲ್ಲಿ ಕಡ್ಲೇರ ಮುನ್ನಡೆ ಸಾಧಿಸಿತು.