ಮಡಿಕೇರಿ, ಏ. ೨೮: ಬ್ಯಾರಿ ಸಮುದಾಯದ ಇಂದಿನ ಗಂಡು ಮಕ್ಕಳಲ್ಲಿ ಹೆಚ್ಚಿನ ವಿದ್ಯಾಭ್ಯಾಸದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದ್ದು, ಬ್ಯಾರಿ ಸಮುದಾಯದ ಬಹಳಷ್ಟು ಸಂಘ ಸಂಸ್ಥೆಗಳು ಸಮುದಾಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದ್ದರೂ ಕೆಲ ಪ್ರತಿಭಾವಂತ ಗಂಡು ಮಕ್ಕಳು ಕೂಡ ಓದಿನ ಕಡೆಗೆ ಗಮನ ಹರಿಸದಿರುವುದು ಆತಂಕಕಾರಿ ಸಂಗತಿ ಎಂದು ಬ್ಯಾರಿ ಸಾಹಿತ್ಯ ಸಮ್ಮೇಳನಾಧ್ಯಕ್ಷ ಬಿ.ಎ. ಷಂಶುದ್ದೀನ್ ಕಳವಳ ವ್ಯಕ್ತಪಡಿಸಿದರು.
ಕಾವೇರಿ ಹಾಲ್ನಲ್ಲಿ ಬ್ಯಾರಿ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷ ಭಾಷಣ ಮಾಡಿದ ಅವರು, ಇತ್ತೀಚಿನ ಫಲಿತಾಂಶಗಳ ಬಗ್ಗೆ ಗಮನ ಹರಿಸಿದಾಗ ಇದು ಸ್ಪಷ್ಟವಾಗುತ್ತದೆ. ಹಾಗಂತ ಗಂಡು ಮಕ್ಕಳೆಲ್ಲ ಹಿಂದಕ್ಕೆ ಬಿದ್ದಿದ್ದಾರೆ ಎನ್ನುತ್ತಿಲ್ಲ; ಮೇಲಕ್ಕೆ ಬರುವ ಸಾಮರ್ಥ್ಯ ಅವಕಾಶ ಎಲ್ಲಾ ಇದ್ದರೂ ಮೇಲಕ್ಕೆ ಬರುವವರ ಸಂಖ್ಯೆ ಕಡಿಮಮೆಯಾಗುತ್ತಿದೆ ಎಂಬುದು ಕಳವಳಕಾರಿ ಅಂಶವಾಗಿದೆ. ಕೇವಲ ಹಣ ಸಂಪಾದನೆಯನ್ನೇ ಮುಖ್ಯ ಗುರಿಯಾಗಿಸಿಕೊಂಡಿರುವುದು ಇದಕ್ಕೆ ಕಾರಣವಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಾಣುವ ಅಂಶವಾಗಿದೆ ಎಂದು ಸಮ್ಮೇಳನಾಧ್ಯಕ್ಷರು ನುಡಿದರು. ಅಲ್ಲದೇ ಮದುವೆ ನಂತರ ವೃತ್ತಿ ಸಂಬAಧಿತ ಪದವಿ ಪಡೆದ ಬ್ಯಾರಿ ಸಮುದಾಯದ ಹೆಣ್ಣು ಮಕ್ಕಳು ತಮ್ಮ ಕಲಿಕೆಯ ಸದುಪಯೋಗಪಡಿಸಿಕೊಳ್ಳಲು ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಸಾಧ್ಯವಾಗದೆ ತಮ್ಮ ಸಾಮರ್ಥ್ಯವನ್ನು ಹುದುಗಿ ಹಾಕಿ ಮನೆಯ ಒಳಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳುತ್ತಿರುವ ಸಂಗತಿಯೂ ವಿಷಾದಕರವಾಗಿದ್ದು, ಇದಕ್ಕೆ ಗಂಡಿನ ಮನೆಯವರು ಕಾರಣರೊ ಅಥವಾ ಧಾರ್ಮಿಕ ತಪ್ಪು ಕಲ್ಪನೆಯೊ ಅಥವಾ ಹೆಣ್ಣು ಮಕ್ಕಳೇ ನಿರ್ಧಾರ ತೆಗೆದುಕೊಳ್ಳುತ್ತಾರೋ ಗೊತ್ತಿಲ್ಲ.
ಆದರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಈ ಬಗ್ಗೆ ಬ್ಯಾರಿ ಸಮುದಾಯ ಗಂಭೀರವಾಗಿ ಆಲೋಚಿಸಬೇಕಿದೆ. ಬ್ಯಾರಿ ಸಮುದಾಯದವರ ಆಚಾರ ಸಂಪ್ರದಾಯಗಳು ಇಸ್ಲಾಂ ಧರ್ಮದ ಚೌಕಟ್ಟಿನೊಳಗೇ ಇದ್ದರೂ ಅದು ಇತರ ಮುಸ್ಲಿಂ ಜನಾಂಗಳಿಗಿAತ ಭಿನ್ನವಾಗಿರುವುದನ್ನು ಗುರುತಿಸಬಹುದು. ಕೇರಳದ ಮಾಪ್ಲಾ ಜನಾಂಗದವರ ಸಂಸ್ಕೃತಿಗೆ ಅತ್ಯಂತ ಹತ್ತಿರ ಎನ್ನಬಹುದಾದ ಉಡುಗೆ ತೊಡುಗೆಗಳು, ಹಾಡು ಕುಣಿತಗಳನ್ನು ಗಮನಿಸಿದಾಗ ಈ ಎರಡೂ ಜನಾಂಗಗಳ ನಡುವೆ ಸಾಂಸ್ಕೃತಿಕ ಸಂಬAಧ ಗಾಢವಾಗಿತ್ತು ಎಂಬುದು ಗೊತ್ತಾಗುತ್ತದೆ ಎಂದರು.
ಬ್ಯಾರಿಗಳು ಪ್ರಪಂಚದಾದ್ಯAತ ಹರಡಿದ್ದು, ಹತ್ತರಿಂದ ಹದಿನೈದು ಲಕ್ಷ ಬ್ಯಾರಿಗಳಿರಬಹುದೆಂದು ಅಂದಾಜಿಸಲಾಗಿದೆ. ಎಲ್ಲ ಕಡೆ ಇರುವ ಬ್ಯಾರಿ ಸಂಘಟನೆಗಳು, ಕರ್ನಾಟಕ ಸಂಘಗಳು, ಮುಸ್ಲಿಮ್ ಸಂಘಟನೆಗಳನ್ನು ಸಂಪರ್ಕಿಸುವ ಮೂಲಕ ಈ ಸಂಖ್ಯೆಯನ್ನು ನಾವು ಅಧಿಕೃತಗೊಳಿಸಬೇಕಾಗಿದೆ. ಕರ್ನಾಟಕದ ಎಲ್ಲ ಜಮಾಅತ್ಗಳಿಗೆ ಪತ್ರ ಬರೆಯುವ ಮೂಲಕ ಆಯಾ ಪ್ರದೇಶಗಳಲ್ಲಿರುವ ಬ್ಯಾರಿಗಳ ವಿವರ ಪಡೆದುಕೊಳ್ಳಬಹುದಾಗಿದೆ. ಇದು ದೀರ್ಘಕಾಲ ತೆಗೆದುಕೊಳ್ಳಬಹುದಾದ ಕೆಲಸವಾಗಿದ್ದರೂ ಇದರಿಂದ ಮುಂದೊAದು ದಿನ ಬ್ಯಾರಿಗಳ ಜನಸಂಖ್ಯೆಯನ್ನು ಅಂದಾಜಿಸಲು ಸಾಧ್ಯವಾಗಬಹುದು. ಈ ಕೆಲಸವನ್ನು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕೈಗೆತ್ತಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಕೊಡಗು ಜಿಲ್ಲೆಗೆ ಬ್ಯಾರಿಗಳ ಪ್ರವೇಶವಾಗಿದ್ದು ಟಿಪ್ಪು ಆಳ್ವಿಕೆಯ ನಂತರ. ವ್ಯಾಪಾರಕ್ಕಾಗಿ ಕರಾವಳಿಯಿಂದ ಬಂದ ಕೆಲವು ಬ್ಯಾರಿಗಳು ಇಲ್ಲೇ ನೆಲೆನಿಂತರು. ಇವರ ಪೈಕಿ ಕೆಲವರು ಮನೆಗಳನ್ನು ಕಟ್ಟುವ ಕಂಟ್ರಾಕ್ಟ್ ವಹಿಸಿಕೊಂಡು ಯಶಸ್ವಿಯಾದರು. ಇನ್ನೂ ಕೆಲವರು ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿದರು. ಕೂಲಿನಾಲಿಗಳಲ್ಲಿ ತೊಡಗಿಸಿಕೊಂಡವರ ಸಂಖ್ಯೆಯೂ ಸಾಕಷ್ಟಿತ್ತು. ಆದರೆ, ನಾಲ್ಕು ದಶಕಗಳ ಶಿಕ್ಷಣ ಕ್ರಾಂತಿ ಬ್ಯಾರಿಗಳ ಬದುಕಿನ ದಿಸೆಯನ್ನೇ ಬದಲಿಸಿದೆ. ಈ ಸಮ್ಮೇಳನದ ವೇದಿಕೆಗೆ ಮೊಹಿದ್ದೀನ್ ಅವರ ಹೆಸರನ್ನು ಇಡಲಾಗಿದೆ. ಪ್ರೆಸಿಡೆಂಟಾಕ ಎಂದೇ ಜನರಿಂದ ಕರೆಯಲ್ಪಡುತ್ತಿದ್ದ ಮೊಹಿದ್ದೀನ್ ಮಡಿಕೇರಿ ಪುರಸಭೆಯ ಏಕೈಕ ಬ್ಯಾರಿ ಮುಸ್ಲಿಂ ಅಧ್ಯಕ್ಷರಾಗಿದ್ದರು ಎನ್ನುವ ಸಂಗತಿ ಈಗಿನ ಪೀಳಿಗೆಗೆ ಗೊತ್ತೇ ಇಲ್ಲ ಎಂದರು.
ಲಿಖಿತ ಸಾಹಿತ್ಯದ ಬಗ್ಗೆ ಹೇಳುವುದಾದರೆ, ಬ್ಯಾರಿ ಭಾಷೆಯ ಸಾಹಿತ್ಯ ತೀರಾ ಇತ್ತೀಚಿನದು. ೧೯೮೫ರಲ್ಲಿ ಮಡಿಕೇರಿಯ ಬಿ.ಎ. ಷಂಶುದ್ದೀನ್ ಬರೆದ ಬ್ಯಾರಿ ಹಾಡುಗಳ ಕ್ಯಾಸೆಟ್ (ಪುದಿಯೊ ಬ್ಯಾರಿ ಪಾಟ್ ಙ-ಇದು ಬ್ಯಾರಿ ಭಾಷೆಯ ಪ್ರಥಮ ಕ್ಯಾಸೆಟ್ ಕೂಡ) ಮಂಗಳೂರಿನಲ್ಲಿ ಬಿಡುಗಡೆಗೊಂಡಾಗ ಈ ಹಾಡುಗಳೇ ಬ್ಯಾರಿ ಭಾಷೆಯ ಮೊದಲ ಲಿಖಿತ ಹಾಗೂ ಶಿಷ್ಟರೂಪದ ಬ್ಯಾರಿ ಸಾಹಿತ್ಯ ಎಂದು ದಾಖಲಾಯಿತು. ಮಂಗಳೂರು ಪುರಸಭೆಯಲ್ಲಿ ನಡೆದ ಕ್ಯಾಸೆಟ್ ಬಿಡುಗಡೆ ಕಾರ್ಯಕ್ರಮವೇ ಮೊದಲ ಅಧಿಕೃತ ಬ್ಯಾರಿ ಕಾರ್ಯಕ್ರಮವಾಗಿತ್ತು.
ಇದಾದ ಎರಡು ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನೆಲೆನಿಂತಿರುವ ಹಲವು ಸುಶಿಕ್ಷಿತ ಬ್ಯಾರಿಗಳು ೧೯೮೭ ರಲ್ಲಿ ದಿ ಬ್ಯಾರೀಸ್ ವೆಲ್ವೇರ್ ಅಸೋಸಿಯೇಶನ್ ಹೆಸರಿನಲ್ಲಿ ಸಂಘವೊAದನ್ನು ಸ್ಥಾಪಿಸಿದ್ದು ಮುಂದೆ ಬ್ಯಾರಿ ಭಾಷೆ ಹಾಗೂ ಸಾಹಿತ್ಯ ಬೆಳೆಯಲು ಕಾರಣವಾಯಿತೆಂಬುದು ಗಮನಾರ್ಹ ಎಂದರು.
೧೯೯೮ರಲ್ಲಿ ಮಂಗಳೂರಿನಲ್ಲಿ ಅಜೀಜ್ ಬೈಕಂಪಾಡಿಯವರ ಅಧ್ಯಕ್ಷತೆಯಲ್ಲಿ ಬ್ಯಾರಿ ಕಲಾರಂಗ ಸ್ಥಾಪನೆ ಮೂಲಕ ಬ್ಯಾರಿ ರಂಗಕಲೆಗೆ ನಾಂದಿ ಹಾಡಲಾಯಿತು. ೧೯೯೯ರಲ್ಲಿ ಬಷೀರ್ ಬೈಕಂಪಾಡಿ, ಬಿ.ಎ. ಮಹಮ್ಮದಾಲಿ ಸಂಗಡಿಗರ ಪ್ರಯತ್ನದ ಫಲವಾಗಿ ಬ್ಯಾರಿ ಸಾಂಸ್ಕೃತಿಕ ಕೇಂದ್ರ ಸ್ಥಾಪನೆಯಾಗಿ ಕಲಾ ಚಟುವಟಿಕೆಗಳಿಗೆ ಹೆಚ್ಚು ಒತ್ತು ಸಿಗುವಂತಾಯಿತು. ೨೦೦೯ರಲ್ಲಿ ಮಂಗಳೂರಿನ ವಕೀಲ ಎಂ.ಬಿ. ಅಬ್ದುಲ್ ರಹಿಮಾನ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸ್ಥಾಪನೆಯಾದ ಬಳಿಕ ಬ್ಯಾರಿ ಸಾಹಿತ್ಯಕ್ಕೆ ಒಂದು ಹೆದ್ದಾರಿಯೇ ತೆರೆದಂತಾಯಿತು.
ಬ್ಯಾರಿ ಭಾಷೆಯಲ್ಲಿ ಬಿಡಿ ಕಥೆಗಳ ಸಂಖ್ಯೆ ನೂರಾರು ಇರಬಹುದಾದರೂ ಒಬ್ಬರದ್ದೇ ಕಥೆಗಳು ಸಂಕಲನದ ರೂಪದಲ್ಲಿ ಹೊರಬಂದದ್ದು ಹತ್ತಿಪ್ಪತ್ತು ಇರಬಹುದು ಅಷ್ಟೇ. ೧೯೯೮ರಲ್ಲಿ ಪ್ರಕಟವಾದ ಮುಹಮ್ಮದ್ ಕುಳಾಯಿ ಅವರ ಪೆರ್ನಾಲ್ ಬ್ಯಾರಿ ಭಾಷೆಯ ಮೊದಲ ಕಥಾಸಂಕಲನ ಎಂದು ಷಂಶುದ್ದೀನ್ ತಿಳಿಸಿದರು.
ಜಾನಪದ ಕಥೆಗಳು, ನಾಟಕ, ಒಗಟುಗಳ ಸಂಗ್ರಹವಾದ ಹಂಝ ಮಲಾರ್ ಅವರ “ಪಾಲುಂ ತೇನುಂ''ಪುಸ್ತಕವು ೨೦೦೫ರಲ್ಲಿ ಪ್ರಕಟಗೊಂಡಿದ್ದು, ಇದನ್ನು ಬ್ಯಾರಿ ಭಾಷೆಯ ಮೊದಲ ಜಾನಪದ ಪುಸ್ತಕವೆಂದು ಪರಿಗಣಿಸಬಹುದು. ಹಾಗೆಯೇ ಮೊದಲ ಮಕ್ಕಳ ಕಥೆ ರಚನೆಯ ಹೆಮ್ಮೆಗೂ ಹಂಝ ಮಲಾರ್ ಪಾತ್ರರಾಗುತ್ತಾರೆ. ಅವರ “ಚನ್ನನ'' ಜಾನಪದ ಅಜ್ಜಿಕಥೆಗಳು ಮಕ್ಕಳಿಗಾಗಿ ಬರೆಯಲ್ಪಟ್ಟದ್ದು. ಇದು ೨೦೧೬ರಲ್ಲಿ ಪ್ರಕಟಗೊಂಡಿದೆ.
ಬ್ಯಾರಿ ಸಮುದಾಯದ ಒಳಿತಿಗಾಗಿ, ಅವರ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಹಲವಾರು ಸಂಘ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಆದರೆ ಬಹಳಷ್ಟು ಮಂದಿಯನ್ನು ತಲುಪಲು ಈ ಸಂಸ್ಥೆಗಳಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕೆ ಕಾರಣಗಳೇನೇ ಇರಲಿ, ಬ್ಯಾರಿ ಸಮುದಾಯದ ಎಲ್ಲರೂ ಒಳ್ಳೆಯ ಶಿಕ್ಷಣ ಪಡೆಯುವಂತಾಗಬೇಕು, ಸಮಾಜದಲ್ಲಿ ಸಮಾನತೆ, ಶಾಂತಿ, ನೆಮ್ಮದಿ ನೆಲೆಸುವ ನಿಟ್ಟಿನಲ್ಲಿ ಸಹಬಾಳ್ವೆಯ ಸಂದೇಶವನ್ನು ಸಾರುವ ಜವಾಬ್ದಾರಿಯನ್ನು ಹೊರುವಂತಾಗಬೇಕು, ಬ್ಯಾರಿ ಸಮುದಾಯದ ಸದಸ್ಯರು ಎಲ್ಲರ ಜೊತೆಗೂಡಿ ಭವ್ಯ ಭಾರತದ ನಿರ್ಮಾಣದ ಕನಸನ್ನು ನನಸು ಮಾಡಲು ಶ್ರಮಿಸುವಂತಾಗಬೇಕು ಎಂದು ಹೇಳಿದರು.
ಬ್ಯಾರಿ ಸಾಹಿತ್ಯ ಹಾಗೂ ಸಂಸ್ಕೃತಿ ಅಭಿವೃದ್ಧಿಗಾಗಿ ರಾಜ್ಯ ಮಟ್ಟದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಇದೆ. ಹಾಗೆಯೇ ಬ್ಯಾರಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲಿ ಬ್ಯಾರಿ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ. ಹೊರ ರಾಜ್ಯಗಳಲ್ಲಿ ಹಾಗೂ ವಿದೇಶಗಳಲ್ಲೂ ಇತ್ತೀಚೆಗೆ ಬ್ಯಾರಿ ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಬ್ಯಾರಿ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಎಲ್ಲ ಸಂಸ್ಥೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಬ್ಯಾರಿ ಸಮುದಾಯ ಖಂಡಿತವಾಗಿಯೂ ಮೇಲೆ ಬರುತ್ತದೆ ಎಂದು ಷಂಶುದ್ದೀನ್ ಅಭಿಪ್ರಾಯಪಟ್ಟರು.