ಮಡಿಕೇರಿ, ಏ. ೩೦: ವೀರಾಜಪೇಟೆಯಲ್ಲಿ ಉಚ್ಚನ್ಯಾಯಾಲಯದ ಪೀಠವನ್ನು ಸ್ಥಾಪಿಸುವಂತೆ ಕೋರಿ ಜಿಲ್ಲೆಯ ವಕೀಲರುಗಳು ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ವಿಭುಬಕ್ರು ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಬೆಂಗಳೂರಿನ ಉಚ್ಚನ್ಯಾಯಾಲಯ ಹಾಗೂ ದೆಹಲಿಯ ಸರ್ವೋಚ್ಛ ನ್ಯಾಯಾಲಯದ ಹಿರಿಯ ವಕೀಲರಾದ ಎನ್. ರವೀಂದ್ರನಾಥ್ ಕಾಮತ್, ಉಚ್ಚನ್ಯಾಯಾಲಯದ ಹಿರಿಯ ವಕೀಲರಾದ ಎಂ.ಟಿ. ನಾಣಯ್ಯ ಸೇರಿದಂತೆ ಇತರ ಕೊಡಗಿನ ವಕೀಲರ ನಿಯೋಗ ಭೇಟಿಯಾಗಿ ಈ ಬಗ್ಗೆ ಗಮನ ಸೆಳೆಯಿತು.

ಕೊಡಗಿನ ಬಡರೈತರು ಹಾಗೂ ನಾಗರಿಕರು ತಮ್ಮ ವ್ಯಾಜ್ಯಗಳ ಸಂಬAಧ ದೂರದ ಬೆಂಗಳೂರಿಗೆ ಬರಬೇಕಾಗಿದ್ದು, ಇದರಿಂದ ಶ್ರಮ, ಸಮಯ ವ್ಯರ್ಥದೊಂದಿಗೆ ಆರ್ಥಿಕ ನಷ್ಟ ಉಂಟಾಗುತ್ತಿದೆ.ಈ ಹಿನ್ನೆಲೆಯಲ್ಲಿ ವೀರಾಜಪೇಟೆ ನಗರದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಪೀಠವನ್ನು ಸ್ಥಾಪಿಸುವಂತೆ ವಕೀಲರು ಮನವಿ ಮಾಡಿದರು. ಈ ಪೀಠದ ವ್ಯಾಪ್ತಿಗೆ ಮೈಸೂರು, ಚಿಕ್ಕಮಗಳೂರು, ಮಂಗಳೂರು, ಹಾಸನ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನೂ ಒಳಪಡಿಸುವಂತೆ ಪ್ರಸ್ತಾಪಿಸಲಾಗಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಇದರಿಂದ ಬೆಂಗಳೂರಿನ ಉಚ್ಚನ್ಯಾಯಾಲಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ಈ ಎಲ್ಲಾ ಜಿಲ್ಲೆಗಳಿಗೆ ವೀರಾಜಪೇಟೆ ಹತ್ತಿರವಾಗಿದ್ದು, ಅಗತ್ಯ ಮೂಲಸೌಕರ್ಯಗಳೂ ಲಭ್ಯವಿರುವುದರಿಂದ, ಕೊಡಗು ಜಿಲ್ಲೆಯ ಅಭಿವೃದ್ಧಿಗೂ ಇದು ಸಹಾಯಕವಾಗುತ್ತದೆ ಎಂದು ಗಮನ ಸೆಳೆದಿದ್ದಾರೆ.