ಸೋಮವಾರಪೇಟೆ, ಏ. ೨೯: ಇಲ್ಲಿನ ಟರ್ಫ್ ಮೈದಾನದಲ್ಲಿ ಡಾಲ್ಫೀನ್ಸ್ ಸ್ಫೋರ್ಟ್ಸ್ ಕ್ಲಬ್ ವತಿಯಿಂದ ನಡೆಯುತ್ತಿರುವ ಬೇಸಿಗೆ ಹಾಕಿ ತರಬೇತಿ ಶಿಬಿರಕ್ಕೆ ಶಾಸಕ ಡಾ. ಮಂತರ್ ಗೌಡ ಅವರು ಭೇಟಿ ನೀಡಿ, ಮಕ್ಕಳಿಗೆ ಸ್ಫೂರ್ತಿ ತುಂಬಿದರು.
ಮೈದಾನದಲ್ಲಿ ಹಾಕಿ ತರಬೇತಿ ಪಡೆಯುತ್ತಿರುವ ಮಕ್ಕಳೊಂದಿಗೆ ಕೆಲಕಾಲ ಮಾತುಕತೆ ನಡೆಸಿದ ಶಾಸಕರು, ಬೇಸಿಗೆ ರಜೆಯಲ್ಲಿ ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾದರೆ ದೈಹಿಕ ಕ್ಷಮತೆ ಹೆಚ್ಚುತ್ತದೆ.
ಹಾಕಿ ಕ್ರೀಡೆಯಲ್ಲಿಯೂ ಭವಿಷ್ಯವಿದ್ದು, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ಆಗಬೇಕೆಂದು ಸಂಘಟಕರಿಗೆ ಕಿವಿಮಾತು ಹೇಳಿದರು.
ಈ ಸಂದರ್ಭ ಡಾಲ್ಫೀನ್ಸ್ ಸ್ಫೋರ್ಟ್ಸ್ ಕ್ಲಬ್ ಅಧ್ಯಕ್ಷ ಬಿ.ಆರ್. ಮಹೇಶ್, ಸ್ಥಾಪಕಾಧ್ಯಕ್ಷ ಹೆಚ್.ಎನ್. ಅಶೋಕ್, ಉಪಾಧ್ಯಕ್ಷ ಬಿ.ಜೆ. ಮಂಜುನಾಥ್, ಕಾರ್ಯದರ್ಶಿ ಬಿ.ಎನ್. ಮಂಜುನಾಥ್, ಖಜಾಂಚಿ ಎಸ್.ಆರ್. ವಿನಾಯಕ್, ಸಹ ಕಾರ್ಯದರ್ಶಿ ಬಿ.ಎನ್. ರಂಜನ್ ಸೇರಿದಂತೆ ಇತರರು ಇದ್ದರು.