ಮಡಿಕೇರಿ, ಏ. ೨೫: ಗೌಡ ಕುಟುಂಬಗಳ ನಡುವಿನ ಹಗ್ಗಜಗ್ಗಾಟ ಪಂದ್ಯಾವಳಿಗೆ ಇಂದು ಮರಗೋಡಿನಲ್ಲಿ ಗಣ್ಯರು ಚಾಲನೆ ನೀಡಿದರು.

ಗೌಡ ಇವ್ನಿಂಗ್ ಸ್ಟಾರ್ ವತಿಯಿಂದ ಅಲ್ಲಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯಾಟ ರೋಚಕತೆ ಸೃಷ್ಟಿಸಿತು.

ಸುಮಾರು ೨೫ ಕುಟುಂಬಗಳು ಪಂದ್ಯಾಟದಲ್ಲಿ ಸೆಣಸಾಡಿದವು. ತಂಡದಲ್ಲಿ ಪುರುಷರು ಹಾಗೂ ಮಹಿಳೆಯರು ಒಟ್ಟಾಗಿ ಭಾಗವಹಿಸುವ ಅವಕಾಶವನ್ನು ನೀಡಲಾಗಿತ್ತು. ಅಂತಿಮವಾಗಿ ಉಳುವಾರು ಹಾಗೂ ಕುದುಪಜೆ ತಂಡಗಳು ತಾ. ೨೬ ರಂದು (ಇಂದು) ನಡೆಯಲಿರುವ ಫೈನಲ್ ಪಂದ್ಯಾಟಕ್ಕೆ ಅರ್ಹತೆ ಪಡೆದುಕೊಂಡವು. ಗೌಡ ಇವ್ನಿಂಗ್ ಸ್ಟಾರ್ ಅಧ್ಯಕ್ಷ ಕಟ್ಟೆಮನೆ ರೋಶನ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಗೌಡ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ತುಂತಜೆ ಗಣೇಶ್ ಪಂದ್ಯಾವಳಿಗೆ ಚಾಲನೆ ನೀಡಿದರು. ಕೊಡಗು ಗೌಡ ಸಮಾಜ ಅಧ್ಯಕ್ಷ ದಂಬೆಕೋಡಿ ಆನಂದ್, ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತೆ ಕಟ್ಟೆಮನೆ ಪ್ರೇಮಾ ಗಣೇಶ್, ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಂಗೀರ ಸತೀಶ್, ಭಾರತಿ ಗ್ಲೋಬಲ್ ಎಜುಕೇಷನಲ್ ಸೊಸೈಟಿ ಖಜಾಂಚಿ ಕಾನಡ್ಕ ಸಚ್ಚಿದಾನಂದ ಸೇರಿದಂತೆ ಇನ್ನಿತರ ಪ್ರಮುಖರು, ಆಯೋಜಕರು ಉಪಸ್ಥಿತರಿದ್ದರು.

ತಾ. ೨೫ ರಂದು (ಇಂದು) ಗೌಡ ಇವ್ನಿಂಗ್ ಸ್ಟಾರ್ ವತಿಯಿಂದ ನಡೆಯುತ್ತಿರುವ ಗೌಡ ಕೌಟುಂಬಿಕ ಕ್ರಿಕೆಟ್ ಪಂದ್ಯಾಟದ ಸೆಮಿಫೈನಲ್ಸ್ ಪಂದ್ಯ ಕೂಡ ನಡೆಯಲಿದ್ದು, ಬೆಳಿಗ್ಗೆ ೯.೩೦ಕ್ಕೆ ಉಳುವಾರನ-ಕುಡೆಕಲ್ಲು ನಡುವೆ ಹಣಾಹಣಿ ನಡೆಯಲಿದೆ. ೧೧.೩೦ಕ್ಕೆ ಪರ್ಲಕೋಟಿ ಹಾಗೂ ಸಣ್ಣಜನ ನಡುವೆ ಪೈಪೋಟಿ ಏರ್ಪಡಲಿದೆ. ಬಳಿಕ ಅಂತಿಮ ಪಂದ್ಯ ನಡೆಯಲಿದೆ. ಇದರೊಂದಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದೆ.