ಸೋಮವಾರಪೇಟೆ, ಏ. ೨೨: ವಿದ್ಯಾರ್ಥಿಗಳ ವ್ಯಕ್ತಿತ್ವದ ಸಂಪೂರ್ಣ ವಿಕಾಸದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ದೊಡ್ದದು. ಮಾನವೀಯ ಮೌಲ್ಯಗಳನ್ನು ಬಿತ್ತುವಲ್ಲಿ ಇದೊಂದು ಉತ್ತಮ ವೇದಿಕೆಯಾಗಿದೆ ಎಂದು ಬಿಇಒ ಕೃಷ್ಣಪ್ಪ ತಿಳಿಸಿದರು.

ಸಮೀಪದ ಯಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಒಂದು ವಾರದಿಂದ ನಡೆದ ಬಿ.ಟಿ. ಚನ್ನಯ್ಯ ಗೌರಮ್ಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಅವಧಿಯಲ್ಲಿ ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಿ ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಚ್. ಹುಚ್ಚೇಗೌಡ ಮಾತನಾಡಿ, ಎನ್‌ಎಸ್‌ಎಸ್‌ನಲ್ಲಿ ಪಾಲ್ಗೊಳ್ಳುವ ಮೂಲಕ ಸಾಕಷ್ಟು ವಿದ್ಯಾರ್ಥಿಗಳ ಜೀವನ ಸುಧಾರಿಸಿದೆ. ಸರ್ಕಾರಿ ಶಾಲಾ ಕಾಲೇಜುಗಳನ್ನು ಉಳಿಸುವಲ್ಲಿ, ಗುಣಮಟ್ಟದ ಸುಧಾರಣೆಯಲ್ಲಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಅಧಿಕಾರಿಗಳ ಪಾತ್ರ ಬಹುಮುಖ್ಯವಾಗಿವೆ ಎಂದರು. ವೇದಿಕೆಯಲ್ಲಿ ಶಿಬಿರದ ಸಂಚಾಲಕ ಎಂ.ಎಸ್. ಶಿವಮೂರ್ತಿ, ಪ್ರಾಧ್ಯಾಪಕರಾದ ವಿನೋದ್, ಎಚ್.ಜೆ. ಜವರ ಉಪಸ್ಥಿತರಿದ್ದರು.