ಮಡಿಕೇರಿ, ಏ. ೨೩: ಕೊಡವ ಕುಟುಂಬಗಳ ನಡುವೆ ಹಾಕಿ, ಕ್ರಿಕೆಟ್ ಪಂದ್ಯಾವಳಿಯAತೆ ಕಳೆದ ನಾಲ್ಕು ವರ್ಷಗಳಿಂದ ಅಧಿಕ ಕುಟುಂಬಗಳು ಪಾಲ್ಗೊಳ್ಳುವ ಸಾಹಸಮಯ ಕ್ರೀಡೆಯೂ ಆಗಿರುವ ಕೌಟುಂಬಿಕ ಕೇರ್‌ಬಲಿ ನಮ್ಮೆ (ಹಗ್ಗಜಗ್ಗಾಟ) ಸ್ಪರ್ಧೆ ಇಂದು ಶುಭಾರಂಭಗೊAಡಿತು.
ಐದನೇ ವರ್ಷದ ಕೇರ್‌ಬಲಿ ನಮ್ಮೆ ಕ್ರೀಡೆಯನ್ನು ಚೀಯಕಪೂವಂಡ ಕುಟುಂಬಸ್ಥರು ಆಯೋಜಿಸಿದ್ದಾರೆ. ಕೊಡವ ಟಗ್ ಆಫ್ ವಾರ್ ಅಕಾಡೆಮಿ ಸಹಕಾರದೊಂದಿಗೆ ಈ ಬಾರಿ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಮೈದಾನದಲ್ಲಿ ನಡೆಯುತ್ತಿದ್ದು, ತಾ. ೨೬ರ ತನಕ ನಡೆಯಲಿದೆ. ಈ ಬಾರಿಯ ಕ್ರೀಡಾಕೂಟವಾದ ಚೀಯಕಪೂವಂಡ ಕಪ್‌ಗೆ ೧೮೯ ಪುರುಷರ ತಂಡಗಳು, ೮೫ ಮಹಿಳಾ ತಂಡಗಳು ಹಾಗೂ ವಿಶೇಷವಾಗಿ ೧೬ರ ವಯೋಮಿತಿಯೊಳಗಿನ ಮಕ್ಕಳಿಗೆ ಏರ್ಪಡಿಸಿರುವ ಸ್ಪರ್ಧೆಗೆ ೨೨ ಕುಟುಂಬ ತಂಡಗಳು ಭಾಗವಹಿಸಲಿವೆ.
ಇಂದು ನಾಪೋಕ್ಲುವಿನಲ್ಲಿ ಹಗ್ಗಜಗ್ಗಾಟ ಕ್ರೀಡಾನಮ್ಮೆಗೆ ವರ್ಣರಂಜಿತ ಚಾಲನೆ ನೀಡಲಾಯಿತು. ನಾಪೋಕ್ಲು ಪೊನ್ನಾಡ್ ಬಳಿಯಿಂದ ಚೀಯಕಪೂವಂಡ ಕುಟುಂಬಸ್ಥರು, ತವರು ಮನೆ ಹುಡುಗಿಯರು, ಬಂಧುಗಳು, ಸ್ಥಳೀಯ ಜನರು ಸೇರಿ ಸಾಂಪ್ರದಾಯಿಕ ಧಿರಿಸಿನಲ್ಲಿ ಕೆಪಿಎಸ್ ಮೈದಾನದ ತನಕ ಸಾಂಸ್ಕೃತಿಕ ಮೆರವಣಿಗೆ ನಡೆಸಿದರು. ತಳಿಯತಕ್ಕಿ ಬೊಳಕ್, ಒಡ್ಡೋಲಗ, ದುಡಿಕೊಟ್ಟ್ ಪಾಟ್ ಸಹಿತವಾಗಿ ಹೆಜ್ಜೆ ಹಾಕಲಾಯಿತು. ಬಳಿಕ ಮೈದಾನದಲ್ಲಿ ಕೊಡವ ಟಗ್ ಆಫ್ ಅಕಾಡೆಮಿ ಸೇರಿದಂತೆ ಚೀಯಕಪೂವಂಡ ಕುಟುಂಬ ಹಾಗೂ ಈ ಹಿಂದಿನ ನಾಲ್ಕು ವರ್ಷ ಈ ಕ್ರೀಡೆ ಆಯೋಜಿಸಿರುವ ಕುಟುಂಬಗಳ ಧ್ವಜಾರೋಹಣ ನೆರವೇರಿಸಲಾಯಿತು.
ಪ್ರದರ್ಶನ ಪಂದ್ಯ
ಉದ್ಘಾಟನಾ ಸಮಾರಂಭದ ಅಂಗವಾಗಿ ಈಶ್ವರ ಇಗ್ಗುತ್ತಪ್ಪ ಎ ಹಾಗೂ ಈಶ್ವರ ಇಗ್ಗುತ್ತಪ್ಪ ಬಿ ಹೆಸರಿನ ತಂಡಗಳ ನಡುವೆ ಪ್ರದರ್ಶನ ಪಂದ್ಯ ಏರ್ಪಡಿಸಲಾಗಿತ್ತು. ರೋಚಕ ಸ್ಪರ್ಧೆಯಲ್ಲಿ ಈಶ್ವರ ಇಗ್ಗುತ್ತಪ್ಪ ಎ ತಂಡ ಜಯಗಳಿಸಿತು.
ಜಿಲ್ಲೆಯ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಒತ್ತು - ಪೊನ್ನಣ್ಣ
ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಕ್ರೀಡಾಪಟುಗಳಿದ್ದರೂ ಮೂಲಭೂತ ಸಮಸ್ಯೆಗಳಿಂದ ನಿರೀಕ್ಷಿತ ಸಾಧನೆ ಸಾಧ್ಯವಿಲ್ಲದಂತಾಗಿದೆ. ಆದುದರಿಂದ ಕ್ರೀಡಾಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುವುದಾಗಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಹೇಳಿದರು.
೫ನೇ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ (ಕೇರ್ ಬಲಿ ನಮ್ಮೆ) ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಾಕಿ ಮತ್ತು ಕ್ರಿಕೆಟ್ ನಂತೆ ಹಗ್ಗಜಗ್ಗಾಟ ಪಂದ್ಯಾಟವು ಯಶಸ್ವಿಯಾಗಿ ೫ನೇ ವರ್ಷಕ್ಕೆ ತಲುಪಿದೆ. ಮುಂದಿನ ವರ್ಷಗಳಲ್ಲಿ ಇದು ಕೂಡ ದಾಖಲೆ ಸೃಷ್ಟಿಸಲಿ ಎಂದು ಹಾರೈಸಿದರು.
ಜಿಲ್ಲೆಯ ಕ್ರೀಡಾ ಅಭಿವೃದ್ಧಿಗೆ ಹೆಚ್ಚಿನ ಪ್ರಯತ್ನ ಮಾಡುತ್ತಿರುವುದಾಗಿ ಹೇಳಿದ ಅವರು ಪೊನ್ನಂಪೇಟೆಯಲ್ಲಿ ಬಾಲಕ -ಬಾಲಕಿಯರಿಗೆ ವಸತಿ ಶಾಲೆ, ಟರ್ಫ್ ಮೈದಾನದ ನವೀಕರಣ ೩.೫೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಅದರೊಂದಿಗೆ ಅಲ್ಲಿನ ಶೌಚಾಲಯ, ನೀರಿನ ಟ್ಯಾಂಕ್ , ಮತ್ತಿತರ ಕಾಮಗಾರಿಗಳಿಗೆ ಸರಕಾರದಿಂದ ೩.೫೦ ಕೋಟಿ ರೂ. ಮಂಜೂರು ಮಾಡಲಾಗಿದೆ.
ಬಾಡಗ ಗ್ರಾಮದಲ್ಲಿ ಕ್ರೀಡಾ ಸಂಕೀರ್ಣಕ್ಕೆ ೧೧.೫೦ ಎಕರೆ ಜಾಗ ಗುರುತಿಸಲಾಗಿದ್ದು, ಸರಕಾರದಿಂದ ೩೦ ಕೋಟಿ ರೂ., ರಾಜ್ಯಸಭಾ ಸದಸ್ಯ ಅಜಯ್ ಮಕಾನ್ ಅವರ ೧೫ ಕೋಟಿ ರೂ. ಅನುದಾನದಿಂದ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕೊಡವರು ಶೌರ್ಯಕ್ಕೆ ಹೆಸರುವಾಸಿ. ಕೇರ್ ಬಲಿ ನಮ್ಮೆಯಲ್ಲಿ ತಾಕತ್ತು ಪ್ರದರ್ಶನವಾಗುತ್ತದೆ. ಎಲ್ಲಾ ಕ್ರೀಡೆಗಳಿಗೂ ತಾಕತ್ತು ಹಾಗೂ ಜಾಣ್ಮೆ ಬೇಕು. ಕೊಡಗು ಕ್ರೀಡೆಯ ತವರೂರು. ಆದರೆ, ಇಲ್ಲಿ ಕ್ರೀಡಾಭಿವೃದ್ಧಿಗೆ ಮೂಲಭೂತ ಸೌಲಭ್ಯಗಳ ಕೊರತೆಯಿದೆ. ಇಲ್ಲಿ ಕ್ರೀಡಾ ಸಂಕೀರ್ಣದ ಅವಶ್ಯಕತೆಯಿದೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶಾಸಕರಿಗೆ ಅಭಿನಂದಿಸಿದರು. ೪ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಕಾರ್ಯಕ್ರಮದಲ್ಲಿ ಟಗ್ ಆಫ್ ವಾರ್ ಅಕಾಡೆಮಿ ಅಧ್ಯಕ್ಷ ಪೊನ್ನೋಲತಂಡ ಕಿರಣ್ ಪೊನ್ನಪ್ಪ
ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಸದಸ್ಯ ಚೀಯಕಪೂವಂಡ ಕೆ.ಬೋಪಣ್ಣ ಮಾತನಾಡಿದರು. ವೇದಿಕೆಯಲ್ಲಿ ಚೀಯಕಪೂವಂಡ ಕುಟುಂಬದ ಪಟ್ಟೆದಾರ ಚಿಟ್ಟಿಯಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡAಡ ನಾಣಯ್ಯ, ಕೆ.ಪಿ.ಎಸ್ ಶಾಲಾ ಪ್ರಾಂಶುಪಾಲೆ ಮೇದುರ ವಿಶಾಲ್, ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್, ಬೊಟ್ಟೋಳಂಡ ಗಣಪತಿ, ಚೆಟ್ಟಂಗಡ ರವಿ ಸುಬ್ಬಯ್ಯ, ಬಾಳೆಕುಟ್ಟಿರ ರಾಯಪ್ಪ ಮಂದಣ್ಣ, ಪೊನ್ನೊಲತಂಡ ಸೋಮಣ್ಣ, ಅಶೋಕ್, ಮತ್ತಿತರರು ಇದ್ದರು. ರಾಷ್ಟçಗೀತೆಯೊಂದಿಗೆ ಆರಂಭಗೊAಡ ಸಭಾ ಕಾರ್ಯಕ್ರಮದಲ್ಲಿ ಸ್ವರ ತಂಗಮ್ಮ ಪ್ರಾರ್ಥನೆ, ಚೀಯಕಪೂವಂಡ ಕುಟುಂಬದ ಅಧ್ಯಕ್ಷ ಅಪ್ಪಚ್ಚು ಸ್ವಾಗತ, ಮಾಳೇಟಿರ ಶ್ರೀನಿವಾಸ್ ನಿರೂಪಿಸಿ, ಚೀಯಕಪೂವಂಡ ಸುಶ್ಮಾ ಅಯ್ಯಪ್ಪ ವಂದಿಸಿದರು. ಮೆರವಣಿಗೆಯಲ್ಲಿ ಚೀಯಕಪೂವಂಡ ಮುತ್ತಪ್ಪ, ಬೋಪಣ್ಣ, ಜೋಯಪ್ಪ, ರಾಜಾ ಸೋಮಯ್ಯ ದುಡಿಕೊಟ್ಟ್ ಪಾಟ್ ಪ್ರದರ್ಶಿಸಿದರು. ಚೀಯಕಪೂವಂಡ ಹಗ್ಗಜಗ್ಗಾಟ ಸಮಿತಿ ಉಪಾಧ್ಯಕ್ಷ ಚೀಯಕಪೂವಂಡ ಕಟ್ಟಿ ಮಂಜುನಾಥ್, ನವೀನ್ ನಾಚಪ್ಪ, ಸಿ.ಎ.ನಾಚಪ್ಪ, ಸತೀಶ್ ದೇವಯ್ಯ, ಸುನಿಲ್ ಮಾಚಯ್ಯ, ಸಚಿನ್ ಮುತ್ತಪ್ಪ, ಪ್ರಕಾಶ್ ಮಂದಣ್ಣ, ಸಚಿನ್ ಪೂವಯ್ಯ, ಶಂಭು ನಂಜಪ್ಪ, ಸೇರಿದಂತೆ ಕುಟುಂಬದ ಎಲ್ಲಾ ಹಿರಿಯರು, ಕಿರಿಯರು, ಹಗ್ಗಜಗ್ಗಾಟ ಅಕಾಡೆಮಿ ಪ್ರಮುಖರು ಪಾಲ್ಗೊಂಡಿದ್ದರು.
ಜನಪದ ಪ್ರದರ್ಶನ
ಕಾರ್ಯಕ್ರಮದಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕತ್ತಿಯಾಟ್, ಕೋಲಾಟ್ ನೃತ್ಯಪ್ರದರ್ಶನ ನಡೆಯಿತು.