ಚೆಟ್ಟಳ್ಳಿ, ಏ. ೨೫: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ (ಅಟಿಕ್) ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪರಿವರ್ತನೆಯ ಹೊಸ ವೇದಿಕೆಯಾಗಿ ಹೊರಹೊಮ್ಮಿದೆ. ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ-ಬೆAಗಳೂರು ವತಿಯಿಂದ ಅಭಿವೃದ್ಧಿ ಪಡಿಸಲ್ಪಟ್ಟ ನವೀನ ಕೃಷಿ ತಂತ್ರಜ್ಞಾನಗಳು ಮತ್ತು ಮೌಲ್ಯ ವರ್ಧಿತ ಉತ್ಪನ್ನಗಳು ಇಲ್ಲಿ ರೈತರಿಗೆ ಲಭ್ಯವಾಗುತ್ತಿವೆ.

ಈ ಅಟಿಕ್ ಕೇಂದ್ರವು ರೈತರಿಗೆ ಅಗತ್ಯವಾದ ಕೃಷಿ ಮಾಹಿತಿ, ತಂತ್ರಜ್ಞಾನ ಹಾಗೂ ಗುಣಮಟ್ಟದ ಉತ್ಪನ್ನಗಳನ್ನು ಒಂದೇ ಸ್ಥಳದಲ್ಲಿ ಒದಗಿಸುವ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಉತ್ತಮ ಗುಣಮಟ್ಟದ ತರಕಾರಿ ಮತ್ತು ಹೂವಿನ ಬೀಜಗಳು, ಅರ್ಕಾ ಸೂಕ್ಷö್ಮಜೀವಿಗಳ ಮಿಶ್ರಣ, ವಿಶೇಷ ಗೊಬ್ಬರಗಳು, ಕೀಟನಾಶಕ ಲೇಪನ, ಡೀಕಂಪೊಸರ್ ಹಾಗೂ ಕೋಕೋಪಿಟ್ ಸೇರಿದಂತೆ ಅನೇಕ ಕೃಷಿ ಅವಶ್ಯಕ ವಸ್ತುಗಳು ಇಲ್ಲಿ ದೊರೆಯುತ್ತಿವೆ. ಇದರ ಜೊತೆಗೆ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳು ರೈತರ ಗಮನ ಸೆಳೆಯುತ್ತಿವೆ. ಹಲಸಿನ ಬೀಜದ ಚಾಕಲೇಟ್ ಮತ್ತು ಬಿಸ್ಕಟ್, ಬಾಳೆಹಣ್ಣಿನ ಪಾಸ್ತಾ, ಬಾಳೆಗಿಡದ ದಿಂಡಿನ ಜ್ಯೂಸ್, ಬಾಳೆ ಹಾಗೂ ಅಂಜೂರ ಮಿಶ್ರಣದ ಸಿಹಿ, ನೇರಳೆ ಹಣ್ಣುಣ್ಣಿನ ಬೈಟ್‌ಗಳು ಸೇರಿದಂತೆ ಹಲವು ಉತ್ಪನ್ನಗಳು ಕೃಷಿಗೆ ಹೊಸ ಆದಾಯದ ಮಾರ್ಗಗಳನ್ನು ತೆರೆಯುತ್ತಿವೆ. ಕೇಂದ್ರದಲ್ಲಿ ಉತ್ಪಾದನೆಯಾಗುವ ಬೀಜಗಳು ಮತ್ತು ಸಸಿಗಳು ನೇರವಾಗಿ ರೈತರಿಗೆ ಲಭ್ಯವಾಗುವುದರಿಂದ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಿದ್ದು, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಪಡೆಯಲು ಸಾಧ್ಯವಾಗುತ್ತಿದೆ.

ಕೇಂದ್ರದ ಮುಖ್ಯಸ್ಥರಾದ ಡಾ. ಮುರುಳಿಧರ್ ಬಿ.ಎಂ ಅವರು ಮಾಹಿತಿ ನೀಡಿ, ಇಲ್ಲಿ ಲಭ್ಯವಿರುವ ಎಲ್ಲಾ ಉತ್ಪನ್ನಗಳು ವೈಜ್ಞಾನಿಕ ಸಂಶೋಧನೆ ಆಧಾರಿತವಾಗಿದ್ದು, ರೈತರ ಉತ್ಪಾದನೆ ಮತ್ತು ಆದಾಯ ಹೆಚ್ಚಿಸಲು ಸಹಕಾರಿ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಚೆಟ್ಟಳ್ಳಿಯ ಅಟಿಕ್ ಕೇಂದ್ರವು ವೈಜ್ಞಾನಿಕ ಕೃಷಿ, ತಂತ್ರಜ್ಞಾನ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಸಮನ್ವಯದಿಂದ ರೈತರ ಆರ್ಥಿಕ ಬೆಳವಣಿಗೆಗೆ ಹೊಸ ದಿಕ್ಕನ್ನು ನೀಡುತ್ತಿದೆ.