ಮಡಿಕೇರಿ, ಏ. ೨೫: ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ. ರಾಜ್‌ಕುಮಾರ್ ಅವರು ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದು, ಕನ್ನಡ ನಾಡಿನ ಧ್ರುವತಾರೆ ಆಗಿದ್ದಾರೆ ಎಂದು ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಡಾ. ರಾಜ್‌ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಹಾಗೂ ಡಾ. ರಾಜ್‌ಕುಮಾರ್ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಡಾ. ರಾಜ್‌ಕುಮಾರ್ ಅವರು ಕನ್ನಡ ನಾಡಿನಲ್ಲಿ ಹೊಸ ಅಲೆ ಸೃಷ್ಟಿಸಿ, ಕನ್ನಡ ನಾಡು, ನುಡಿ, ಭಾಷೆ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದರು. ನಿವೃತ್ತ ಶಿಕ್ಷಕ ಉ.ರಾ. ನಾಗೇಶ್ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ, ಡಾ. ರಾಜ್‌ಕುಮಾರ್ ಅವರು ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಇಂದಿಗೂ ಸಹ ನಾಡಿನ ಜನರ ಮನದಲ್ಲಿದ್ದಾರೆ.

ಮನಸ್ಸು ಮತ್ತು ದೇಹ ಗುಡಿಯಾಗಬೇಕು. ಮಾತು ನುಡಿಯಾಗಬೇಕು ಎಂಬAತೆ ಡಾ. ರಾಜ್‌ಕುಮಾರ್ ಅವರು ತಮ್ಮ ಜೀವಿತಾವಧಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಹೇಳಿದರು.

ಕೊಡಗು ಜಾನಪದ ಪರಿಷತ್ತು ಜಿಲ್ಲಾ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ ಡಾ. ರಾಜ್‌ಕುಮಾರ್ ಅವರ ಸರಳತೆ, ಕನ್ನಡ ಭಾಷೆಯ ಮೇಲಿನ ಪ್ರೀತಿ, ಸಂಸ್ಕೃತಿಯ ಕೊಡುಗೆಯಿಂದ ಡಾ. ರಾಜ್‌ಕುಮಾರ್ ಅವರನ್ನು ‘ಅಣ್ಣಾವ್ರು’ ಎಂದು ಕರೆಯುತ್ತಾರೆ. ಡಾ. ರಾಜ್‌ಕುಮಾರ್ ಅವರು ಸಾಮಾಜಿಕ ಕಳಕಳಿಯ ಚಲನಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಮೇರು ಪರ್ವತವಾಗಿ ಹೆಸರು ಮಾಡಿದ್ದಾರೆ ಎಂದರು.

ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ, ಡಾ. ರಾಜ್‌ಕುಮಾರ್ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜೊತೆ ಕೈಜೋಡಿಸಿ ಕಾರ್ಯಕ್ರಮ ಆಯೋಜಿಸಬೇಕೆಂದು ತೀರ್ಮಾನಿಸಲಾಗಿತ್ತು, ಅದರಂತೆ ಆಯೋಜಿಸಲಾಗಿದೆ ಎಂದರು. ತಹಶೀಲ್ದಾರ್ ಶ್ರೀಧರ್ ಮಾತನಾಡಿ, ಡಾ. ರಾಜ್‌ಕುಮಾರ್ ಅವರ ಚಲನಚಿತ್ರಗಳ ಹಾಡುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದರು. ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಡಿವೈಎಸ್‌ಪಿ ಸೂರಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ನಗರಸಭೆ ಮಾಜಿ ಅಧ್ಯಕ್ಷೆ ಲತಾ ಬಂಗೇರ, ಪ್ರಮುಖರಾದ ಸಂಪತ್ ಕುಮಾರ್, ಅಂಬೆಕಲ್ ನವೀನ್, ಜಯಕುಮಾರ್, ಜಯಲಕ್ಷಿö್ಮ, ಕಿಗ್ಗಾಲು ಗಿರೀಶ್ ಇತರರು ಇದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಸಮರ್ಥ ಕನ್ನಡಿಗರು ಬಳಗದ ಅಧ್ಯಕ್ಷೆ ಜಯಲಕ್ಷಿö್ಮ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ನೇತೃತ್ವದಲ್ಲಿ, ಡಾ. ರಾಜ್‌ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಪ್ರಯುಕ್ತ ಡಾ. ರಾಜ್‌ಕುಮಾರ್ ಅವರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.

ಲೋಕೇಶ್ ಸಾಗರ್, ಕುಶಾಲನಗರದ ಸಂಜಯ್, ಮಮತ, ಸತೀಶ್ ಮತ್ತು ಸುಗಂಧಿ, ಬಸವರಾಜು, ಸುಪ್ರಿತಾ, ಬಿ.ಜಿ. ಅನಂತಶಯನ, ಸುಮನ್, ಸತೀಶ್ ಸೇರಿದಂತೆ ಸುಮಾರು ೨೮ಕ್ಕೂ ಹೆಚ್ಚು ಗಾಯಕರು ಡಾ. ರಾಜ್‌ಕುಮಾರ್ ಅವರು ಹಾಡಿರುವ ಹಾಡುಗಳನ್ನು ಹಾಡಿದರು. ಉ.ರಾ. ನಾಗೇಶ್ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಕುಶಾಲನಗರ ಕನ್ನಡ ಸಿರಿ ಸ್ನೇಹ ಬಳಗ ವತಿಯಿಂದ ಕೊಡಗು ಜಾನಪದ ಪರಿಷತ್ತು ಅಧ್ಯಕ್ಷ ಬಿ.ಜಿ. ಅನಂತಶಯನ, ಉ.ರಾ. ನಾಗೇಶ್, ಸಾಹಿತಿ ಕಿಗ್ಗಾಲು ಗಿರೀಶ್, ಮಣಜೂರು ಮಂಜುನಾಥ್, ಜಯಲಕ್ಷಿö್ಮ, ಚಂದ್ರಶೇಖರ್ ಅವರನ್ನು ಇದೇ ಸಂದರ್ಭ ಸನ್ಮಾನಿಸಿದರು.