ಐಗೂರು, ಏ. ೨೫: ಐಗೂರು ಗ್ರಾಮಸ್ಥರು ಸ್ಮಶಾನ ಸೌಲಭ್ಯವಿಲ್ಲದೆ ಮಾನವೀಯ ಸಂಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಮದಲ್ಲಿ ವ್ಯಕ್ತಿ ಮರಣ ಹೊಂದಿದಾಗ ಸ್ವ-ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲು ಅವಕಾಶವಿಲ್ಲದೆ ಶವವನ್ನು ದೂರದ ಕಿರುಗಂದೂರು ಗ್ರಾಮ ಪಂಚಾಯಿತಿಯ ಜಾಗಕ್ಕೆ ವಾಹನದಲ್ಲಿ ಹೊತ್ತೊಯ್ಯುವ ದುಃಖಕರ ಪರಿಸ್ಥಿತಿ ಹಲವು ದಶಕಗಳಿಂದ ಮುಂದುವರೆದಿದೆ.

ವ್ಯಕ್ತಿಗಳು ಸಾವನ್ನಪ್ಪಿದಾಗ ಅವರ ಅಂತ್ಯಕ್ರಿಯೆಯು ಸ್ವ ಗ್ರಾಮದಲ್ಲೇ ಗೌರವಯುತವಾಗಿ ನಡೆಯಬೇಕಾಗಿದೆ. ಆದರೆ ಬಡ ಕೂಲಿ ಕಾರ್ಮಿಕರು ಹೆಚ್ಚಾಗಿ ವಾಸಿಸುವ ವಿಜಯನಗರ, ನರ್ಸರಿ ರಸ್ತೆ ಮತ್ತು ಕಬ್ಬಿಣ ಸೇತುವೆ ವ್ಯಾಪ್ತಿಯ ಐಗೂರು ಗ್ರಾಮದಲ್ಲಿ ಅಂತ್ಯಕ್ರಿಯೆಯAತಹ ಮೂಲಭೂತ ಹಕ್ಕು ಇಲ್ಲದಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.

ಕಿರಗಂದೂರು ಗ್ರಾಮ ಪಂಚಾಯಿತಿಯ ಭಾಗದಲ್ಲಿ ಅಂತ್ಯಕ್ರಿಯೆ ನಡೆಸುತ್ತಿದ್ದರೂ ಆ ಸ್ಮಶಾನವು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಸ್ಥಳಾವಕಾಶ ನೀಡಿದ ಕಿರಗಂದೂರು ಗ್ರಾಮ ಪಂಚಾಯಿತಿ ಮತ್ತು ಗ್ರಾಮಸ್ಥರು ಅಭಿನಂದನಾರ್ಹರು. ಐಗೂರು ಗ್ರಾಮದ ಸುತ್ತಮುತ್ತ ಇರುವ ಸ್ಥಳವನ್ನು ಸರ್ಕಾರ ಇದುವರೆಗೂ ಅಧಿಕೃತ ಸ್ಮಶಾನವಾಗಿ ಘೋಷಿಸಿಲ್ಲ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಸ್ಮಶಾನ ಭೂಮಿಗೆ ದಾಖಲೆ ದೊರೆತರೆ ಸಂಘ ಸಂಸ್ಥೆಗಳ ಸಹಕಾರದಿಂದ ಕಡಿಮೆ ವೆಚ್ಚದ ಚಿತಾಗಾರ, ಸರ್ಕಾರದ ಅನುದಾನ, ತಡೆಗೋಡೆ, ಸೇರಿದಂತೆ ಸುಸಜ್ಜಿತ ರುದ್ರಭೂಮಿ ನಿರ್ಮಾಣ ಸಾಧ್ಯವಿದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಶವದ ದಹನಕ್ಕಾಗಿ ಕಟ್ಟಿಗೆಗಳಿಗೂ ಅಂಗಲಾಚಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದಲ್ಲಿ ಚಿತೆಗೆ ಬೆಂಕಿ ಹಚ್ಚಿದ ಬಳಿಕ ಗಾಳಿ ಮಳೆಯಿಂದ ಬೆಂಕಿಯನ್ನು ಕಾಪಾಡಲು ಕೊಡೆ ಹಾಗೂ ಪ್ಲಾಸ್ಟಿಕ್ ಹೊದಿಕೆ ಹಿಡಿದು ನಿಂತಿರುವ ದೃಶ್ಯಗಳು ವ್ಯವಸ್ಥೆಯ ವೈಫಲ್ಯವನ್ನು ಬಯಲು ಮಾಡುತ್ತಿವೆ.

ಸುಮಾರು ೫೦ ವರ್ಷಗಳ ಹಿಂದೆಗ್ರಾಮದಲ್ಲಿ ಯಾರಾದರು ಮರಣ ಹೊಂದಿದಾಗ ಐಗೂರು ನರ್ಸರಿ ರಸ್ತೆಯ ಭಾಗದ “ಚೆಂಡು ಬಾಣೆ” ಎಂಬ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯುತ್ತಿತ್ತು ಎಂದು ಗ್ರಾಮದ ಹಿರಿಯ ನಾಗರಿಕರು ಈಗಲೂ ನೆನಪಿಸಿಕೊಳ್ಳುತ್ತಾರೆ. ಆದರೆ ನಂತರ ಈ ಭೂಮಿಯಲ್ಲಿ ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಐಗೂರು ಸ್ಪೆöÊಸಸ್ ಬೋರ್ಡ್ ಕಾರ್ಯಾಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ೨೦೧೫ರಲ್ಲಿ ಐಗೂರು ಗ್ರಾಮದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಪಿ ದಿನೇಶ್ ನೇತೃತ್ವದಲ್ಲಿ ಐಗೂರು ಗ್ರಾಮ ಪಂಚಾಯಿತಿ ಕಛೇರಿ ಮುಂಭಾಗದಲ್ಲಿ ಅಣುಕು ಶವಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿತ್ತು.

ಗ್ರಾಮ ಪಂಚಾಯಿತಿಗಳು ಗ್ರಾಮಕ್ಕೆ ಸ್ಮಶಾನ ಭೂಮಿ ಒದಗಿಸಲು ಸರಕಾರಕ್ಕೆ ಮನವಿ ಸಲ್ಲಿಸಿದರೆ ಸರ್ಕಾರ ತಕ್ಷಣ ಕ್ರಮ ಕೈಗೊಂಡು ಐಗೂರು ಗ್ರಾಮದಲ್ಲೇ ಖಾಯಂ ಸ್ಮಶಾನ ಭೂಮಿ ಒದಗಿಸಿದರೆ ಗ್ರಾಮಸ್ಥರ ಸಮಸ್ಯೆ ಪರಿಹಾರವಾಗಬಹುದು. - ಸುಕುಮಾರ್ ಎಂ.ಎ ಐಗೂರು