ಐಗೂರು, ಏ. ೩೦ : ಇತ್ತೀಚಿನ ದಿನಗಳಲ್ಲಿ ಬಿಸಿಲ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮಳೆಯ ಕೊರತೆಯಿಂದ ಅಂತರ್ಜಲ ಕುಸಿತ ಆತಂಕಕ್ಕೆ ಕಾರಣವಾಗಿದೆ. ಐಗೂರು ಗ್ರಾಮ ವ್ಯಾಪ್ತಿಯಲ್ಲಿ ಬಾವಿಗಳು ಸಂಪೂರ್ಣ ಬತ್ತಿದ್ದು ಬೋರ್ವೆಲ್‌ಗಳಲ್ಲಿನ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿದೆ. ಚೋರನ ಹೊಳೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗಿದ್ದು ಹೊಳೆಯಲ್ಲಿ ನೀರಿನ ಬದಲು ಕಲ್ಲು ಬಂಡೆಗಳೇ ಕಾಣುತ್ತಿವೆ. ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರಿತಪಿಸುವ ಜೊತೆಗೆ ಮೇವಿಲ್ಲದೆ ಒಣಗಿದ ಕಡ್ಡಿಗಳನ್ನು ತಿನ್ನುತ್ತಿವೆ. ಕೂಲಿ ಕೆಲಸ ಮಾಡುವ ಜನರು ಮರದ ನೆರಳನ್ನು ಆಶ್ರಯಿಸುತ್ತಿದ್ದು, ಬಾಯಾರಿಕೆ ಆದಾಗ ಪಕ್ಕದ ಬೋರ್ವೆಲ್‌ನ ಕೈ ಪಂಪುಗಳನ್ನು ಆಡಿಸುತ್ತಿದ್ದಾರೆ. ಕೆಲವು ತಿಂಗಳುಗಳಿAದ ಸರಿಯಾದ ಮಳೆ ಬೀಳದ ಹಿನ್ನೆಲೆ ಭೂಮಿಯೊಳಗಿನ ನೀರಿನ ಸಂಗ್ರಹಣೆಗೆ ಬಾರಿ ಹೊಡೆತ ಬಿದ್ದಿದೆ. ಆಗಾಗ ಮಳೆ ಬರುವ ಮುನ್ಸೂಚನೆ ಕಂಡು ಬರುತ್ತಿದ್ದರೂ, ಮಳೆ ಕೈ ಕೊಡುತ್ತಿದೆ. ಇದರಿಂದ ರೈತರು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಕಾಫಿ, ಕಾಳು ಮೆಣಸು ಬೆಳೆಗಳಿಗೆ ನೀರಿನ ಕೊರತೆ ಉಂಟಾಗಿ ಉತ್ಪಾದನೆ ಕುಸಿಯುವ ಭೀತಿ ಎದುರಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುವ ಸಾಧ್ಯತೆ ಇದೆ. ತೀವ್ರ ಬಿಸಿಲಿನ ಪರಿಣಾಮವಾಗಿ ಅರಣ್ಯ ನಾಶ, ಅತಿಯಾದ ಅಂತರ್ಜಲ ಶೋಷಣೆ, ಕೆರೆ ಕೊಳಗಳ ನಿರ್ಲಕ್ಷ್ಯ ಹಾಗೂ ಹವಾಮಾನ ವೈಪರಿತ್ಯಗಳನ್ನು ತಜ್ಞರು ಸೂಚಿಸಿದ್ದಾರೆ. ಪರಿಸರ ಸಮತೋಲನ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿದ ಪರಿಣಾಮವೇ ಇಂದಿನ ಈ ಬಿಕ್ಕಟ್ಟಿಗೆ ಕಾರಣವೆಂದು ಅಭಿಪ್ರಾಯ ವ್ಯಕ್ತವಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ಮಳೆ ನೀರು ಸಂಗ್ರಹಣೆ ವ್ಯವಸ್ಥೆಗಳನ್ನು ಕಡ್ಡಾಯಗೊಳಿಸುವುದು, ಕೆರೆ-ಕೊಳಗಳ ಪುನರುಜ್ಜೀವನ, ಅರಣ್ಯ ಅಭಿವೃದ್ಧಿ, ಮತ್ತು ಜಲ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ . ಮನೆಗಳಲ್ಲಿ, ಸಮಾರಂಭಗಳಲ್ಲಿ ಮಿತವಾದ ನೀರಿನ ಬಳಕೆ, ನೀರು ಪೋಲಾಗದಂತೆ ಗಮನ ಹಾಗೂ ಸಂರಕ್ಷಣೆಯಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ .ಇಲ್ಲವಾದರೆ ಮುಂದಿನ ದಿನಗಳಲ್ಲಿ ನೀರಿನ ಸಂಕಷ್ಟ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. - ಸುಕುಮಾರ್