ಮಡಿಕೇರಿ, ಏ.೨೭: ನಗರದ ರಾಜದರ್ಶನ್ ಹೊಟೇಲ್ ಹಿಂಬದಿಯ ರಸ್ತೆಯಲ್ಲಿ ನೆಲೆಕಂಡಿರುವ ಶತಮಾನಗಳಿಂದ ದೈವಾರಾಧನೆಯಲ್ಲಿ ತೊಡಗಿಸಲ್ಪಟ್ಟಿರುವ ಶ್ರೀ ಗುರುಭ್ಯೋ ಮುನೀಶ್ವರ ದೇವಾಲಯದ ಪುನರ್ ಪ್ರತಿಷ್ಠಾ ಬ್ರಹ್ಮಕಲಶ ಕಾರ್ಯಕ್ರಮಗಳು ತಾ. ೨೯ ರಿಂದ ಮೇ ೧ ರವರೆಗೆ ನಡೆಯಲಿದೆ.

ಈ ಬಗ್ಗೆ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೇವಾಲಯ ಸಮಿತಿಯ ಪ್ರಮುಖರು, ಕ್ಷೇತ್ರದ ಪುನರ್‌ಪ್ರತಿಷ್ಠಾಪನಾ ಬ್ರಹ್ಮ ಕಲಶೋತ್ಸವ ಕೆಲಸಕ್ಕೆ ಪುತ್ತೂರಿನ ಎನ್. ಸ್ವಾಮಿನಾಥನ್ ಪಣಿಕರ್ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯನ್ನು ನೆರವೇರಿಸಿ ದಿನಾಂಕ ೨೫.೧೨.೨೦೨೨ ರಂದು ಬಾಲಾಲಯದಲ್ಲಿ ದೇವರನ್ನು ಪ್ರತಿಷ್ಠಾಪಿಸಲಾಯಿತು. ನಂತರದಲ್ಲಿ ದೇವಾಲಯದ ನಕಾಶೆಯನ್ನು ಅಷ್ಠಮಂಗಲ ಪ್ರಶ್ನೆಗೆ ಪೂರಕವಾದಂತಹ ಆಯಾಮವನ್ನು ಶಿಲ್ಪಿಗಳಾದ ಕಾಸರಗೋಡಿನ ಬಿದ್ರಡ್ಕ ರಮೇಶ್ ಕಾರಂತ್ ಸಿದ್ಧಪಡಿಸಿದರು. ಈ ನಕಾಶೆಯ ಪ್ರಕಾರದಲ್ಲಿ ಶಿಲ್ಪಿಗಳಾದ ಎ.ಪಿ. ಕರುಣಾಕರ ಅವರು ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಮಾಹಿತಿ ನೀಡಿದರು.

ದೈವಿ ಕಾರ್ಯಗಳಿಗೆ ದೇವಾಲಯದ ತಂತ್ರಿಗಳಾದ ವೇದಮೂರ್ತಿ ಉಲ್ಲಾಸ್ ಹನುಮಂಥ್ ಭಟ್ ಹಾಗೂ ವೇದಮೂರ್ತಿ ಗಣೇಶ್ ರಾಮಚಂದ್ರ ಭಟ್ ಅವರುಗಳು ಬ್ರಹ್ಮ ಕಲಶೋತ್ಸವದ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಿದ್ದಾರೆ.

ತಾ. ೨೯ ರಂದು ಬೆಳಿಗ್ಗೆ ೧೦:೧೫ಕ್ಕೆ ಸಂಕಲ್ಪ, ಗುರು ಗಣಪತಿ ಪೂಜೆ, ಸ್ವಸ್ತಿ ಪುಣ್ಯವಾಚನ, ಸ್ಥಳ ಶುದ್ಧಿ, ರುದ್ರಪಾಠ ಪಠಣ, ಸುದರ್ಶನ ಪೂರ್ವಕ ಪ್ರಾಯಶ್ಚಿತ ತಿಲ ಹೋಮ ನಡೆಯಲಿದೆ. ಸಂಜೆ ೭:೩೦ ಗಂಟೆಗೆ ಪ್ರಸನ್ನ ಪೂಜೆ ನೆರವೇರಲಿದೆ. ತಾ.೩೦ ರಂದು ಬೆಳಿಗ್ಗೆ ೭ ಗಂಟೆಗೆ ಫಲನ್ಯಾಸದ ಪೂರ್ವಕ ಮಹಾಪ್ರರ್ಥನೆ, ಮಹಾಸಂಕಲ್ಪ, ಗುರುಗಣಪತಿ ಪೂಜೆ, ಸ್ವಸ್ತಿ ಪುಣ್ಯವಾಚನ, ಪ್ರಸಾದ ಶುದ್ಧಿ, ಆಚಾರವರ್ಣ, ಗಣಪತಿಹೋಮ, ನಂತರ ಪ್ರಸಾದ ವಿತರಣೆ ನೆರವೇರಲಿದೆ. ಸಂಜೆ ೫ ಗಂಟೆಗೆ ಆದಿವಾಸ, ರಾಕ್ಷೆಗ್ನ ವಾಸ್ತು ಕಲಶ ಪ್ರತಿಷ್ಠಾಪನೆ ಪೂರ್ವಕ ಪೂಜೆ ಹೋಮ, ಕಲಶ ಸ್ಥಾಪನೆ, ತತ್ವ ಕಲಶ, ಆದಿವಾಸ ಕಲಶ ಸ್ಥಾಪನೆ, ರಾಸೊಗ್ನ ವಾಸ್ತು ಹೋಮ, ಪ್ರತಿಷ್ಠಾಮೂರ್ತಿಗಳಿಗೆ ಅದಿವಾಸ, ದಿಕ್ಷಾಲಕ ಬಲಿ, ಶಯನಾಧಿವಾಸ ನಂತರ ಪ್ರಸಾದ ವಿತರಣೆ ಜರುಗಲಿದೆ.

ಮೇ ೧ ರಂದು ಬೆಳಿಗ್ಗೆ ೬ ಗಂಟೆಗೆ ಗುರುಗಣಪತಿ ಪೂಜೆ, ಪುಣ್ಯವಾಚನೆ ಪ್ರತಿಷ್ಠಾ ಪೂರ್ವ ಹೋಮ ಬಳಿಕ ಬೆಳಿಗ್ಗೆ ೧೦:೨೦ ರಿಂದ ೧೧:೧೫ ರತನಕ ಗುರು ಮುನೀಶ್ವರ ಹಾಗೂ ಚಾಮುಂಡೇಶ್ವರಿ ದೇವಿಯ ಕಳಶ ಪೂರ್ವಕ ಪರಿವಾರ ದೇವತಾ ಬ್ರಹ್ಮಕಳಶೋತ್ಸವ ಪ್ರತಿಷ್ಠಾಪನೆ ನಡೆಯಲಿದೆ.

ಬೆಳಿಗ್ಗೆ ೧೧-೩೦ ಗಂಟೆಗೆ ಶಕ್ತಿ ಹೋಮ, ತತ್ವಕಲಾ ಹೋಮ, ರುದ್ರ ಹೋಮ, ಮಹಾಪೂರ್ಣಾಹುತಿ, ಪ್ರತಿಷ್ಠಾಪನಾ ದೇವತಾ ಮಹಾ ಕಲಶಾಭಿಷೇಕ ಅರ್ಚನೆ, ಮಹಾಪೂಜೆ, ಮಹಾನೈವೇದ್ಯ, ಮಹಾಮಂಗಳಾರತಿ, ಮಹಾ ಪ್ರಾರ್ಥನೆ, ದೇವತಾ ಪ್ರಸಾದ ವಿತರಣೆ, ಬ್ರಾಹ್ಮಣ ಪೂಜೆ ಹಾಗೂ ಬ್ರಹ್ಮಚಾರ್ಯ ಪೂಜೆ ಬಳಿಕ ಮಧ್ಯಾಹ್ನ ೧೨:೩೦ ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಹಾಗೂ ಪ್ರಸಾದ ವಿತರಣೆ ನೆರವೇರಲಿದೆ. ಅಂದು ಸಂಜೆ ೫:೩೦ ಗಂಟೆಗೆ ಆಶ್ಲೇಷ ಬಲಿ, ಸಂಜೆ ೬:೩೦ ಗಂಟೆಗೆ ರಂಗಪೂಜೆ ನಂತರ ಬ್ರಾಹ್ಮಣ ಆಶೀರ್ವಚನ ನೆರವೇರಲಿದೆ.

ಸುದ್ದಿಗೋಷ್ಠಿಯಲ್ಲಿ ದೇವಾಲಯ ಸಮಿತಿ ಗೌರವ ಸಲಹೆಗಾರ ಗಜರಾಜ್ ನಾಯ್ಡು, ದೇವಾಲಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಸ್ ರಂಜಿತ್ ಕುಮಾರ್, ಬ್ರಹ್ಮಕಲಶ ಸಮಿತಿ ಖಜಾಂಚಿ ಪವನ್ ಸಿ.ಎಚ್, ಶೋಭಾಯತ್ರೆ ಉಸ್ತುವಾgರು ರಾಕೇಶ್ ಆರ್, ಉತ್ಸವ ಸಮಿತಿ ಅಧ್ಯಕ್ಷ ಎಂ.ಎಲ್ ಸತೀಶ್, ಗೌರವ ಸಲಹೆಗಾರ ಗುಣಶೇಖರ್ ಹಾಜರಿದ್ದರು.