ಕೂಡಿಗೆ ಏ. ೨೭: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ ಗ್ರಾಮದಲ್ಲಿರುವ ಕಾಂಗ್ರೆಸ್ ಪಕ್ಷದ ನಾಯಕರು, ಉದ್ಯಮಿ, ಹೈನುಗಾರಿಕೆಯಲ್ಲಿ ಪ್ರಗತಿ ಹೊಂದಿರುವ ನಾಪಂಡ ಮುತ್ತಪ್ಪ ಮತ್ತು ನಾಪಂಡ ಮುದ್ದಪ್ಪ ರವರ ಹೈನುಗಾರಿಕೆ ಕ್ಷೇತ್ರದ ಆವರಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ೯. ನೇ ಸುತ್ತಿನ ಕಾಲುಬಾಯಿ ರೋಗದ ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ಗೌಡ ಅವರು ಹಸುಗಳಿಗೆ ಗೋಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಅಭಿಯಾನ ಕರಪತ್ರಗಳನ್ನು ಬಿಡುಗಡೆ ಮಾಡಿ ಮಾತಾನಾಡುತ್ತಾ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ರೈತರು ಹೈನುಗಾರಿಕೆಯಲ್ಲಿ ತೊಡಗಿರುವುದರಿಂದ ರೈತರು, ಗ್ರಾಮಸ್ಥರು ತಾವು ಸಾಗಿದ ಎಲ್ಲಾ ರಾಸುಗಳಿಗೆ ಇಲಾಖೆಯಿಂದ ಉಚಿತವಾಗಿ ನೀಡುವ ಕಾಲುಬಾಯಿ ರೋಗದ ಲಸಿಕೆಯನ್ನು ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ರಾಸುಗಳಿಗೆ ಹಾಕಿಸಬೇಕು, ಅವುಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ರೈತರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಕೆರೆ ನೀಡಿದರು.
ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮಾತಾನಾಡಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಮಸ್ಥರು ಹೈನುಗಾರಿಕೆಗೆ ಹೆಚ್ಚು ಒತ್ತನ್ನು ನೀಡಿರುತ್ತಾರೆ, ಅದೇ ರೀತಿಯಲ್ಲಿ ಹಸುಗಳ ಚಿಕಿತ್ಸೆ ಕಡೆಗೆ ಹೆಚ್ಚು ಗಮನ ಹರಿಸಿ, ತಮ್ಮ ಅರ್ಥಿಕ ಮಟ್ಟದ ಸುಧಾರಣೆಯತ್ತಾ ಗಮನ ಹರಿಸಿ ಉತ್ತಮ ಗುಣಮಟ್ಟದ ಹಾಲನ್ನು ಉತ್ಪಾದಿಸಲು ಸಹಕಾರವಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭ ದೊಡ್ಡ ಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿರುವ ಸಿದ್ದಲಿಂಗಪುರದ ಉದ್ಯಮಿ ನಾಪಂಡ ಮುತ್ತಪ್ಪ, ಮತ್ತು ನಾಪಂಡ ಮುದ್ದಪ್ಪ ಅವರನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿದರು. ಇಲಾಖೆಯ ವತಿಯಿಂದ ಹಸುಗಳಿಗೆ ಲಸಿಕಾ ಅಭಿಯಾನಕ್ಕೆ ಚಾಲನೆಯನ್ನು ಹಸುವಿಗೆ ಲಸಿಕೆ ನೀಡುವ ಮೂಲಕ ಪಶುವೈದ್ಯಾಧಿಕಾರಿ ಡಾ. ಶಿಂಧೆ ಆರಂಭ ಮಾಡಿದರು. ಜಿಲ್ಲೆಯ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮುನಿ ಇಲಾಖೆಗೆ ಸಂಬAಧಿಸಿದ ಸವಿಸ್ತಾರವಾದ ಮಾಹಿತಿಯನ್ನು ಗ್ರಾಮಸ್ಥರಿಗೆ ಒದಗಿಸಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ. ಲಿಂಗರಾಜ್ ದೊಡ್ಡಮುನಿ, ಕುಶಾಲನಗರ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ. ಸಂಜಯ ಕುಮಾರ್ ಆರ್. ಶಿಂಧೆ, ಡಾ. ಅಮೃತ್, ಹಸುಗಳ ಪರಿವೀಕ್ಷಕರಾದ ಎನ್ ಎಂ. ಸುರೇಶ್, ಪನೀರ್, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ರೈತರು ಭಾಗವಹಿಸಿದರು