ಕೂಡಿಗೆ, ಏ. ೨೬: ಹಾರಂಗಿ ಅಣೆಕಟ್ಟೆ ಹಿನ್ನೀರಿನಲ್ಲಿ ಹೂಳೆತ್ತುವ ಕಾಮಗಾರಿಯನ್ನು ನಡೆಸುವ ಸಿದ್ಧತೆಗಳು ನಡೆಯುತ್ತಿದ್ದು, ಅತೀ ಶೀಘ್ರದಲ್ಲಿ ಕಾಮಗಾರಿ ನಡೆಯಲಿದೆ ಎಂದು ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಐ.ಕೆ. ಪುಟ್ಟಸ್ವಾಮಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅನುಮತಿಯ ಆದೇಶದ್ವಯ ಅತಿ ಶೀಘ್ರದಲ್ಲಿ ಹೂಳೆತ್ತುವ ಕಾಮಗಾರಿಗೆ ಚಾಲನೆ ದೊರೆಯಲಿದೆ. ಹೂಳೆತ್ತುವ ಕಾಮಗಾರಿಗೆ ಅನುಮತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಐದಾರು ವರ್ಷಗಳ ನಿರಂತರ ಪ್ರಕ್ರಿಯೆ ಬಹುತೇಕ ಅಂತಿಮಗೊAಡಿದ್ದು, ಹಾರಂಗಿ ಅಣೆಕಟ್ಟೆಯಲ್ಲಿ ಹೂಳುತುಂಬಿದ್ದು ನೀರು ಶೇಖರಣೆ ಸಾಮರ್ಥ್ಯ ಕುಸಿದಿರುವ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದ ಮಳೆಗೆ ಅಣೆಕಟ್ಟೆ ಬಹುಬೇಗ ಭರ್ತಿಯಾಗುತ್ತಿರುವುದು ಇದರಿಂದ ತಪ್ಪಲಿದೆ.
೨೦೧೮-೧೯ ರಲ್ಲಿ ಉಂಟಾಗಿದ್ದ ಪ್ರಾಕೃತಿಕ ವಿಕೋಪದಿಂದ ಹಾರಂಗಿ ಹಿನ್ನೀರಿನ ವ್ಯಾಪ್ತಿಯಲ್ಲಿ ಶೇಖರಣೆಗೊಂಡಿದ್ದ ಶಿಲ್ಟ್ ತೆರವು ಕಾಮಗಾರಿ ಯೋಜನೆ ಕಾವೇರಿ ನೀರಾವರಿ ನಿಗಮ ನಿಯಮಾನುಸಾರ ಅನುಮತಿ ಬಂದಿತ್ತು. ೨೦೧೯ರಲ್ಲಿ ಅಂದಾಜು ಪಟ್ಟಿ ಸಿದ್ಧಪಡಿಸಿ ೨೦೨೨-೨೩ರಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು. ೮.೮೦ ಲಕ್ಷ ಕ್ಯೂಬಿಕ್ ಮೀಟರ್ ಪ್ರಮಾಣದ ಶಿಲ್ಟ್ ತೆರವು ಆಗಲಿದೆ. ತೆರವು ಮಾಡುವ ಶಿಲ್ಟ್ ಸ್ಥಳಾಂತರಕ್ಕೆ ಬಸವನಹಳ್ಳಿ ಹಾಗೂ ಗರಗಂದೂರು ಸುತ್ತಮುತ್ತಲಿನ ಖಾಸಗಿ ಹಾಗೂ ಸರಕಾರಿ ಕ್ವಾರಿಗಳನ್ನು ಗುರುತಿಸಲಾಗಿದೆ. ಹಿನ್ನೀರಿನಿಂದ ತೆಗೆಯುವ ಶಿಲ್ಟ್ ಅನ್ನು ಕ್ವಾರಿಗಳಿಗೆ ತುಂಬಿಸಿ ವಿಲೇವಾರಿಗೊಳಿಸುವ ಯೋಜನೆ ಹೊಂದಲಾಗಿದೆ. ಇದಕ್ಕಾಗಿ ಈಗಾಗಲೇ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಕೂಡ ಪಡೆದುಕೊಳ್ಳಲಾಗುವುದು. ಇದರೊಂದಿಗೆ ಲೋಕೋಪಯೋಗಿ, ಅರಣ್ಯ, ನೀರಾವರಿ, ಕಂದಾಯ ಇಲಾಖೆಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಒಳಗೊಂಡ ಸಮಿತಿ ಸಮಗ್ರ ಪರಿಶೀಲನೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದ್ದು ಅಂತಿಮ ಆದೇಶಕ್ಕೆ ಎದುರು ನೋಡಲಾಗುತ್ತಿದೆ.
ಗೇಬಿಯನ್ ವಾಲ್
ಒಟ್ಟು ೧೩೦ ಕೋಟಿ ಕಾಮಗಾರಿಯ ಯೋಜನೆಯಲ್ಲಿ ಗೇಬಿಯನ್ ವಾಲ್ ನಿರ್ಮಾಣ, ಸೇತುವೆ, ಕಾಂಕ್ರೀಟ್ ತಡೆಗೋಡೆಗಳ ನಿರ್ಮಾಣ ಮತ್ತಿತರ ಯೋಜನೆಯ ಕಾಮಗಾರಿ ಕೈಗೊಳ್ಳಲಾಗಿದೆ. ಈ ಪೈಕಿ ೩೯ ಕೋಟಿ ಹೂಳೆತ್ತುವುದು, ೫೫ ಕೋಟಿ ವೆಚ್ಚದಲ್ಲಿ ಗೇಬಿಯನ್ ವಾಲ್ ನಿರ್ಮಾಣ ಪ್ರಮುಖ ಕಾಮಗಾರಿಯಾಗಿದೆ. ಪ್ರಮುಖ ಭೂಕುಸಿತ ಪ್ರದೇಶಗಳಾದ ಹಟ್ಟಿಹೊಳೆ, ನಂದಿಮೊಟ್ಟೆ, ಹಮ್ಮಿಯಾಲ ನದಿಗಳ ೪೨ ಕಿಮೀ ವ್ಯಾಪ್ತಿಯಲ್ಲಿ ಆಯ್ದ ೪.೫.ಕಿಮೀ ವ್ಯಾಪ್ತಿಯಲ್ಲಿ ಗೇಬಿಯನ್ ವಾಲ್ ನಿರ್ಮಾಣ ಕಾರ್ಯ ಈಗಾಗಲೇ ಪ್ರಗತಿಯಲ್ಲಿದೆ. ಕಳೆದ ೧.೫ ವರ್ಷಗಳಲ್ಲಿ ೨ ಕಿಮೀ ನಷ್ಟು ಗೇಬಿಯನ್ ವಾಲ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಭೂಕುಸಿತ ತಡೆಯಲು ಮಹಾರಾಷ್ಟç ಮಾದರಿಯ ಈ ಗೇಬಿಯನ್ ವಾಲ್ ನಿರ್ಮಾಣ ಯೋಜನೆ ಕೊಡಗಿನಲ್ಲಿ ಪ್ರಚಲಿತ ಪಡೆದುಕೊಳ್ಳುತ್ತಿದೆ. ಇದರೊಂದಿಗೆ ಮುಕ್ಕೋಡ್ಲು ಗ್ರಾಪಂ ವ್ಯಾಪ್ತಿಯಲ್ಲಿ ೧೦ ಕೋಟಿ ವೆಚ್ಚದಲ್ಲಿ ಕಾಂಕ್ರಿಟ್ ತಡೆಗೋಡೆ, ೧.೫ ಕೋಟಿ ವೆಚ್ಚದಲ್ಲಿ ಸಿಂಗಲ್ ಲೈನ್ ಸೇತುವೆ, ೭೫ ಲಕ್ಷ ವೆಚ್ಚದಲ್ಲಿ ತೂಗುಸೇತುವೆ ಕಾಮಗಾರಿ ಒಳಗೊಂಡಿದೆ ಎಂದು ಪುಟ್ಟಸ್ವಾಮಿ ತಿಳಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ