ಮಡಿಕೇರಿ, ಏ. ೨೯: ಬೆಂಗಳೂರು ಕೊಡವ ಸಮಾಜವೂ ತನ್ನ ಸೇವಾ ಕಾರ್ಯಕ್ರಮದಂತೆ ಇತ್ತೀಚಿಗೆ ಕೊಡವ ಸಮಾಜದ ಕಾವೇರಿ ಪ್ಲೇಸ್ಮೆಂಟ್ ಸೆಲ್ ಮೂಲಕ ಮಡಿಕೇರಿ ಹಾಗೂ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ವಿವಿಧ ಕಂಪೆನಿಗಳ ಸಹಕಾರದೊಂದಿಗೆ ಉದ್ಯೋಗ ಮೇಳ ಹಮ್ಮಿಕೊಂಡಿತ್ತು. ಈ ಉದ್ಯೋಗ ಮೇಳದಲ್ಲಿ ಒಟ್ಟು ೧೭೭ ಮಂದಿ ಆಯ್ಕೆಗೊಂಡು ನೇಮಕಾತಿ ಆದೇಶ ಪತ್ರವನ್ನೂ ಪಡೆದುಕೊಂಡಿದ್ದರು. ಆಯ್ಕೆಗೊಂಡ ಹಲವರು ತಕ್ಷಣದಿಂದಲೇ ಉದ್ಯೋಗಕ್ಕೂ ಸೇರ್ಪಡೆಗೊಂಡಿದ್ದರು. ಇಂದು ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಅಧಿಕೃತವಾಗಿ ಈ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ತೆರಳಲು ಹಸಿರು ನಿಶಾನೆ ತೋರುವ ಮೂಲಕ ಬೀಳ್ಕೊಡಲಾಯಿತು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಕಾವೇರಿ ಪ್ಲೇಸ್ಮೆಂಟ್ ಸೆಲ್ನ ಕೊಂಗAಡ ಸಂಕೇತ್ ಚಂಗಪ್ಪ, ಕಾವೇರಿ ಕಾಲೇಜಿನ ಯು.ಟಿ. ಪೆಮ್ಮಯ್ಯ ಈ ಸಂದರ್ಭ ಹಾಜರಿದ್ದರು.
ಕಂಪೆನಿಗೆ ತೆರಳಲು ವಾಹನದ ವ್ಯವಸ್ಥೆಯನ್ನು ಬೆಂಗಳೂರು ಕೊಡವ ಸಮಾಜದ ಮೂಲಕ ಕಲ್ಪಿಸಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಚಿರಿಯಪಂಡ ಸುರೇಶ್ ನಂಜಪ್ಪ ಅವರು, ಯುವಕರಿಗೆ ಇದೊಂದು ವೃತ್ತಿಜೀವನದ ಆರಂಭವಾಗಿದೆ. ಕೊಡವ ಸಮಾಜ ಇಲ್ಲಿ ಜಾತಿ-ಬೇಧವಿಲ್ಲದೆ ಎಲ್ಲರಿಗೂ ಅವಕಾಶ ನೀಡಿದ್ದು, ಒಟ್ಟು ೧೭೭ ಮಂದಿಗೆ ಉದ್ಯೋಗ ಲಭಿಸಿದೆ. ಉದ್ಯೋಗ ಪಡೆದವರು ಇದರಲ್ಲಿ ಮುಂದುವರೆದು ಅವಕಾಶಗಳ ಸದುಪಯೋಗದೊಂದಿಗೆ ಮತ್ತಷ್ಟು ಮುಂದೆ ಬರುವಂತಾಗಬೇಕು, ಈಗಿನ ಪರಿಸ್ಥಿತಿಯಲ್ಲಿ ಯುವಕರಿಗೆ ಉತ್ತೇಜನ ಅಗತ್ಯವಿದ್ದು, ಕೊಡವ ಸಮಾಜ ಈ ಕೆಲಸ ಮಾಡಿದೆ. ಮುಂದಿನ ಜೂನ್ ಅಂತ್ಯದಲ್ಲಿ ಅಥವಾ ಜುಲೈ ತಿಂಗಳಿನಲ್ಲಿ ಮತ್ತೊಂದು ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ತಿಳಿಸಿದರು.
ಆಯ್ಕೆಗೊಂಡವರು ಕೊಡಗನ್ನು, ಕೊಡಗಿನ ಮಣ್ಣನ್ನು ಮರೆಯಬಾರದು ಎಂದು ಅವರು ಕಿವಿಮಾತು ಹೇಳಿದರು.
ಅಡೆಕೊ ಇಂಡಿಯಾ ಸಂಸ್ಥೆ ಸೇರಿದಂತೆ ಐದಾರು ಕಂಪೆನಿಗಳು ಉದ್ಯೋಗ ಮೇಳಕ್ಕೆ ಸಹಕಾರ ನೀಡಿ ಪಾಲ್ಗೊಂಡಿದ್ದವು.