ಮಡಿಕೇರಿ, ಏ. ೨೭: ಗೋಣಿಕೊಪ್ಪ-ಮೈಸೂರು ರಾಜ್ಯ ಹೆದ್ದಾರಿ ನಡುವಿನ ಪಂಚವಳ್ಳಿ ಬಳಿ ಹುಲಿ ದಾಳಿಗೆ ಹಸು ಬಲಿಯಾದ ಹಿನ್ನೆಲೆ ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಕೊಡಗಿನ ರಸ್ತೆ ಸಂಚಾರದ ಮೇಲೆ ಕೆಲಕಾಲ ವ್ಯತಿರಿಕ್ತ ಪರಿಣಾಮ ಬೀರಿತು.
ಪಂಚವಳ್ಳಿ ಸಮೀಪದ ಎಂ.ಎಸ್.ಆರ್ ಹಳ್ಳಿ ರಸ್ತೆ ಬದಿ ಹುಲಿ ದಾಳಿಗೆ ಹಸು ಮೃತಪಟ್ಟಿದೆ. ರಸ್ತೆ ಬದಿ ಮೂರು ಹುಲಿಗಳು ಸಂಚರಿಸುತ್ತಿರುವುದನ್ನು ಅಲ್ಲಿನ ಗ್ರಾಮಸ್ಥರು ನೋಡಿದ್ದು, ಒಂದು ಹುಲಿ ಹಸುವಿನ ಮೇಲೆ ದಾಳಿ ನಡೆಸಿ ರಸ್ತೆ ಬದಿಯಲ್ಲಿಯೇ ಕೊಂದು ಹಾಕಿದೆ ಎಂದು ಆಕ್ರೋಶಭರಿತರಾಗಿ ರಸ್ತೆ ಮಧ್ಯದಲ್ಲಿ ಟಯರಿಗೆ ಬೆಂಕಿ ಹಚ್ಚಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಕೆಲ ಸಮಯದ ನಂತರ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸರು ಆಗಮಿಸಿ ಪರಿಹಾರದ ಭರವಸೆ ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಡಲಾಯಿತು.