ಮಡಿಕೇರಿ, ಏ. ೨೮: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಡಗು ಬ್ಯಾರೀಸ್ ವೆಲ್ಫೇರ್ ಟ್ರಸ್ಟ್ ಸಹಯೋಗದಲ್ಲಿ ಮೊದಲನೆ ಕೊಡಗು ಜಿಲ್ಲಾ ಬ್ಯಾರಿ ಸಾಹಿತ್ಯ ಸಮ್ಮೇಳನ ನಗರದ ಕಾವೇರಿ ಹಾಲ್ನಲ್ಲಿ ನಡೆದು ಬ್ಯಾರಿ ಸಾಹಿತ್ಯ ಸಂಸ್ಕೃತಿಯನ್ನು ಪಸರಿಸುವಲ್ಲಿ ಯಶಸ್ವಿಯಾಗಿತ್ತು. ಮರ್ಹೂಮ್ ಮೊಹಿದ್ದಿನ್ (ಪ್ರೆಸಿಡೆಂಟಾಕ) ವೇದಿಕೆಯಲ್ಲಿ ಸಮ್ಮೇಳನವನ್ನು ಕರ್ನಾಟಕ ವಿಧಾನ ಸಭೆಯ ಅಧ್ಯಕ್ಷರಾದ ಯು.ಟಿ. ಖಾದರ್ ದಫ್ ಬಾರಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಬ್ಯಾರಿ ಸಮುದಾಯ ತಮ್ಮ ಭಾಷೆಯೊಂದಿಗೆ ಇತರ ಭಾಷೆಗಳನ್ನು ಪ್ರೀತಿಸಬೇಕು ತಮ್ಮ ಮಾತೃಭಾಷೆಯಲ್ಲದೆ ವಿದ್ಯಾರ್ಥಿಗಳು ತಮ್ಮ ಕಲಿಕೆ ಸಂದರ್ಭ ವಿದೇಶಿ ಭಾಷೆಗಳು ಸೇರಿದಂತೆ ಇತರ ಭಾಷೆಗಳನ್ನು ಕಲಿಯಬೇಕು. ಅನೇಕ ವಿದೇಶಗಳಲ್ಲಿ ಇಂಗ್ಲಿಷ್ ಕೂಡ ಮಾತನಾಡುವುದಿಲ್ಲ. ಸ್ಥಳೀಯ ಭಾಷೆಗಳನ್ನೇ ಬಳಸುತ್ತಾರೆ. ಇದರಿಂದಾಗಿ ಮಕ್ಕಳು ಎಲ್ಲಾ ಭಾಷೆಗಳನ್ನು ಕಲಿತರೆ ಭವಿಷ್ಯದಲ್ಲಿ ಉತ್ತಮ ಅವಕಾಶ ಸಿಗುತ್ತದೆ. ಈ ದಿಸೆಯಲ್ಲಿ ವಿದ್ಯಾಸಂಸ್ಥೆಗಳೂ ಕೂಡ ಇದಕ್ಕೆ ವಿಪುಲ ಅವಕಾಶ ಕಲ್ಪಿಸಬೇಕೆಂದು ಯು.ಟಿ. ಖಾದರ್ ಸಲಹೆಯಿತ್ತರು. ಬ್ಯಾರಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು. ಸಂಸ್ಕೃತಿಯನ್ನು ಉಳಿಸಿ ಮುಂದಿನ ಜನಾಂಗಕ್ಕೆ ಹಸ್ತಾಂತರಿಸುವ ಕಾರ್ಯವಾಗಬೇಕು ಬ್ಯಾರಿ ಅಕಾಡೆಮಿ ಇಲ್ಲದಂತಹ ಕಾಲದಲ್ಲಿ ಯಾರಿಂದಲೂ ಯಾವುದೇ ಸಹಕಾರ ಸಿಗದ ಸಂದರ್ಭದಲ್ಲೂ ಬ್ಯಾರಿ ಸಮುದಾಯದ ಹಲವರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ನೀಡಿದ ಕೊಡುಗೆಗಳ ಫಲವಾಗಿ ಇಂದು ಬ್ಯಾರಿ ಸಾಹಿತ್ಯ ಉಳಿದಿದೆ ಎಂದು ಖಾದರ್ ಅಭಿಪ್ರಾಯಪಟ್ಟರು.
“ಮಕ್ಕಳನ್ನು ಪ್ರೋತ್ಸಾಹಿಸಿ''
ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯುವ ಮೂಲಕ ಸಾಹಿತ್ಯದ ಬಗ್ಗೆ ಮಕ್ಕಳಿಗೆ ಆಸಕ್ತಿ ತುಂಬಬೇಕು. ಈ ದಿಸೆಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಪೋಷಕರು ಗಮನ ಹರಿಸಬೇಕು ಎಂದ ಯು.ಟಿ. ಖಾದರ್ ಸಾಹಿತಿಗಳಿಗೆ ಸಮಾಜದ ಭವಿಷ್ಯವನ್ನು ರೂಪಿಸುವ ಶಕ್ತಿ ಇದೆ ಎಂದರು.
“ಕಮ್ಯುನಲ್ ಆಗಬಾರದು''
ಪ್ರತಿಯೊಬ್ಬರೂ ಕಮ್ಯುನಿಟಿ ಆಗಬೇಕೆ ಹೊರತು ಕಮ್ಯುನಲ್ ಆಗಬಾರದು ಎಂದು ಕಿವಿಮಾತು ಹೇಳಿದ ವಿಧಾನ ಸಭಾಧ್ಯಕ್ಷರು ಪರಸ್ಪರ ಸಹಾಯ ಸಹಕಾರದೊಂದಿಗೆ ನಕರಾತ್ಮಕ ಚಿಂತನೆಗಳನ್ನು ಬಿಟ್ಟು ಸಕರಾತ್ಮಕ ಚಿಂತನೆಗಳೊAದಿಗೆ ನಾವೆಲ್ಲರೂ ಸಾಮರಸ್ಯ ಹಾಗೂ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆAದು ಸಲಹೆಯಿತ್ತರು.
ಪ್ರತಿಯೊಬ್ಬ ಶಾಸಕನ ಯಶಸ್ಸು ಎಂಬುದು ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಟ್ಟಡಗಳ ನಿರ್ಮಾಣದಿಂದ ಮಾತ್ರ ಸಾಧ್ಯವಿಲ್ಲ. ಎಲ್ಲಾ ಸಮುದಾಯಗಳನ್ನು ಕೈಹಿಡಿದು ಸಹಬಾಳ್ವೆಯಿಂದ ಮುನ್ನಡೆದರೆ ಅದುವೇ ಒಬ್ಬ ಶಾಸಕನ ನಿಜವಾದ ಯಶಸ್ಸು ಎಂದು ಖಾದರ್ ಅಭಿಪ್ರಾಯಪಟ್ಟರು.
ಮಡಿಕೇರಿ ನೈಸರ್ಗಿಕ ಆಕರ್ಷಣೆಯ ನಗರವಾಗಿದ್ದು, ಪ್ರವಾಸಿಗರು ಅತ್ಯಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಸ್ಥಳೀಯರು ಕೂಡ ಪ್ರವಾಸೋದ್ಯಮವನ್ನು ಅವಲಂಬಿಸಿದರೆ ಉತ್ತಮ ಅವಕಾಶ ಇದೆ ಎಂದು ಖಾದರ್ ಅಭಿಪ್ರಾಯಪಟ್ಟರು.
ಸಾಹಿತ್ಯ - ಸಂಸ್ಕೃತಿ ರಕ್ಷಣೆಯಾಗಬೇಕು - ಮಂತರ್
ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಭಾಷೆ, ಸಾಹಿತ್ಯ, ಸಂಸ್ಕೃತಿಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಸಾಹಿತ್ಯ, ಭಾಷೆ, ಸಂಸ್ಕೃತಿಯ ರಕ್ಷಣೆ ಆಗಬೇಕೆಂದು ಹೇಳಿದರು. ಬ್ಯಾರಿ ಸಾಹಿತ್ಯ ಅಕಾಡೆಮಿಯಲ್ಲಿ ಮುಂದಿನ ದಿನಗಳಲ್ಲಿ ಕೊಡಗಿನವರಿಗೂ ಅವಕಾಶ ಒದಗಿಸುವಂತಾಗಬೇಕೆAದ ಶಾಸಕರು ಬ್ಯಾರಿ ಸಮುದಾಯದ ಅಭಿವೃದ್ಧಿಗೆ ತಾನು ಸದಾ ಸಿದ್ಧನಿದ್ದೇನೆ ಎಂದರು.
ಚಾರಿತ್ರಿಕ ಪ್ರಜ್ಞೆ ಇರಬೇಕು - ಸಿದ್ದರಾಮಯ್ಯ
ಯಾವುದೇ ಜನಾಂಗವಾದರೂ ಆ ಜನಾಂಗಕ್ಕೆ ತನ್ನ ಚಾರಿತ್ರಿಕ ಪ್ರಜ್ಞೆಯ ಅರಿವಿರಬೇಕು. ಹಾಗಾದಾಗ ಮಾತ್ರ ವರ್ತಮಾನವನ್ನು ಅರ್ಥಮಾಡಿಕೊಂಡು ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಹಿರಿಯ ಸಾಹಿತಿ, ಚಿಂತಕ ಎಸ್.ಜಿ. ಸಿದ್ದರಾಮಯ್ಯ ನುಡಿದರು.
ಬ್ಯಾರಿ ಸಾಹಿತ್ಯ ಸಮ್ಮೇಳನದ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಬ್ಯಾರಿ ಜನಾಂಗಕ್ಕೂ ಕೂಡ ತನ್ನ ಚಾರಿತಿಕ ಪ್ರಜ್ಞೆಯ ಅಗತ್ಯವಿದೆ. ಚಾರಿತ್ರಿಕ ಪ್ರಜ್ಞೆ ಇಲ್ಲದೆ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲವೆಂದು ಹೇಳಿದರು.
ಹಲವಾರು ಬ್ಯಾರಿ ಸಾಹಿತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬ್ಯಾರಿ ಭಾಷೆಗೆ ಲಿಪಿ ಇಲ್ಲವಾದ್ದರಿಂದ ಕನ್ನಡ ಲಿಪಿಯನ್ನು ಬಳಸಲಾಗುತ್ತಿದೆ; ಬರೆದಂತೆಯೇ ಓದಲು ಕನ್ನಡ ಭಾಷೆಯಲ್ಲಿ ಮಾತ್ರ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಭಾಷೆಗಳಿಗೂ ಕನ್ನಡ ಲಿಪಿಯನ್ನು ಬಳಸಬಹುದಾಗಿದೆ ಕನ್ನಡದಂತೆ ಬ್ಯಾರಿ ಕೂಡ ಜೀವಂತ ಭಾಷೆಯಾಗಿದೆ ಎಂದು ನುಡಿದರು.
ಭಾರತ ಬಹುತ್ವದ ರಾಷ್ಟçವಾಗಿದೆ. ಇದಕ್ಕೆ ಪೂರಕವೆಂಬAತೆ ರಾಜ್ಯದಲ್ಲಿ ವಿವಿಧ ಭಾಷೆಗಳ ಹದಿನಾಲ್ಕು ಅಕಾಡೆಮಿಗಳು, ನಾಲ್ಕು ಪ್ರಾಧಿಕಾರಗಳು ಕಾರ್ಯನಿರ್ವಹಿಸುತ್ತಿವೆ. ಗಣತಂತ್ರ ವ್ಯವಸ್ಥೆ ಎಷ್ಟು ಶಕ್ತಿಯುತವಾಗಿದೆ ಎಂಬುದಕ್ಕೆ ನಾಡಗೀತೆ ಸಾಕ್ಷಿಯಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿದ್ದ ಕೊಡಗು ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ. ಅನಂತಶಯನ ಮಾತನಾಡಿ, ಭಾಷೆ, ಸಂಸ್ಕೃತಿಯನ್ನು ಬೆಳೆಸುವ ಕೆಲಸ ನಿರಂತರವಾಗಿ ನಡೆಯಬೇಕು. ಬ್ಯಾರಿ ಸಮುದಾಯ ವ್ಯಾಪಾರ ಸೇರಿದಂತೆ ಪ್ರತಿಯೊಂದರಲ್ಲೂ ಕೂಡ ತನ್ನ ಸಂಸ್ಕೃತಿ, ಹಿನ್ನೆಲೆಯನ್ನು ಮರೆಯದೆ ಉಳಿಸಿ ಬೆಳೆಸಿಕೊಂಡು ಬಂದ ಕಾರಣ ಇಂತಹ ಸಮ್ಮೇಳನಗಳು ನಡೆಯಲು ಸಾಧ್ಯವಾಗಿದೆ ಎಂದರಲ್ಲದೆ ಎಲ್ಲರೂ ಒಗ್ಗಟ್ಟಾಗಿ ಸಮಾಜವನ್ನು ಕಟ್ಟಬೇಕು; ನಮ್ಮ ಸಂಸ್ಕೃತಿ ಕಲೆಯನ್ನು ಉಳಿಸಿ ಬೆಳೆಸಿ ಪ್ರೀತಿಸುವ ನಾಯಕರನ್ನು ಹುಟ್ಟು ಹಾಕಬೇಕೆಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಭಾಷೆಯನ್ನು ಮಾತನಾಡುವುದರಿಂದ ಭಾಷೆ ಉಳಿಯುತ್ತದೆ; ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತಿದೆ, ಸಂಸ್ಕೃತಿ ಉಳಿದರೆ ದೇಶ ಉಳಿಯುತ್ತದೆ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮಹೇಶ್ ನಾಚಯ್ಯ ಮಾತನಾಡಿ, ಸಾಹಿತ್ಯಕ್ಕೆ ಸೂಕ್ತ ಮನ್ನಣೆ ಸಿಗಬೇಕು. ಸಾಹಿತ್ಯದ ಬಗ್ಗೆ ಎಲ್ಲರಲ್ಲೂ ಆಸಕ್ತಿ ಮೂಡಬೇಕೆಂದರು. ಕರ್ನಾಟಕ ಕನಿಷ್ಟ ವೇತನ ಸಲಹಾ ಮಂಡಳಿಯ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಮಾತನಾಡಿ, ಎಲ್ಲಾ ಸಮುದಾಯದವರು ಪರಸ್ಪರ ಪ್ರೀತಿ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಯು.ಟಿ. ಖಾದರ್, ಎಸ್.ಜಿ. ಸಿದ್ದರಾಮಯ್ಯ, ಸಮ್ಮೇಳನಾಧ್ಯಕ್ಷ ಬಿ.ಎ. ಷಂಶುದ್ದೀನ್, ಮಾಜಿ ಎಂಎಲ್ಸಿ ಬಿ.ಎ. ಹಸನಬ್ಬ, ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಎಂ.ಬಿ. ನಾಸಿರ್ ಅಹಮದ್, ಎಂ. ಐ. ಕೇಶವ ಕಾಮತ್, ಬಿ.ಜಿ. ಅನಂತಶಯನ, ಮಹೇಶ್ ನಾಚಯ್ಯ ಮತ್ತಿತರರನ್ನು ಸನ್ಮಾನಿಸಲಾಯಿತು. ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಯು.ಹೆಚ್. ಉಮರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಬೆಂಗಳೂರು ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಷಂಶುದ್ದೀನ್ ಅಡೂರ್, ನಗರಸಭಾ ಸದಸ್ಯರಾದ ಮನ್ಸೂರ್, ಮಹಮ್ಮದ್ ಯಾಕೂಬ್, ಬಷೀರ್ ಅಹಮದ್ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬ್ಯಾರಿ ಅಕಾಡೆಮಿ ಸದಸ್ಯ ಯು.ಹೆಚ್. ಖಾಲಿದ್ ನಿರೂಪಿಸಿದರು. ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಪ್ರಾಸ್ತಾವಿಕ ನುಡಿಯಾಡಿದರು. ಬಳಿಕ ವಿವಿಧ ಕಾರ್ಯಕ್ರಮಗಳು ನಡೆದವು.