ಮಡಿಕೇರಿ, ಏ. ೨೪: ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ ರಾಜ್ಯ ಹಾಗೂ ರಾಷ್ಟçವ್ಯಾಪಿಯಲ್ಲಿಯೇ ಹೆಸರುವಾಸಿಯಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಹೋಮ್‌ಸ್ಟೇ ಹಾಗೂ ರೆಸಾರ್ಟ್ಗಳಿವೆ. ಆದರೆ ಕಳೆದ ಹಲವು ತಿಂಗಳುಗಳಿAದ ಪ್ರವಾಸೋದ್ಯಮ ಇಲಾಖೆಯಲ್ಲಿ ಉಪನಿರ್ದೇಶಕರ ಹುದ್ದೆ ಖಾಲಿ ಇದ್ದು, ಇಲಾಖೆ ಮೂಲಕ ಆಗಬೇಕಿರುವ ಕೆಲಸಗಳಿಗೆ ತೊಡಕಾಗುತ್ತಿದ್ದು, ತಕ್ಷಣ ಡಿ.ಡಿ ನೇಮಕ ಮಾಡುವಂತೆ ಜಿಲ್ಲಾ ಹೋಂಸ್ಟೇ ಅಸೋಸಿಯೇಷನ್ ಒತ್ತಾಯಿಸಿದೆ. ಜಿಲ್ಲೆಯಲ್ಲಿನ ಅನಧಿಕೃತ ಹೋಮ್‌ಸ್ಟೇಗಳ ಮೇಲೆ ಕ್ರಮ ಕೈಗೊಳ್ಳಲು ಸೂಕ್ತ ನಿಯಮ ರೂಪಿಸಲೂ ಈ ಸಂದರ್ಭ ಅಸೋಸಿಯೇಷನ್ ಪದಾಧಿಕಾರಿಗಳು ಆಗ್ರಹಿಸಿದರು.

ಈ ಸಂಬAಧ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅಸೋಸಿಯೇಷನ್ ಜಿಲ್ಲಾಧ್ಯಕ್ಷೆ ಮೋಂತಿ ಗಣೇಶ್ ಅವರು, ಪ್ರವಾಸೋದ್ಯಮ ಇಲಾಖೆಯಲ್ಲಿ ಉಪನಿರ್ದೇಶಕರೇ ಇಲ್ಲ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೃತ್ತಿಯಲ್ಲಿರುವವರಿಗೆ ಯಾವುದೇ ಮಾರ್ಗದರ್ಶನ ಇಲ್ಲವಾಗಿದ್ದು, ಇಲಾಖೆಯಲ್ಲಿ ಸಿಬ್ಬಂದಿಗಳೂ ಇಲ್ಲದೆ ಕಷ್ಟವಾಗುತ್ತಿದೆ ಎಂದರು.

ಅಧಿಕೃತ ಸ್ಟೇಗಳ ನೋಂದಣಿಗೆ ಹಲವಾರು ನಿಯಮಗಳಿವೆ. ಇದೀಗ ಈ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ಮಾಡಬಹುದಾಗಿದ್ದು, ಜಿಲ್ಲೆಯಲ್ಲಿ ನವೀಕರಣಕ್ಕೆ ಬಾಕಿ ಇದ್ದ ೩೦೦ ಹೋಂಸ್ಟೇಗಳ ಪೈಕಿ ೧೪೦ ರಷ್ಟು ನವೀಕರಣವಾಗಿದ್ದು, ಶೀಘ್ರದಲ್ಲಿ ಉಳಿದವುಗಳ ನವೀಕರಣ ಪೂರ್ಣವಾಗಲಿದೆ ಎಂದು ಮೋಂತಿ ಗಣೇಶ್ ಹೇಳಿದರು.

ಅನಧಿಕೃತ ಹೋಮ್‌ಸ್ಟೇಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಕೊಡಗು ಜಿಲ್ಲೆಯಲ್ಲಿ ಅನಧಿಕೃತ ಹೋಂಸ್ಟೇಗಳು ಅಧಿಕ ಸಂಖ್ಯೆಯಲ್ಲಿವೆ. ಸರಕಾರವು ಇಂತಹ ಹೋಂಸ್ಟೇಗಳ ವಿರುದ್ಧ ಕ್ರಮಕ್ಕೆ ನಿಯಮ ರೂಪಿಸಬೇಕು. ಪೊಲೀಸ್ ಇಲಾಖೆಗೆ ಸೂಚನೆ ನೀಡುವ ಮೂಲಕ ಇಂತಹ ಸ್ಟೇಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಸೋಸಿಯೇಷನ್ ಪ್ರಮುಖರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಒಟ್ಟು ೨,೪೭೦ ಹೋಮ್‌ಸ್ಟೇಗಳು ನೋಂದಣಿಯಾಗಿವೆ. ಉಳಿದ ೨,೦೦೦ಕ್ಕೂ ಮಿಗಿಲು ಸ್ಟೇಗಳು ನೋಂದಣಿ ಆಗದೆ ಕಾರ್ಯಚರಿಸುತ್ತಿವೆ ಎಂದು ಅಸೋಸಿಯೇಷನ್ ಮಾಜಿ ಅಧ್ಯಕ್ಷ ಕೆ.ಎಂ ಕರುಂಬಯ್ಯ ಆರೋಪಿಸಿದರು.

ಕೊಡಗು ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. ಆದರೆ ಇಲ್ಲಿ ಪ್ರವಾಸಿ ಮಾಹಿತಿ ಕೇಂದ್ರ ಇಲ್ಲವಾಗಿದ್ದು ಕೆಲ ಪ್ರವಾಸಿಗರು ಸೂಕ್ತ ಮಾರ್ಗದರ್ಶನವಿಲ್ಲದೆಎಲ್ಲೆಲ್ಲೋ ಹೋಗುತ್ತಾರೆ. ಬಸ್-ಸ್ಟಾö್ಯಂಡ್ ಇತ್ಯಾದಿ ಕಡೆ ಕೆಲವರು ಇಂತಹ ಪ್ರವಾಸಿಗರನ್ನು ಗುರಿಯಾಗಿಸಿ ಅನಧಿಕೃತ ಹೋಮ್‌ಸ್ಟೇಗಳೆಡೆಗೆ ಕರೆದೊಯ್ಯುತ್ತಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದರು.

ಹೋಂ ಸ್ಟೇ ಅಸೋಸಿಯೇಷನ್ ಉಪಾಧ್ಯಕ್ಷ ನವೀನ್ ಅಂಬೆಕಲ್ ಅವರು ಮಾತನಾಡಿ, ವಿದೇಶಿ ಪ್ರವಾಸಿಗರು ಹೋಮ್‌ಸ್ಟೇಗೆ ಬಂದಲ್ಲಿ ಸಿ ಫಾರ್ಮ್ ಕಡ್ಡಾಯ. ಹೋಂ ಸ್ಟೇ ಅವರು ಇದನ್ನು ಕಡ್ಡಾಯವಾಗಿ ಭರ್ತಿಮಾಡಿ ೨೪ ಗಂಟೆಗಳೊಳಗೆ ಪೊಲೀಸ್ ಇಲಾಖೆಗೆ ಕೊಡಬೇಕು ಎಂದರು.

ಅಸೋಸಿಯೇಷನ್ ಕಾರ್ಯದರ್ಶಿ ಮೀನಾ ಕಾರ್ಯಪ್ಪ ಅವರು ಮಾತನಾಡಿ, ಪ್ರತಿ ವರ್ಷ ಅಸೋಸಿಯೇಷನ್ ಸದಸ್ಯರು ಸೇರಿ ಸಭೆ ಮಾಡಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತೇವೆ. ಕುಟ್ಟ ಹೋಂಸ್ಟೇಯಲ್ಲಿ ನಡೆದ ಘಟನೆ ದುರದೃಷ್ಟಕರ ಎಂದರು.

ಅಸೋಸಿಯೇಷನ್ ಮಾಜಿ ಅಧ್ಯಕ್ಷ ಮದನ್ ಸೋಮಯ್ಯ ಹಾಜರಿದ್ದರು.