ಮಡಿಕೇರಿ, ಏ. ೨೯: ಕೊಡಗು ಜಿಲ್ಲಾ ಮಟ್ಟದ ಅರಣ್ಯಾಧಾರಿತ ಬುಡಕಟ್ಟುಜನಾಂಗದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜಿಲ್ಲಾಕ್ರೀಡಾಂಗಣ ಮಡಿಕೇರಿಯಲ್ಲಿ ತಾ. ೨೩ ಮತ್ತು ೨೪ ರಂದು ನಡೆಯಿತು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಕೊಡಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಜಿಲ್ಲೆ ಮತ್ತು ಸಮಗ್ರ ಗಿರಿಜನ ಅಭಿವೃದ್ದಿ ಯೋಜನಾ ಐ.ಟಿ.ಡಿ,ಪಿ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಮಾರು ೫೦೦ ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಸಾದರ ಪಡಿಸಿದರು.
ಕ್ರೀಡಾಕೂಟದ ಉದ್ಘಾಟನೆಯಲ್ಲಿ ಪಾಲ್ಗೊಂಡ ಮಡಿಕೇರಿ ವಿಧಾನ ಸಭಾ ಶಾಸಕರಾದ ಡಾ.ಮಂತರ್ಗೌಡ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಆಟಗಾರರನ್ನು ಪರಿಚಯಿಸಿಕೊಂಡು ಚಾಲನೆ ನೀಡಿದರು. ಮಹಿಳಾ ಕಬಡ್ಡಿ ಕ್ರೀಡಾಪಟುಗಳು ಕಬಡ್ಡಿ ಕ್ರೀಡೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಪ್ರಥಮ ಬಾರಿಗೆ ಆಯೋಜಿಸಿದ ಕ್ರೀಡಾಕೂಟಕ್ಕೆ ಶುಭ ಹಾರೈಸುತ್ತಾ ವರ್ಷಕ್ಕೆ ಎರಡು ಬಾರಿಯಾದರು ಬುಟಕಟ್ಟು ಜನಾಂಗದ ಕ್ರೀಡಾಪಟುಗಳನ್ನು ಒಟ್ಟು ಸೇರಿಸಿ ಅವರಲ್ಲಿರುವ ಕ್ರೀಡಾಪ್ರತಿಭೆಯನ್ನು ಹೊರಹಾಕಬೇಕು ಎಂದರು. ಒಂದು ಬಾರಿ ಕ್ರೀಡಾಕೂಟದ ಸಂಪೂರ್ಣ ವೆಚ್ಚವನ್ನು ಶಾಸಕರ ನಿಧಿಯಿಂದ ನೀಡುವುದಾಗಿ ಘೋಷಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ವಿಶೇಷ ಅತಿಥಿಗಳಾದ ಅರುಣ್ ಮಾಚಯ್ಯ, ಉಪಾಧ್ಯಕ್ಷರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ಕಲಾವತಿ, ಅಧ್ಯಕ್ಷರು ಮಡಿಕೇರಿ ನಗರಸಭೆ, ಹೊನ್ನೇಗೌಡ ಎಸ್, ಯೋಜನಾ ಸಮನ್ವಯಾಧಿಕಾರಿ ಐ.ಟಿ.ಡಿ.ಪಿ ಕೊಡಗು ಜಿಲ್ಲೆ, ಅಧ್ಯಕ್ಷರಾದ ವಿಸ್ಮಯಿಚಕ್ರವರ್ತಿ ವಿ.ಟಿ ಸಹಾಯಕ ನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕೊಡಗುಜಿಲ್ಲೆÀ್ರ, ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ತರಬೇತುದಾರರಾಗಿರುವ ವೆಂಕಟೇಶ್, ದೀನಾಮನಿ, ಬಿಂದ್ಯಾ ಕೆ ಕೆ, ಸುಬ್ಬಯ್ಯ ಸುರೇಶ್ ಜಿಮ್ನೆಸ್ಟಿಕ್ ತರಬೇತುದಾರರು ಹಾಗೂ ಅಥ್ಲೆಟಿಕ್ಸ್ ತರಬೇತುದಾರರಾಗಿರುವ ಮಹಾಬಲ ಮತ್ತು ಪ್ರದೀಪ್ ಉಪಸ್ಥಿತರಿದ್ದರು.
ಅರುಣ್ ಮಾಚಯ್ಯ ಮಾತನಾಡಿ, ಬಾಲ್ಯದಿಂದಲೂ ನಾನು ನನ್ನ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬುಡಕಟ್ಟು ಜನಾಂಗದವರೊAದಿಗೆ ಬೆಳೆದಿದ್ದೇನೆ ಎಂದರು ೨೦೨೬ರ ಬಜೆಟಿನಲ್ಲಿ ಈಗಾಗಲೇ ಕೊಡಗು ಜಿಲ್ಲೆಗೆ ಕ್ರೀಡಾ ವಸತಿ ನಿಲಯ ಘೋಷಣೆಯಾಗಿರುವುದನ್ನು ತಿಳಿಸಿದರು. ಅಲ್ಲದೇ ಕ್ರೀಡೆ ಎಂಬುದು ಕಲೆ ಅದು ಬಡವನಿಂದಲೂ ಸಾಧ್ಯ ವಿಶ್ವದಾಖಲೆ ಸ್ಥಾಪಿಸಿದ ಬಿಲ್ಲುಗಾರ ಲಿಂಬಾರಾಮ್ರವನ್ನು ಸ್ಮರಿಸಿದರು. ಮತ್ತೊಂದು ಅತಿಥಿಗಳಾದ ಕಲಾವತಿ ಅವರು, ಕ್ರೀಡೆಯಲ್ಲಿ ಜಯಗಳಿಸಿದರೇ ಸಾಲದು ವಿದ್ಯೆಯಲ್ಲಿ ಮುಂದೆ ಬಂದು ಎಲ್ಲರೂ ವಿದ್ಯಾವಂತರಾಗಬೇಕು ಆಗಲೇ ಸಮಾಜದಲ್ಲಿ ಗೌರವ ಸಂಪಾದಿಸಲು ಸಾಧ್ಯ ಎಂದರು.
ವಿಸ್ಮಯಿ ಚಕ್ರವರ್ತಿ ಪ್ರಥಮ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ೪ ಜಿಲ್ಲೆಗಳಲ್ಲಿ ಅತೀ ಹಿಂದುಳಿದ ಅರಣ್ಯಾಧಾರಿತ ಬುಡಕಟ್ಟು ವರ್ಗಗಳಿಗೆ ಕ್ರೀಡಾಕೂಟಗಳಿಗೆ ಕರ್ನಾಟಕ ಸರ್ಕಾರದ ೨೦೨೫-೨೬ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಇತ್ತೀಚೆಗೆ ನಡೆದ ಖೇಲೋ ಇಂಡಿಯಾ ರಾಷ್ಟೀಯ ಬುಡಕಟ್ಟು ಜನಾಂಗದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕರ್ನಾಟಕದ ಬುಡಕಟ್ಟು ಕ್ರೀಡಾಪಟುಗಳು ಹಲವು ಪದಕಗಳನ್ನು ಪಡೆದಿದ್ದನ್ನು ಸ್ಮರಿಸಿದರು. ಹೊನ್ನೇಗೌಡ ಎಸ್ ಸ್ವಾಗತಿಸಿ, ನಿವೃತ್ತ ದೈಹಿಕ ಪರಿವೀಕ್ಷರಾದ ರಮೇಶ್ ಎನ್ ವಂದಿಸಿದರು. ನಿವೃತ್ತ ಪೊಲೀಸ್ ಅಧಿಕಾರಿ ಆಂತೋಣಿ ಡಿಸೋಜ ನಿರೂಪಿಸಿದರು.
ಎರಡು ದಿನಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ಕೊಡ್ಲಿಪೇಟೆ, ಕುಟ್ಟ, ಸಂಪಾಜೆ, ಕುಶಾಲನಗರ, ಯಡವನಾಡು, ಬಸವನಹಳ್ಳಿ, ಮಾಲ್ದಾರೆ, ತಿತಿಮತಿ, ಕಕ್ಕಬೆಯಿಂದ ಮಡಿಕೇರಿ ಜಿಲ್ಲಾ ಕ್ರೀಡಾಂಗಣಕ್ಕೆ ಮುಂಜಾನೆ ೬ ಗಂಟೆಗೆ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿತ್ತು. ಬೆಳಗಿನ ಉಪಹಾರ, ಭೋಜನ, ರಾತ್ರಿ ಊಟ, ಕಾಫಿ, ಟೀ ವ್ಯವಸ್ಥೆಯನ್ನು ೨ ದಿನ ನೀಡಲಾಯಿತು ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ತಂಗುವ ವ್ಯವಸ್ಥೆಯನ್ನು ಮಾಡಲಾಗಿತ್ತು.
ಅಲ್ಲದೇ ವೈಯಕ್ತಿಕ ಕ್ರೀಡೆಯಲ್ಲಿ ಜಯಗಳಿಸಿದ ಕ್ರೀಡಾಪಟುಗಳಿಗೆ ಅಥ್ಲೆಟಿಕ್ ಸ್ಪರ್ಧೆ ಪ್ರಥಮ ರೂ-೧೫೦೦, ದ್ವಿತೀಯ ರೂ-೧೦೦೦ ಮತ್ತು ತೃತೀಯ ರೂ-೭೫೦ ನಗದು ಪುರಸ್ಕಾರ ಪ್ರಶಸ್ತಿ ಪತ್ರ, ಪದಕವನ್ನು ವಿತರಿಸಲಾಯಿತು. ಅಥ್ಲೆಟಿಕ್ಸ್ ರಿಲೇಯಲ್ಲಿ ಕ್ರಮವಾಗಿ ಪ್ರಥಮ ರೂ-೬೦೦೦, ದ್ವಿತೀಯ ರೂ-೪೦೦೦ ಮತ್ತು ತೃತೀಯ ರೂ-೨೦೦೦ ನೀಡಲಾಯಿತು, ಗುಂಪು ಸ್ಪರ್ಧೆಯಲ್ಲಿ ಕ್ರಮವಾಗಿ ಪ್ರಥಮ -೧೧೦೦೦ ದ್ವಿತೀಯ-೮೦೦೦ ರೂ ಗಳನ್ನು ನೀಡಲಾಯಿತು. ವಿಶೇಷವೆಂದರೆ ಪುರುಷರ ವಾಲಿಬಾಲ್ ಸ್ಪರ್ಧೆಗೆ ೨೧ ತಂಡಗಳು ಭಾಗವಹಿಸಿದ್ದವು.
ಮಹಿಳೆಯರಿಗೆ ಅಥ್ಲೆಟಿಕ್ಸ್, ಹಗ್ಗಜಗ್ಗಾಟ, ಕಬಡ್ಡಿ, ಖೋ ಖೋ, ಥ್ರೋಬಾಲ್, ಪುರುಷರ ವಿಭಾಗದಲ್ಲಿ ಅಥ್ಲೆಟಿಕ್ಸ್, ಹಗ್ಗ ಜಗ್ಗಾಟ, ಖೋ ಖೋ, ವಾಲಿಬಾಲ್, ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗಿತ್ತು.
ಅದರಂತೆ ಪುರುಷರ ವಿಭಾಗದಲ್ಲಿ ವಾಲಿಬಾಲ್-ಹೊಸತೋಟ, ಕಬಡ್ಡಿ- ನಂಜರಾಯಪಟ್ಟಣ, ಹಗ್ಗ ಜಗ್ಗಾಟ- ಗಾಳಿಬೀಡು, ಖೋ ಖೋ- ಬೋಯಿಕೇರಿ ಮಡಿಕೇರಿ, ಮಹಿಳೆಯರ ವಿಭಾಗದಲ್ಲಿ ಕಬಡ್ಡಿ- ನಂಜರಾಯ ಪಟ್ಟಣ, ಹಗ್ಗಜಗ್ಗಾಟ- ಗಾಳಿಬೀಡು, ಖೋ ಖೋ- ಬ್ರಹ್ಮಗಿರಿ, ಥ್ರೋಬಾಲ್-ಕಕ್ಕಬೆ ತಂಡದವರು ಮೊದಲನೇ ಸ್ಥಾನ ಪಡೆದುಕೊಂಡರು.